ADVERTISEMENT

ಪಾಲಿಕೆ ಆಡಳಿತದ ವಿರುದ್ಧ ಜನಾಕ್ರೋಶ..!

ಡಿ.ಬಿ, ನಾಗರಾಜ
Published 19 ಸೆಪ್ಟೆಂಬರ್ 2017, 5:28 IST
Last Updated 19 ಸೆಪ್ಟೆಂಬರ್ 2017, 5:28 IST

ವಿಜಯಪುರ: ಮಹಾನಗರ ಪಾಲಿಕೆ ಆಡಳಿತದ ಕಾರ್ಯ ವೈಖರಿಗೆ ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗಿದೆ. ಅಧಿಕಾರಿ ಗಳು, ಜನಪ್ರತಿನಿಧಿಗಳ ವರ್ತನೆಗೆ ಕಟು ಟೀಕೆ ಕೇಳಿ ಬಂದಿದೆ.  ಪಾಲಿಕೆ ಸದಸ್ಯರು, ಅಧಿಕಾರಿಗಳು ಪರಸ್ಪರ ದೂರಿ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಇದರ ನಡುವೆ ಪರಿಸರ ಎಂಜಿನಿಯರ್ ಜಗದೀಶ ಮೂವರು ಸದಸ್ಯರ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಿದ್ದಾರೆ.

‘ನಗರದ ಅಭಿವೃದ್ಧಿಗೆ ಮುನ್ನುಡಿ ಬರೆಯುವ ಪಾಲಿಕೆಯ ಸಾಮಾನ್ಯ ಸಭೆ ಶುಕ್ರವಾರ ನಡೆಯಲಿಲ್ಲ ಎಂಬುದೇ ದುರ್ದೈವದ ಸಂಗತಿ. ನಾಲ್ಕು ಲಕ್ಷ ಜನರಿಗೆ ಎಸಗಿದ ಅನ್ಯಾಯ. ಅಪಮಾನ ಇದು’ ಎಂದು ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ ಆಕ್ರೋಶ ವ್ಯಕ್ತಪಡಿಸಿದರು. .

‘ನಗರದಲ್ಲಿ ಎಲ್ಲೆಡೆ ಕಳಪೆ ಕಾಮಗಾರಿ ನಡೆದಿವೆ. ಸಾಧಾರಣ ಮಳೆಗೆ ಎಲ್ಲ ರಸ್ತೆಗಳು ಗುಂಡಿ ಬಿದ್ದಿವೆ. ನೈಸರ್ಗಿಕ ಕರೆ ಪೂರೈಸಿಕೊಳ್ಳಲು ಶೌಚಾಲಯಗಳಿಲ್ಲ. ವಿಜಯಪುರಿಗರಿಗೆ ಕನಿಷ್ಠ ಸೌಲಭ್ಯ ಒದಗಿಸಲು ಪಾಲಿಕೆ ಆಡಳಿತದಿಂದ ಇದುವರೆಗೂ ಸಾಧ್ಯವಾಗಿಲ್ಲ. ಇಂತಹ ಸ್ಥಿತಿ ನಗರ ದಲ್ಲಿರು ವಾಗ ಮೂರ್ನಾಲ್ಕು ತಿಂಗಳಿ ಗೊಮ್ಮೆ ನಡೆಯುವ ಸಭೆಯಲ್ಲೂ ಅಭಿವೃದ್ಧಿ ಪರ ಚರ್ಚೆ ನಡೆಯದಿ ರುವುದು ನಗರದ ಜನರ ದೌರ್ಭಾಗ್ಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ವ್ಯವಸ್ಥಿತವಾಗಿ ಹಾಳುಗೆಡವಿದರು:  ‘ವಿಧಾನ ಪರಿಷತ್‌ ಸದಸ್ಯನಾಗಿ ಆಯ್ಕೆಯಾದ ಬಳಿಕ ಎರಡನೇ ಬಾರಿಗೆ ಸಭೆಗೆ ಬಂದಿದ್ದೇ. ನಾಲ್ಕೈದು ಕಾರ್ಪೊರೇಟರ್‌ಗಳ ಪತ್ರಿಕಾ ಪ್ರಚಾರದ ಹುಚ್ಚಿಗೆ ಸಭೆ ಹಾಳಾದರೆ, ಇನ್ನೂ ಕೆಲವರು ಉದ್ದೇಶಪೂರ್ವಕವಾಗಿ ಹಾಳು ಮಾಡಿದರು’ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ನನ್ನ ಆತ್ಮೀಯರು ಪಾಲಿಕೆ ಸಭೆಗೆ ಹೋಗುವೆ ಎಂದಿದ್ದಕ್ಕೆ ನೀವು ಅಲ್ಲಿಗೆ ಹೋಗಬ್ಯಾಡ್ರೀ. ಅದು ಮಾನ–ಮರ್ಯಾದೆ ಇಲ್ಲದವರ ಸಭೆ ಎಂದಿದ್ದರು. ಆದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಸಭೆಗೆ ಹಾಜರಾಗಿದ್ದೆ.

ಆರಂಭವೇ ಅಪಶಬ್ದದಿಂದ ಶುರುವಾಯ್ತು. ನಗರ ಶಾಸಕರಿಗೆ ಹಾಲಿ ಆಯುಕ್ತ ಬೇಕಿಲ್ಲ. ದಲಿತ ಮಹಿಳಾ ಮೇಯರ್‌ಗೆ ಸಹಕಾರ ನೀಡಬೇಕಾದ ಹಿರಿಯ ಸದಸ್ಯರೇ ಅಪಮಾನವಾಗುವ ರೀತಿ ನಡೆದುಕೊಂಡರು. ಅಜೆಂಡಾ ಪ್ರಕಾರ ಸಭೆ ನಡೆಯಲಿಲ್ಲ. ಇಂದಿನ ವಿದ್ಯಮಾನ ಅಕ್ಷರಶಃ ದುರ್ದೈವ’ ಎಂದು ಯತ್ನಾಳ ತಿಳಿಸಿದರು.

ಸ್ವಾಭಿಮಾನ ಕಳೆದುಕೊಳ್ಳಲ್ಲ: ನೌಕರರು ‘ಹಿಂದಿನಿಂದಲೂ ಸಹಿಸಿಕೊಂಡು ಬಂದಿದ್ದೆವು. ಕಾಯ್ದೆಯನುಸಾರ ಒಮ್ಮೆಯೂ ಸಾಮಾನ್ಯ ಸಭೆ ನಡೆದಿಲ್ಲ. ಅವಾಚ್ಯ, ಅಸಂಸದೀಯ ಪದ ಬಳಕೆ ಯಾಗಬಾರದು ಎಂಬುದು ಕಾಯ್ದೆ ಯಲ್ಲಿಯೇ ದಾಖಲಾಗಿದೆ.

ನಿಯಮಾವಳಿಯನುಸಾರ ಸಭೆ ನಡೆಸದಿರುವುದಕ್ಕೆ ಇಲಾಖೆಗೆ ಮೂರ್ನಾಲ್ಕು ಬಾರಿ ವರದಿ ನೀಡಿರುವೆ. ಅಧಿಕಾರಿಗಳಿಗೆ ನಿಂದಿಸುವುದು ಮಾನವ ಹಕ್ಕುಗಳ ಉಲ್ಲಂಘನೆ. ಇಂದಿನ ಸಭೆಯ ವಿಡಿಯೋ ದಾಖಲೆ ಗಳಿವೆ. ಇವನ್ನಿಟ್ಟುಕೊಂಡು ವಿವರವಾದ ವರದಿ ನೀಡುವೆ’ ಎಂದು ಪಾಲಿಕೆ ಆಯುಕ್ತ ಹರ್ಷಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿಧಿಗಳೇ ಪರಮೋಚ್ಚ. ಸದಸ್ಯರು ಕೈಗೊಳ್ಳುವ ನಿರ್ಣಯಗಳನ್ನು ಕಾನೂನಿನನ್ವಯ ಅನುಷ್ಠಾನ ಗೊಳಿಸು ವುದು ನಮ್ಮ ಕರ್ತವ್ಯ. ಸದಸ್ಯರ ಜತೆ ಹೊಂದಾಣಿಕೆಯಿಂದ ಕೆಲಸ ನಿರ್ವಹಿಸಲು ನಾವು ಸಿದ್ಧ. ಆದರೆ ಯಾವುದೇ ಕಾರಣಕ್ಕೂ ವೈಯಕ್ತಿಕ ನಿಂದನೆ ಸಹಿಸಲ್ಲ. ಸ್ವಾಭಿಮಾನ ಕಳೆದು ಕೊಳ್ಳಲ್ಲ’ ಎಂದು ಹರ್ಷಶೆಟ್ಟಿ ಹೇಳಿದರು.

ಕ್ಷಮೆಗೆ ಪಟ್ಟು: ‘ಸದಸ್ಯರಾದ ಮೈನುದ್ದೀನ್‌ ಬೀಳಗಿ, ಪರಶುರಾಮ ರಜಪೂತ, ರವೀಂದ್ರ ಲೋಣಿ ಅಸಂಸದೀಯ ಪದ ಬಳಸಿದ್ದಾರೆ. ಈ ಮೂವರು ಜಗದೀಶ ಬಳಿ ಕ್ಷಮೆ ಕೋರಿದ ಬಳಿಕವೇ ಮುಂದಿನ ಸಭೆಗೆ ನಾವು ಹಾಜರಾಗುತ್ತೇವೆ’ ಎಂದು ರಾಜ್ಯ ಪೌರ ಸೇವಾ ನೌಕರರ ಸಂಘದ ಜಿಲ್ಲಾ ಪದಾಧಿ ಕಾರಿ ಎನ್‌.ಆರ್.ಮಠ ತಿಳಿಸಿದರು.

‘ಪಾಲಿಕೆಯ ಬಹುತೇಕ ಸದಸ್ಯರು ನಮ್ಮ ಬಳಿ ಕಾನೂನು ಬಾಹಿರ ಕೆಲಸ ತರುತ್ತಾರೆ. ಸ್ಪಂದಿಸದಿದ್ದರೆ ಸಾಮಾನ್ಯ ಸಭೆಯಲ್ಲಿ ಟಾರ್ಗೆಟ್‌ ಮಾಡಿ ಬಾಯಿಗೆ ಬಂದಂತೆ ನಿಂದಿಸುತ್ತಾರೆ. ವಾರ್ಡ್‌ಗಳಲ್ಲಿ ಇನ್ನಿಲ್ಲದ ಕಿರಿಕಿರಿ ಹಚ್ಚುತ್ತಾರೆ. ನಮಗೂ ಇಷ್ಟು ದಿನ ಸಹಿಸಿ ಸಾಕಾಗಿತ್ತು. ಇದೀಗ ಗಟ್ಟಿ ನಿರ್ಧಾರ ಮಾಡಿದ್ದೇವೆ’ ಎಂದರು.\

‘ನಾಚಿಕೆಯಾಗಬೇಕು’ ಅಸಂಸದೀಯ ಶಬ್ದವೇ ?:ರಜಪೂತ ‘ನಮ್ಮ ಮುಖ್ಯ ಪ್ರಶ್ನೆ ಟ್ಯಾಕ್ಸಿ ಪಡೆಯುವ ಬದಲು ಖಾಸಗಿ ವಾಹನ ವನ್ನು ಬಾಡಿಗೆಗೆ ಪಡೆದಿದ್ದು ಏತಕ್ಕೆ ಎಂಬುದಾಗಿತ್ತು. ಈ ಸಂದರ್ಭ ಸಂಬಂಧಿಸಿದ ಅಧಿಕಾರಿಗೆ ನಿಮಗೆ ನಾಚಿಕೆಯಾಗಲ್ವೇ ಎಂದು ಸಹಜವಾಗಿ ಪ್ರಶ್ನಿಸಿದೆ. ಇದು ಅಸಂಸದೀಯ ಪದವೇ ?’ ಎಂದು ಸದಸ್ಯ ಪರಶುರಾಮ ರಜಪೂತ ಪ್ರತಿಕ್ರಿಯಿಸಿದರು.

‘ವಾಹನ ವಿಷಯಕ್ಕೆ ಸಂಬಂಧಿಸಿ ದಂತೆ ಎಳೆ ಎಳೆಯಾಗಿ ಪ್ರಶ್ನಿಸುತ್ತಿದ್ದಂತೆ ನಮ್ಮ ಅಕ್ರಮ ಹೊಂದಾಣಿಕೆ ಬಯಲಿಗೆ ಬೀಳುತ್ತದೆ ಎಂಬ ಭಯದಿಂದ ಆಯುಕ್ತರೇ ಅಧಿಕಾರಿಗಳನ್ನು ಸಭೆ ಯಿಂದ ಹೊರ ಕರೆದೊಯ್ದಿದ್ದು, ನಾಚಿಕೆ ಗೇಡಿನ ಸಂಗತಿಯಲ್ಲವೇ.  ಮೇಯರ್ ಆಸೀನರಾಗಿದ್ದರೂ, ಅನುಮತಿ ಪಡೆಯದೆ ಏಕಾಏಕಿ ಎಲ್ಲರನ್ನೂ ಎಬ್ಬಿಸಿ ಕೊಂಡು ಹೊರ ಹೋಗಿದ್ದು ಜನರಿಗೆ ಮಾಡಿದ ಅಪಮಾನವಲ್ಲವೇ’ ಎಂದು ರಜಪೂತ ಪ್ರಶ್ನಿಸಿದರು.

ತಪ್ಪು ಮುಚ್ಚಿಕೊಳ್ಳಲು ಆರೋಪ: ‘ಅಸಂಸದೀಯ ಪದ ಬಳಸಿದ್ದೇನೆ ಎಂದು ಎನ್‌.ಆರ್‌.ಮಠ ಹೇಳಿರುವುದು ಸತ್ಯಕ್ಕೆ ದೂರ. ಹಿಂದಿನ ಸಭೆಯಲ್ಲಿ ಈ ಅಧಿಕಾರಿ ಸದಸ್ಯೆ ಲಕ್ಷ್ಮೀ ಕನ್ನೊಳ್ಳಿ ಜತೆ ಕೇವಲವಾಗಿ ಮಾತನಾಡುವುದನ್ನು ಖಂಡಿಸಿ, ಸಭೆಯಲ್ಲೇ ಕ್ಷಮೆ ಕೇಳಿಸಿದ್ದೆ. ನಂತರ ಈ ಅಧಿಕಾರಿಯ ಹೆಸರು ಹೇಳಿ ಕೊಂಡು ಯುವಕನೊಬ್ಬ ನಮ್ಮ ವಾರ್ಡ್‌ ನಲ್ಲಿ ಕೆಲಸ ಮಾಡಿದ್ದರು. ಸರಿಯಾಗಿ ಮಾಡದಿದ್ದುದಕ್ಕೆ ತರಾಟೆಗೆ ತೆಗೆದು ಕೊಂಡಿದ್ದೆ. ಅಕ್ರಮ ಬಿಲ್‌ ಮಾಡಿಕೊಳ್ಳಲು ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನನ್ನ ಮೇಲೆ ದೂರಿರ ಬಹುದು’ ಎಂದು ರವೀಂದ್ರ ಲೋಣಿ ಹೇಳಿದರು.

* * 

ಆಯುಕ್ತರ ವರ್ಗಾವಣೆ ವಿಷಯ ಬಂದಾಗ ಬಸನಗೌಡರ ಜತೆ ನಾನೇ ಮುಂಚೂಣಿಯಲ್ಲಿ ನಿಂತು ವಿರೋಧಿಸಿದ್ದೆ. ತಪ್ಪು ಮಾಡಿದಾಗ ಹೇಳುವುದು ತಪ್ಪೇ
ಪರಶುರಾಮ ರಜಪೂತ
ಪಾಲಿಕೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.