ADVERTISEMENT

ಬಾಲಾಜಿ ಸಕ್ಕರೆ ಕಾರ್ಖಾನೆ ಮೇಲೆ ಐಟಿ ದಾಳಿ

ಯರಗಲ್ಲ ಬಳಿಯ ಕಚೇರಿ: ಏಳು ಅಧಿಕಾರಿಗಳ ತಂಡದಿಂದ ವಿವಿಧ ದಾಖಲೆ, ಕಡತ ತಪಾಸಣೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 7:14 IST
Last Updated 22 ಮಾರ್ಚ್ 2017, 7:14 IST

ಮುದ್ದೇಬಿಹಾಳ (ವಿಜಯಪುರ): ಮುದ್ದೇಬಿಹಾಳ ತಾಲ್ಲೂಕಿನ ಯರಗಲ್ಲ–-ಮದರಿ ಬಳಿಯಿರುವ ಬಾಲಾಜಿ ಶುಗರ್ಸ್‌ ಮತ್ತು ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ಸಕ್ಕರೆ ಕಾರ್ಖಾನೆ, ಕಚೇರಿ ಸೇರಿದಂತೆ ಇನ್ನಿತರೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದರು.

ಕಲಬುರ್ಗಿ ಆರ್‌ಟಿಓ ಪಾಸಿಂಗ್‌ ಹೊಂದಿರುವ ಎರಡು ಇನ್ನೋವಾ ವಾಹನಗಳಲ್ಲಿ ಕಾರ್ಖಾನೆ ಆವರಣ ಪ್ರವೇಶಿಸಿದ ಏಳು ಐಟಿ ಅಧಿಕಾರಿಗಳ ತಂಡ ಎಲ್ಲೆಡೆ ತೆರಳಿ ತಪಾಸಣೆ ನಡೆಸಿತು. ಅಧಿಕಾರಿಗಳು ತಮ್ಮ ನಡುವೆ ಹಿಂದಿ, ಇಂಗ್ಲಿಷ್‌ನಲ್ಲಿ ಸಂಭಾಷಿಸಿದರು. ಬಾಗಲಕೋಟೆ ಜಿಲ್ಲೆಯ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಈ ತಂಡಕ್ಕೆ ಭದ್ರತೆ ಒದಗಿಸಿದ್ದರು.

ಕಾರ್ಖಾನೆ ಚೇರ್ಮನ್ ಹಣಮಂತ ಗೌಡ ಎಸ್.ಪಾಟೀಲರನ್ನು ಅವರ ಕೊಠಡಿಯಲ್ಲೇ ಒಬ್ಬ ಅಧಿಕಾರಿ ವಿಚಾರಣೆ ನಡೆಸಿದರೆ, ಮತ್ತೋರ್ವ ಅಧಿಕಾರಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ ಪಾಟೀಲರನ್ನು ಲೆಕ್ಕಪತ್ರ ವಿಭಾಗದಲ್ಲಿ ಕೂಡಿಸಿಕೊಂಡು ಮಾಹಿತಿ ಪಡೆದ ದೃಶ್ಯ ಸ್ಥಳಕ್ಕೆ ತೆರಳಿದ್ದ ಪತ್ರಕರ್ತರಿಗೆ ಗೋಚರಿಸಿತು.

ಕಾರ್ಖಾನೆಯ ಎಲ್ಲ ವಿಭಾಗದ ವ್ಯವಸ್ಥಾಪಕರು, ಸಿಬ್ಬಂದಿ ಸೆೇರಿದಂತೆ ಲೆಕ್ಕಪತ್ರ ವಿಭಾಗಕ್ಕೆ ಸಂಬಂಧಿಸಿದ ಎಲ್ಲ ನೌಕರರ ಮೊಬೈಲ್ ವಶಪಡಿಸಿಕೊಂಡಿದ್ದ ಐಟಿ ಅಧಿಕಾರಿಗಳ ತಂಡ, ಯಾರೊ ಬ್ಬರಿಗೂ ಹೊರಗಿನ ವ್ಯಕ್ತಿಗಳನ್ನು ಸಂಪರ್ಕಿಸುವ ಅವಕಾಶ ನೀಡಲಿಲ್ಲ.

ದಾಳಿಯ ಕುರಿತು ಅಧಿಕಾರಿಗಳ  ಬಳಿ ಮಾಹಿತಿ ಕೇಳಿದರೆ, ಇನ್ನೂ 2–3 ದಿನ ಪರಿಶೀಲನೆ ನಡೆಯಲಿದೆ. ವರದಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗುತ್ತದೆ. ನಮ್ಮ ಕೆಲಸಕ್ಕೆ ತೊಂದರೆ ಕೊಡಬೇಡಿ. ಇಲ್ಲಿಂದ  ಹೋಗಿ ಎಂದು ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.