ADVERTISEMENT

‘ಬಿಎಸ್‌ವೈ ಬೆದರಿಕೆಗೆ ನಾನು ಬಗ್ಗುವುದಿಲ್ಲ’

​ಪ್ರಜಾವಾಣಿ ವಾರ್ತೆ
Published 26 ಮೇ 2017, 8:38 IST
Last Updated 26 ಮೇ 2017, 8:38 IST

ಹೊಕ್ಕುಂಡಿ (ವಿಜಯಪುರ): ವಿಜಯಪುರ: ‘ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಕೇಳಿ ಬರುತ್ತಿದ್ದಂತೆಯೇ ಭಯಗೊಂಡ ಬಿಜೆಪಿ ಮುಖಂಡರು, ನನ್ನನ್ನು ಬೆದರಿಸಲು ಮುಂದಾಗುತ್ತಿ ದ್ದಾರೆ. ಅವರ ಗೊಡ್ಡು ಬೆದರಿಕೆಗೆ ಬಗ್ಗುವವನು ನಾನಲ್ಲ. ವಿಜಯಪುರ ಜಿಲ್ಲೆಯ ಮಗ ನಾನು; ಯಾವುದೇ ತನಿಖೆಗೂ ಸಿದ್ಧ’ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಗುರುವಾರ ಇಲ್ಲಿ ಸವಾಲು ಹಾಕಿದರು.

‘ಮಹಾದಾಯಿ ವಿವಾದ ಪರಿಹರಿಸಲು ವಿಫಲರಾದ ಬಿಜೆಪಿ ಮುಖಂಡರು ಇದೀಗ ವಿನಾ ಕಾರಣ ಮಲಪ್ರಭಾ ಕಾಲುವೆ ಆಧುನೀಕರಣಕ್ಕೆ ಅಡ್ಡಿಪಡಿಸುತ್ತಿದ್ದಾರೆ. ನಾಲ್ಕು ಜಿಲ್ಲೆಗಳ ಜನತೆಗೆ ಅನುಕೂಲ ಕಲ್ಪಿಸುವ ಈ ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಜನರಿಗೆ ನೀರು ಕೊಡುವುದೇ ನನ್ನ ಗುರಿ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಯೋಚಿಸಬೇಕಿತ್ತು: ‘ಹಾವೇರಿಯಲ್ಲಿ ಯಡಿಯೂರಪ್ಪ ಏಕವಚನದಲ್ಲಿ ನಿಂದಿಸಿ ದ್ದಾರೆ. ನನಗೂ ಅದೇ ಧಾಟಿಯಲ್ಲಿ ಮಾತನಾಡಲು ಬರುತ್ತದೆ. ಆದರೆ ಅದು ಸಂಸ್ಕೃತಿಯಲ್ಲ. ನನ್ನ ತಂದೆ ವಯಸ್ಸಿನ ವರಾದ ಅವರ ಮಾತುಗಳಿಂದ ನೋವಾಗಿದೆ. ಪಕ್ಷದ ತಂಡ ಕಳುಹಿಸಿ ವರದಿ ತರಿಸಿಕೊಂಡು ಹೋರಾಟ ರೂಪಿಸುವುದಾಗಿ ಈಗ ಹೇಳುತ್ತಿದ್ದಾರೆ.

ADVERTISEMENT

ಆರೋಪ ಮಾಡುವ ಮೊದಲೇ ಈ ಬಗ್ಗೆ ಆಲೋಚಿಸಬೇಕಿತ್ತು. ಪರಿಶೀಲನೆ ನಂತರ, ಆರೋಪ ಸುಳ್ಳು ಎಂಬ ವರದಿ ದೊರೆತರೆ, ರಾಜ್ಯದ ಜನತೆಯ ಕ್ಷಮೆ ಕೇಳುತ್ತಾರಾ?’ ಎಂದು ಸಚಿವ ಪಾಟೀಲ ಕೇಳಿದರು.

‘ಬಿಜೆಪಿಯವರು ಅಧಿಕಾರ ದಲ್ಲಿ ದ್ದಾಗ ₹500 ಕೋಟಿಗೆ ಐದು ಟಿಎಂಸಿ ಅಡಿ ನೀರನ್ನು ಜಿಂದಾಲ್‌ಗೆ ಮಾರಿದ್ದಾರೆ ಎಂಬ ದೂರು ಇದೆ. ತುಂಗಭದ್ರಾ ಜಲಾಶಯದಿಂದ ನೀರು ಬಿಡುವ ಬದಲು ಆಲಮಟ್ಟಿ, ನಾರಾಯಣಪುರ ಜಲಾಶಯದಿಂದ ಬಿಡುಗಡೆ ಮಾಡಿ ನಮ್ಮ ಜನತೆಗೆ ಅನ್ಯಾಯ ಎಸಗಿದ್ದಾರೆ. ಈ ಕುರಿತು ಸದನದ ಒಳಗೂ, ಹೊರಗೂ ಹೋರಾಟ ನಡೆದಿದೆ. ಈ ವಿಷಯದ ಬಗ್ಗೆಯೂ ಉನ್ನತ ಹಂತದ ತನಿಖೆ ನಡೆಯಬೇಕಿದೆ’ ಎಂದು ಸಚಿವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.