ADVERTISEMENT

ನಗದು ರಹಿತ ವಹಿವಾಟು: ನೇಕಾರರಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 5:15 IST
Last Updated 19 ಏಪ್ರಿಲ್ 2017, 5:15 IST

ನಿಡಗುಂದಿ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ನಗದುರಹಿತ ವಹಿವಾಟನ್ನು ನೇಕಾರರು ಸೇರಿದಂತೆ ದೇಶದ ಕೋಟ್ಯಾಂತರ ಜನತೆ ನಡೆಸುವ ಮೂಲಕ ಅಕ್ರಮಕ್ಕೆ ಮಂಗಳಹಾಡ ಬೇಕು ಎಂದು ಕೇಂದ್ರ ಕುಡಿಯುವ ನೀರು ನೈರ್ಮಲ್ಯ ಸಚಿವ ರಮೇಶ ಜಿಗಜಿಣಗಿ ಹೇಳಿದರು. ಕೇಂದ್ರ ಜವಳಿ ಮಂತ್ರಾಲಯ, ಬೆಂಗಳೂರಿನ ನೇಕಾರರ ಸೇವಾ ಕೇಂದ್ರದ ಸಹಯೋಗದಲ್ಲಿ ಸಮೀಪದ ಗೊಳಸಂಗಿಯ ಪ್ರಾಥಮಿಕ ನೇಕಾರರ ಸಹಕಾರಿ ಉತ್ಪಾದಕ ಸಂಘದ ಒಳ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ಆಯೋಜಿಸಲಾಗಿದ್ದ ಭೀಮ್ ಆಫ್ ಯೋಜನೆ ಮಾಹಿತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೇಕಾರರ ಪ್ರಗತಿಗಾಗಿ ಸಾಕಷ್ಟು ಯೋಜನೆ ರೂಪಿಸುತ್ತಿದ್ದರೂ ಅದನ್ನು ತಿಳಿದುಕೊಂಡು ಪಡೆದುಕೊಳ್ಳುವಲ್ಲಿ ನೇಕಾರರು ಹಿಂದೇಟು ಹಾಕುತ್ತಿರುವದು ವಿಪರ್ಯಾಸ. ಅಧಿಕಾರಿಗಳೂ ಸಹ ಅಗತ್ಯ ಮಾಹಿತಿಯನ್ನು ಕಾಲಕಾಲಕ್ಕೆ ತಿಳಿಸಲು ನಿರ್ಲಕ್ಷ ವಹಿಸುತ್ತಿರುವದು ಖಂಡನಾರ್ಹ. ಅಧಿಕಾರಿ -ನೇಕಾರ ರೆಲ್ಲರೂ ತಂತಮ್ಮ ಧೋರಣೆಗಳನ್ನು ಬದಲಾಯಿಸಿಕೊಂಡು ನೇಯ್ಗೆ ಕಾಯಕ್ಕೆ ಉತ್ತೇಜನ ನೀಡಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಅವನತಿ ಯತ್ತ ಮುಖ ಮಾಡಿದ ನೇಕಾರಿಕೆ ಹೊರತುಪಡಿಸಿ ಬೇರೆ ಉದ್ಯೋಗದತ್ತ ಮುಖಮಾಡುವ ನೇಕಾರ ಮಹಿಳೆ ಮತ್ತು ಪಜಾ ಜನಾಂಗದವರಿಗೆ ಕೇಂದ್ರ ಸರ್ಕಾರದ ‘ಸ್ಟ್ಯಾಂಡ್ ಆಫ್ ಇಂಡಿಯಾ’ ಯೋಜನೆಯಡಿ ನೀಡುವ ಸಾಲ ಸೌಲಭ್ಯ ಪಡೆದು ತಮ್ಮ ಬದುಕು ಸಾಕಾರ ಮಾಡಿಕೊಳ್ಳಬೇಕು ಎಂದರು.

ADVERTISEMENT

ರಾಜ್ಯ ನೇಕಾರ ಸೇವಾ ಕೇಂದ್ರದ ಜವಳಿ ಅಧೀಕ್ಷಕ ಮೋಹನ ಸಾಗರ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಎಂ.ಜಿ. ಕೊಣ್ಣೂರ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎನ್. ಶಿವಸ್ವಾಮಿ, ನೇಕಾರ ಸಂಘದ ಅಧ್ಯಕ್ಷ ಎಸ್.ಪಿ.ಕಲಾದಗಿ ಮಾತನಾಡಿದರು.ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗರಾಜ್  ದೇಸಾಯಿ, ನಿಡಗುಂದಿ ನೇಕಾರರ ಸಂಘದ ಅಧ್ಯಕ್ಷ ಎಸ್.ಕೆ. ಗೌಡರ, ಟಿ.ಟಿ. ಹಗೆದಾಳ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೀತಾ ಗುಡದಿನ್ನಿ, ತಾಲ್ಲೂಕು  ಪಂಚಾಯ್ತಿ ಸದಸ್ಯ ಅಮೃತ ಯಾದವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.