ADVERTISEMENT

ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ ಸಲ್ಲ

30ನೇ ಶರಣ ಮೇಳದ ಚಿಂತನಗೋಷ್ಠಿ: ಮಾತೆ ಮಹಾದೇವಿ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಜನವರಿ 2017, 9:29 IST
Last Updated 12 ಜನವರಿ 2017, 9:29 IST
ಕೂಡಲಸಂಗಮ: ಇಂಗ್ಲಿಷ್‌ ಭಾಷೆಯನ್ನು ಕಲಿಯಿರಿ, ಆದರೆ ಪಾಶ್ಚಿಮಾತ್ಯರ ಸಂಸ್ಕಾರ ಬೇಡ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದರು.
 
ಕೂಡಲಸಂಗಮದಲ್ಲಿ ನಡೆದ 30ನೇ ಶರಣ ಮೇಳದ ಮೊದಲನೆ ದಿನದ ಚಿಂತನಗೋಷ್ಠಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಜಗತ್ತಿನಲ್ಲಿ ಬದುಕಲು ಇಂಗ್ಲಿಷ್‌ ಭಾಷೆಯನ್ನು ಕಲಿಯಿರಿ. ಅವರ ಸಂಸ್ಕಾರದಿಂದ ಸಮಾಜದ ಸ್ವಾಸ್ಥ್ಯ ಹಾಳಾಗುವುದು ಎಂದರು. 
 
ಮೊಬೈಲ್‌ ಬಳಕೆಯಿಂದ ಇಂದಿನ ಯುವ ಜನಾಂಗ ಹಾಳಾಗುತ್ತಿದೆ. ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನ ಕೊಡುತ್ತಿಲ್ಲ. ಅಧಿಕ ಪ್ರೇಮ ವಿವಾಹಗಳು ಆಗಿವೆ. ಅಧಿಕ ವಿಚ್ಛೇದನ ಪ್ರಕರಣಗಳೂ ಆಗಿವೆ. ಆದ್ದರಿಂದ ಪಾಲಕರು ಮಕ್ಕಳನ್ನು ಮೊಬೈಲ್‌ ಬಳಕೆಯಿಂದ ದೂರವಿಡುವ ಕಾರ್ಯ ಮಾಡಬೇಕು ಎಂದರು.
 
ಆದಿ ಪ್ರಮಥರ ಪೂಜೆಯನ್ನು ಧಾರವಾಡ ಅಕ್ಕಮಹಾದೇವಿ ಅನುಭಾವ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಮಾತನಾಡಿ,  ಆದರ್ಶ ಬಿಂಬಿಸುವ ಧಾರವಾಹಿಗಳನ್ನು ಮಹಿಳೆಯರು ನೋಡಬೇಕು. ಸಮಾಜ, ಕುಟುಂಬ ಒಡೆಯುವ ಧಾರವಾಹಿಯನ್ನು ಬೇಡ. ಇಂದು ಅಧಿಕ ಪ್ರಮಾಣದಲ್ಲಿ ಕುಟುಂಬ ಒಡೆಯುವ ಧಾರವಾಹಿಗಳೆ ಅಧಿಕವಾಗಿ ಪ್ರಸಾರವಾಗುತ್ತಿವೆ ಎಂದರು.
 
ಮುಖ್ಯ ಅಥಿತಿಯಾಗಿ ಬೆಂಗಳೂರಿನ ರೈಲ್ವೆ ಇಲಾಖೆ ಎಂಜಿನಿಯರ್‌ ಸಚ್ಚಿದಾನಂದ ಚಟ್ನಳ್ಳಿ ಮಾತನಾಡಿ, ವಚನ ಸಾಹಿತ್ಯಕ್ಕಿಂತ ಪರಿಪೂರ್ಣವಾದ ಸಾಹಿತ್ಯ ಜಗತ್ತಿನಲ್ಲಿ ಯಾವುದೂ ಇಲ್ಲ. ವಚನ ಸಾಹಿತ್ಯದಲ್ಲಿ ಜಗತ್ತಿನ ಎಲ್ಲ ಸಾಹಿತ್ಯ ವಿಚಾರಗಳು ಇವೆ. ಆದ್ದರಿಂದ ಪ್ರತಿಯೊಬ್ಬರೂ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು. ರಾಜ್ಯದ ಕೆಲವು ಮಠಾಧಿಪತಿಗಳು ಬಸವಣ್ಣನವರ ತತ್ವ ವಿಚಾರದ ಬದಲು ತಮ್ಮನ್ನೇ ತಾವು ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಬಸವ ಧರ್ಮ ಪೀಠ ಬಸವ ತತ್ವ ಪ್ರಸಾರದಲ್ಲಿ ಮುಖ್ಯ ಪಾತ್ರ ವಹಿಸಿದೆ. ಇಂದು ಮಠಾಧೀಶರಲ್ಲಿ ಅಧ್ಯಯನದ ಕೊರತೆ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತಿದೆ ಎಂದರು.
 
ಸಮಾರಂಭದ ಬಸವ ಧ್ವಜಾರೋಹಣವನ್ನು ವಿಜಯಪುರದ ನಿವೃತ್ತ ಕೃಷಿ ಅಧಿಕಾರಿ ಸಿ.ಬಿ.ಬೇವನೂರ ಮಾಡಿದರು. ಉದ್ಘಾಟನೆಯನ್ನು ಸಂಕೇಶ್ವರ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಡಾ.ಶಿವನಗೌಡ ಪಾಟೀಲ ಮಾಡಿದರು. ಸಮಾರಂಭದಲ್ಲಿ ಬೆಂಗಳೂರು ಬಸವ ಮಂಟಪದ ಮಾತೆ ಜ್ಞಾನೇಶ್ವರಿ, ಚಿತ್ರದುರ್ಗ ಬಸವ ಮಂಟಪದ ಮಾತೆ ದಾನೇಶ್ವರಿ, ಬೀದರ ಬಸವ ಮಂಟಪದ ಮಾತೆ ಸತ್ಯಾದೇವಿ, ಬೆಂಗಳೂರು ಬಸವ ಮಂಟಪದ ಬಸವಕುಮಾರ ಸ್ವಾಮೀಜಿ, ಚನ್ನಬಸವರಾಜ ಸ್ವಾಮೀಜಿ, ಸಂಗಮೇಶ್ವರ ಸ್ವಾಮೀಜಿ, ಕೊಪ್ಪಳ ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ವೀರಣ್ಣ ಲಿಂಗಾಯತ್, ರಾಷ್ಟ್ರೀಯ ಬಸವ ದಳದ ಪ್ರಧಾನ ಕಾರ್ಯದರ್ಶಿ ಕೆ.ವೀರೇಶ್, ಲಿಂಗಾಯತ ಧರ್ಮ ಮಹಾಸಭಾ ಅಧ್ಯಕ್ಷ ಕೆ.ಬಸವರಾಜ ಮುಂತಾದವರು ಇದ್ದರು.
 
ಚಂದ್ರಮ್ಮ ಸದಾನಂದ ಸ್ವಾಮಿ ಸ್ವಾಗತಿಸಿದರು, ಸುರೇಶ ಸ್ವಾಮಿ ನಿರೂಪಿಸಿ, ವಂದಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.