ADVERTISEMENT

ಬಿರುಗಾಳಿ, ಗುಡುಗಿನ ಅಬ್ಬರ

ವಿಜಯಪುರ, ತಾಳಿಕೋಟೆಯಲ್ಲಿ ಮಳೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2016, 8:52 IST
Last Updated 30 ಏಪ್ರಿಲ್ 2016, 8:52 IST

ವಿಜಯಪುರ: ನಗರವೂ ಸೇರಿದಂತೆ ಸುತ್ತಮುತ್ತ ಶುಕ್ರವಾರ ಸಂಜೆ ಸಾಧಾರಣ ಮಳೆ ಸುರಿದಿದ್ದು, ಗಾಳಿ, ಮಿಂಚು, ಗುಡುಗು, ಸಿಡಿಲ ಅಬ್ಬರವೇ ಹೆಚ್ಚಿತ್ತು. ಮಧ್ಯಾಹ್ನ 3.45ರ ವೇಳೆಗೆ ಆರಂಭಗೊಂಡ ಮಳೆ ಸಂಜೆ 4.10ರವರೆಗೆ ಸಾಧಾರಣವಾಗಿ ಸುರಿಯಿತು. ಕಾದ ಕಾವಲಿಯಂತಾಗಿದ್ದ ಭೂಮಿ ಕೊಂಚ ಮಳೆಯಿಂದ ಮತ್ತಷ್ಟು ಬಿಸಿಯನ್ನು ಹೊರಹೊಮ್ಮಿಸಿತು. ಸೆಖೆಯ ಬೇಗೆಗೆ ನಗರದ ಜನತೆ ಬಳಲಿದರು.

ಜಿಲ್ಲೆಯ ವಿವಿಧೆಡೆ ಅಕಾಲಿಕ ಮಳೆ ಈಗಾಗಲೇ ಸುರಿದಿದ್ದರೂ, ನಗರದ ವ್ಯಾಪ್ತಿಯಲ್ಲಿ ಇನ್ನೂ ಬಿರುಸಿನ ಮಳೆ ಸುರಿದಿಲ್ಲ. ಬಿಸಿಲ ಝಳ, ಧಗೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನಗರದ ಜನತೆ ಜೋರು ಮಳೆಯ ನಿರೀಕ್ಷೆಯಲ್ಲಿದೆ.

ತಾಳಿಕೋಟೆ ವರದಿ
ತಾಳಿಕೋಟೆ: 
ಬಿಸಿಲ ತಾಪದಿಂದ ಬಳಲಿ ಬೆಂಡಾಗಿದ್ದ ಭೂಮಿಗೆ ನಾಗರಿಕರ ಮನಸ್ಸಿಗೆ ಸಂಜೆ ಸುರಿದ 15 ನಿಮಿಷಗಳ ಮಳೆ ತಂಪೆರೆಯಿತು. ರಾತ್ರಿ ವೇಳೆಗೆ ಧಗೆ ಹೆಚ್ಚಿಸಿತು.

ಗುಡುಗು– ಮಿಂಚು–ಸಿಡಿಲಿನ ಅಬ್ಬರ ಭಯ ತರಿಸಿತು. ರಸ್ತೆಗಳಲ್ಲಿ ನೀರು ಹರಿಯಿತು. ಡಾಂಬರು, ಸಿ.ಸಿ. ರಸ್ತೆ ಯಿಲ್ಲದ  ರಸ್ತೆಗಳು, ಹೊಸ ಬಡಾ ವಣೆಯ ರಸ್ತೆಗಳು ಮಳೆಯಿಂದ ಕೆಸರಾದವು. ಗುಂಡಿಗಳಲ್ಲಿ ನೀರು ತುಂಬಿಕೊಂಡು ಹೊಂಡಗಳಾದವು. ನಾಗರಿಕರು ಮಳೆಗೆ ಸಂತಸ ಪಟ್ಟರೆ, ರಸ್ತೆ ಅವ್ಯವಸ್ಥೆಗೆ ಹಿಡಿಶಾಪ ಹಾಕಿದರು.ದಟ್ಟವಾದ ಮೋಡಗಳಿದ್ದು ರಾತ್ರಿ ಕೂಡ ಮಳೆ ಬರುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.