ADVERTISEMENT

ನಮ್ಮದು ‘ಕಾಮ್‌ ಕಿ ಬಾತ್‌’: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2017, 9:21 IST
Last Updated 27 ನವೆಂಬರ್ 2017, 9:21 IST
ಸಿಂದಗಿ ತಾಲ್ಲೂಕು ಕಲಕೇರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆನಂದ ದೊಡ್ಡಮನಿ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿದರು ಸಚಿವ ಎಂ.ಬಿ. ಪಾಟೀಲ ಇದ್ದಾರೆ
ಸಿಂದಗಿ ತಾಲ್ಲೂಕು ಕಲಕೇರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆನಂದ ದೊಡ್ಡಮನಿ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿದರು ಸಚಿವ ಎಂ.ಬಿ. ಪಾಟೀಲ ಇದ್ದಾರೆ   

ಕಲಕೇರಿ (ಸಿಂದಗಿ): ‘ಪ್ರಧಾನಮಂತ್ರಿಯವರದು ಮನ್‌ ಕಿ ಬಾತ್‌ ಆದರೆ, ನಮ್ಮದು ಕಾಮ್‌ ಕಿ ಬಾತ್‌. ನಮ್ಮ ಕೆಲಸವೇ ನಮಗೆ ಶ್ರೀರಕ್ಷೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲ್ಲೂಕಿನ ಕಲಕೇರಿಯಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಭ್ರಷ್ಟಾಚಾರದ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲ. ಬಿಜೆಪಿಯವರಿಗೆ ತಾಕತ್ತಿದ್ದರೆ ಒಂದೇ ವೇದಿಕೆಗೆ ಬಂದು ಚರ್ಚೆ ನಡೆಸಲಿ’ ಎಂದು ಅವರು ಸವಾಲು ಹಾಕಿದರು.

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ‘ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಈಗ ಡೋಂಗಿಯಾತ್ರೆಯಲ್ಲಿದ್ದಾರೆ. ಅವರಿಗೆ ಸ್ವಾಭಿಮಾನ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಫೌಂಡೇಷನ್ ಸಂಚಾಲಕ ಆನಂದ ದೊಡ್ಡಮನಿಯವರು ಮುಖ್ಯಮಂತ್ರಿಯವರಿಗೆ ಶ್ರೀಕೃಷ್ಣ ಶೈಲಿಯ ಬೆಳ್ಳಿಯ ಕಿರೀಟ ತೊಡಿಸಿ ಸನ್ಮಾನಿಸಿದರು. ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರಿಗೆ ಬಸವಣ್ಣ ಶೈಲಿಯ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿದರು. ಗಡಿನಾಡು ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಸುಭಾಸ ಛಾಯಾಗೋಳ ಅವರು ಬೆಳ್ಳಿಗದೆ ನೀಡಿ ಸಿದ್ದರಾಮಯ್ಯನವರನ್ನು ಗೌರವಿಸಿದರು. ವಿಧಾನಪರಿಷತ್ ಮಾಜಿ ಸದಸ್ಯ ಪ್ರಕಾಶ ರಾಠೋಡ ಮಾತನಾಡಿದರು.

ದೇವರಹಿಪ್ಪರಗಿ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ,ಮುಂಬರುವ ಚುನಾವಣೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಿಂಗನಗೌಡ ಪಾಟೀಲ ಮುಖ್ಯಮಂತ್ರಿ ಪಾದ ಮುಟ್ಟಿ ನಮಸ್ಕರಿಸಿದರು. ಕಾಂಗ್ರೆಸ್ ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ ಸಮಾವೇಶದಲ್ಲಿ ಗೈರಾಗಿದ್ದರು.

ಸಮಾವೇಶ ನಿಮಿತ್ತ ಬಿಂಜಲಬಾವಿ, ಅಸ್ಕಿ ಗ್ರಾಮಗಳಿಗೆ ಹೋಗುವ ರಸ್ತೆಯಲ್ಲಿ ಮಧ್ಯಾಹ್ನ 12 ರಿಂದ ಸಂಜೆ 6. 30 ವರೆಗೆ ವಾಹನ ಸಂಚಾರವನ್ನು ಪೋಲಿಸರು ಸ್ಥಗಿತಗೊಳಿಸಿದ್ದರಿಂದ ಜನರು ತೊಂದರೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.