ADVERTISEMENT

ಪ್ರಚಾರ ಅಂತ್ಯಕ್ಕೆ ಎರಡು ದಿನ ಬಾಕಿ

ಎಪಿಎಂಸಿ ಚುನಾವಣೆ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಬಿರುಸುಗೊಂಡ ಪ್ರಚಾರ; ಮತ ಯಾಚನೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2017, 7:04 IST
Last Updated 10 ಜನವರಿ 2017, 7:04 IST
ವಿಜಯಪುರ: ಜಿಲ್ಲೆಯ ನಾಲ್ಕು ಎಪಿಎಂಸಿಗಳ ಚುನಾವಣೆ ಕಣ ರಂಗೇರಿದೆ. ಗ್ರಾಮೀಣ ಪರಿಸರದಲ್ಲಿ ರಾಶಿ ನಡುವೆಯೂ ಪ್ರಚಾರ ಬಿರುಸುಗೊಂಡಿದೆ.
 
ಇದೀಗ ರೈತರಿಗೆ ಬಿಡುವಿಲ್ಲದ ಕೆಲಸ. ರೈತರೇ ಮತದಾರರರಾಗಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆ ಮತದಾನವೂ ಇದೇ ಸಮಯದಲ್ಲಿ ನಡೆಯುತ್ತಿರುವುದು ಸ್ಪರ್ಧಿಗಳಲ್ಲಿ ತಳಮಳ ಸೃಷ್ಟಿಸಿದೆ.
 
ರೈತರನ್ನು ಮನವೊಲಿಸಿ ಮತದಾನ ದಿನವಾದ ಇದೇ 12ರ ಗುರುವಾರ ಮತಗಟ್ಟೆಗೆ ಕರೆ ತರುವುದೇ ಸಾಹಸದ ಕೆಲಸವಾಗಿ ಪರಿಣಮಿಸಲಿದೆ. ಈ ನಿಟ್ಟಿನಲ್ಲಿ ಸ್ಪರ್ಧಿಗಳ ತಂತ್ರಗಾರಿಕೆಯೂ ಬಿರುಸಿನಿಂದ ನಡೆದಿದೆ.
 
ರೈತರ ಸುತ್ತವೇ ಸ್ಪರ್ಧಿಗಳು ಗಿರಕಿ ಹೊಡೆಯುತ್ತಿದ್ದಾರೆ. ಪಕ್ಷಗಳು ನೇರವಾಗಿ ಸ್ಪರ್ಧಿಸದಿದ್ದರೂ; ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು, ನಾಲ್ಕು ಎಪಿಎಂಸಿಗಳ ಚುಕ್ಕಾಣಿ ಹಿಡಿಯಲು ಹರ ಸಾಹಸ ನಡೆಸುತ್ತಿವೆ. ಈ ಹಿಂದಿನ ಚುನಾವಣೆಗಳಲ್ಲಿ ಅಷ್ಟೇನೂ ಉತ್ಸಾಹ ತೋರದ ಪಕ್ಷದ ಮುಖಂಡರು ಇದೀಗ ಖುದ್ದು ಅಖಾಡಕ್ಕಿಳಿದಿದ್ದಾರೆ. ತಮ್ಮ ಬೆಂಬಲಿಗ ಪಡೆ ಬೆಂಬಲಿಸುವ ಜತೆ, ತಮ್ಮ ನಾಯಕತ್ವದ ಸಾಮರ್ಥ್ಯ ಪ್ರದರ್ಶನವನ್ನೂ ಪಣಕ್ಕಿಟ್ಟಿದ್ದಾರೆ.
 
ಜಿಲ್ಲೆಯ ಎಲ್ಲ ಶಾಸಕರು ಎಪಿಎಂಸಿ ಚುನಾವಣೆಯನ್ನು ತಮ್ಮ ಅಳಿವು–ಉಳಿವಿನ ಪ್ರಶ್ನೆಯಾಗಿ ಸ್ವೀಕರಿಸಿದ್ದಾರೆ. ಮತ ಕ್ಷೇತ್ರ ವ್ಯಾಪ್ತಿಯಲ್ಲೇ ಬೀಡು ಬಿಟ್ಟು ಹಳ್ಳಿ ಹಳ್ಳಿ ಸುತ್ತುತ್ತಿದ್ದಾರೆ. ಅಸಮಾಧಾನ ಶಮನಗೊಳಿಸಿ, ಬೆಂಬಲಿಗರ ಪರ ಮತ ಯಾಚಿಸುವ ದೃಶ್ಯಾವಳಿ ಗ್ರಾಮೀಣ ಪರಿಸರದಲ್ಲಿ ವ್ಯಾಪಕವಾಗಿ ಕಂಡು ಬರುತ್ತಿದೆ.
 
ಹೊಲಗಳತ್ತ ಚಿತ್ತ... ರಾಶಿಯ ಸಮಯ. ಮುಂಜಾನೆ ಚುಮುಚುಮು ಚಳಿ. ಮನೆಯಿಂದ ಹೊರ ಬರುವುದೇ ಕಷ್ಟ ಸಾಧ್ಯ. ರಾಶಿ ಆರಂಭವಾಗುವುದು ಬೆಳಿಗ್ಗೆ 10ರ ಬಳಿಕ. ಮುಸ್ಸಂಜೆವರೆಗೂ ಕಣದಲ್ಲೇ ರೈತರ ಬೀಡು.
 
ಮುಂಜಾನೆ–ಮುಸ್ಸಂಜೆ ಬಳಿಕ ರೈತ ಮತದಾರರ ಭೇಟಿಗೆ ಲಗ್ಗೆಯಿಟ್ಟು ಮನವೊಲಿಕೆಯಲ್ಲಿ ನಿರತರಾಗಿರುವ ಮುಖಂಡರು ಮಧ್ಯಾಹ್ನದ ವೇಳೆ, ಹಳ್ಳಿ ಗಳ ಮುಖಂಡರ ಜತೆ ರಹಸ್ಯ ತಂತ್ರ ಗಾರಿಕೆಗೆ ತೆರಳುವ ಹಾದಿಯ ನಡುವೆ ಕಣಗಳು ಸಿಕ್ಕರೆ, ಅಲ್ಲಿಗೂ ತೆರಳಿ ಮತ ಯಾಚಿಸುವ ದೃಶ್ಯ ಗೋಚರಿಸುತ್ತಿವೆ.
 
ರಾಶಿ ಮಾಡುವ ರೈತರಲ್ಲಿ ಯಾರಿಗೆ ಮತದಾನದ ಹಕ್ಕು ಇದೆ, ಇಲ್ಲ ಎಂಬುದು ಯಾರೊಬ್ಬರಿಗೂ ಗೊತ್ತಿರು ವುದಿಲ್ಲ. ವಿಧಿಯಿಲ್ಲದೆ ಅಲ್ಲಿಗೆ ಹೋಗಿದ್ದಕ್ಕೆ ಕೈ ಮುಗಿದು ಮತ ಬೇಡಿ, ಮುಂದೆ ತೆರಳುತ್ತೇವೆ. ನಮ್ಮ ಮತ ಇಲ್ಲ ಎಂದು ಹೇಳಿದರೂ, ನಿಮ್ಮ ಪರಿಚಯಸ್ಥರ ಮತ ನಮಗೆ ಹಾಕಿಸಿ ಎಂದು ಮನವಿ ಮಾಡುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್‌ನ ಪ್ರಭಾವಿ ಮುಖಂಡ ರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
 
ನಾಲ್ಕು ಎಪಿಎಂಸಿಗಳ ಚುಕ್ಕಾಣಿ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಮುಖಂಡರು ತೋಟದ ವಸ್ತಿ ಮತದಾರರನ್ನು ಭೇಟಿಯಾಗುವುದನ್ನು ಮರೆತಿಲ್ಲ. ಬಿಜೆಪಿ ನಾಯಕರು ನಮ್ಮ ವಸ್ತಿಗೆ ಬಂದು ಮತ ಕೇಳಿದ್ದಾರೆ ಎಂದು ವಸ್ತಿ ಮತದಾರರು ಹೇಳಿದ ಬೆನ್ನಿಗೆ ಕಾಂಗ್ರೆಸ್‌ ಮುಖಂಡರು ವಸ್ತಿಯತ್ತ ದಾಪುಗಾಲು ಹಾಕುತ್ತಿದ್ದಾರೆ.
 
ಅಖಾಡಕ್ಕಿಳಿದ ಸಚಿವ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಭಾನುವಾರ, ಸೋಮವಾರ ಎರಡೂ ದಿನವೂ ತಮ್ಮ ಮತ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳ ಪರ ಮತ ಯಾಚಿಸಿ ಮಿಂಚಿನ ಸಂಚಲನ ಮೂಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಮುಖಂಡರು ಸೆಡ್ಡು ಹೊಡೆದು, ಪ್ರಚಾರದ ತಂತ್ರಗಾರಿಕೆ ಹೆಣೆದಿದ್ದಾರೆ.
 
ಬಾಗೇವಾಡಿಯಲ್ಲಿ ಅಬ್ಬರ: ಒಂದೆಡೆ ಶಾಸಕ ಶಿವಾನಂದ ಪಾಟೀಲ ಕಾಂಗ್ರೆಸ್‌ ಪರ ಮತ ಯಾಚಿಸಿದರೆ, ಇನ್ನೊಂದೆಡೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ ಬಿಜೆಪಿ ಪರ ಮತ ಯಾಚಿಸುತ್ತಿದ್ದಾರೆ.
 
ಅಪ್ಪುಗೌಡ ಮನಗೂಳಿ ಜೆಡಿಎಸ್‌ ಅಸ್ಥಿತ್ವಕ್ಕಾಗಿ ಪಕ್ಷದ ಪರ ತಂತ್ರಗಾರಿಕೆ ರೂಪಿಸಿ ಪ್ರಚಾರ ನಡೆಸುತ್ತಿದ್ದು, ಮೇಲ್ನೋಟಕ್ಕೆ ವಿಧಾನಸಭಾ ಚುನಾವಣೆಯ ಪೂರ್ವ ತಾಲೀಮಿನಂತೆ ಗೋಚರಿಸುತ್ತಿದೆ.
 
**
ಸಂತೆ ನಿಷೇಧ
ವಿಜಯಪುರ:
ಜಿಲ್ಲೆಯ ನಾಲ್ಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆ ಮತದಾನ ಇದೇ 12ರಂದು ನಡೆಯಲಿದೆ.

ಮತದಾನ ನಡೆಯುವ ಗುರುವಾರ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ವಿಜಯಪುರ ತಾಲ್ಲೂಕು ಮಮದಾಪುರ, ತಿಕೋಟಾ, ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ, ಬಿಸನಾಳ, ಗೊಳಸಂಗಿ, ತಳೇವಾಡ ಗ್ರಾಮದಲ್ಲಿ ನಡೆಯುವ ಸಂತೆಗಳನ್ನು ನಿಷೇಧಗೊಳಿಸಲಾಗಿದೆ.
 
ಇದೇ ರೀತಿ ಮುದ್ದೇಬಿಹಾಳ, ಇಂಡಿ ತಾಲ್ಲೂಕಿನ ಅಗರಖೇಡ, ಶಿರಶ್ಯಾಡ, ಅಥರ್ಗಾ, ಲೋಣಿ ಬಿ.ಕೆ. ಹಲಸಂಗಿ, ಸಿಂದಗಿ ತಾಲ್ಲೂಕಿನ ಕಲಕೇರಿ, ಮುಳಸಾವಳಗಿ, ಚಾಂದಕವಠೆ, ಚಟ್ಟರಕಿ ಗ್ರಾಮಗಳಲ್ಲಿ ನಡೆಯುವ ಸಂತೆಯನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳಾದ, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.