ADVERTISEMENT

ಬಿಸಿಯೂಟ ಸೇವಿಸಿ 20ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:23 IST
Last Updated 21 ಜುಲೈ 2017, 6:23 IST

ಮುದ್ದೇಬಿಹಾಳ: ತಾಲ್ಲೂಕಿನ ಅಡವಿ ಹುಲಗಬಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 20ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥರಾಗಿ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾದ ಘಟನೆ ಗುರುವಾರ ನಡೆಯಿತು.

ಎಂದಿನಂತೆ ಶಾಲೆಯ ಅಡುಗೆ ಕೋಣೆಯಲ್ಲಿ ಬಿಸಿಯೂಟ ತಯಾರಿ ಸಿದ್ದು, ಮಧ್ಯಾಹ್ನ ಮಕ್ಕಳಿಗೆ ಬಡಿಸ ಲಾಗಿದೆ. ಕಳಪೆ ಊಟ ನೀಡಲಾಗಿದೆ ಎಂದು ಮಕ್ಕಳು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಕೆಲವು ಮಕ್ಕಳಿಗೆ ಏಕಾಏಕಿ ಹೊಟ್ಟೆ ನೋವು ಕಾಣಿಸಿ ಕೊಂಡಿದೆ. ಕೆಲವರು ವಾಂತಿ ಮಾಡಿಕೊಂಡಿದ್ದಾರೆ.

ಇದರಿಂದ ಆತಂಕಗೊಂಡ ಶಿಕ್ಷಕರು ಪಾಲಕರನ್ನು ಕರೆಸಿದ್ದಾರೆ. ಸ್ಥಳೀಯವಾಗಿ ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಿದ್ದಾರೆ. ಚೇತರಿಕೆ ಕಂಡುಬರದಿದ್ದರಿಂದ ಆಂಬುಲೆನ್ಸ್‌ಗೆ ಕರೆ ಮಾಡಿ, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದಾರೆ.

ADVERTISEMENT

ವಿಷಯ ತಿಳಿದು ತಾಳಿಕೋಟೆ  ಪಿಎಸ್ಐ ಬಿರಾದಾರ  ಬಂದರು. ಶಿಕ್ಷಣ ಸಂಯೋಜಕ ಶೀಕಳವಾಡಿ, ಬಿಸಿಯೂಟ ಯೋಜನೆಯ ಉಸ್ತುವಾರಿ ಅಧಿಕಾರಿ ಗಳು ಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಸಿಬ್ಬಂದಿಗೆ ಪಾಲಕರಿಂದ ತರಾಟೆ:
ವಿಷಯ ತಿಳಿದ ಪಾಲಕರು ಶಾಲೆ ಬಳಿ ಬಂದು, ಬಿಸಿಯೂಟ ಸಿಬ್ಬಂದಿ, ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ‘ಈ ಶಾಲೆಯಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದು ಎರಡನೇ ಬಾರಿ. ಕಳೆದ ವರ್ಷ ಇಂಥದ್ದೇ ಘಟನೆ ನಡೆದಾಗ ಬಿಸಿಯೂಟದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿತ್ತು.

ಕೆಲ ತಿಂಗಳು ಎಲ್ಲವೂ ಸರಿಯಾಗಿತ್ತು. ಈಗ ಮತ್ತೆ ಕಳಪೆ ಗುಣಮಟ್ಟದ ಊಟ ಬಡಿಸಲಾಗುತ್ತಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ತಪ್ಪಿತಸ್ಥ ಬಿಸಿಯೂಟ ಸಿಬ್ಬಂದಿ ಮತ್ತು ಉಸ್ತುವಾರಿ ನಿರ್ವಹಣೆಯಲ್ಲಿ ವಿಫಲರಾದ ಶಿಕ್ಷಕರ ಮೇಲೆ ಕ್ರಮ ಕೈಕೊಳ್ಳಬೇಕು’ ಎಂದು ಗ್ರಾಮದ ಕನ್ನಡಪರ ಸಂಘಟನೆ ಮುಖಂಡ ಗಾಂಜಿ ಆಗ್ರಹಿಸಿದರು.

ಚಿಕಿತ್ಸೆ ಪಡೆಯುತ್ತಿದ್ದ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಬಿಇಒ ಎಸ್.ಡಿ. ಗಾಂಜಿ, ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.
‘ಊಟ ಮಾಡಿದ ನಂತರ ಹೊಟ್ಟೆನೋವು, ವಾಂತಿ ಆಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಬಹುಶಃ ಅರೆಬೆಂದ ಅನ್ನ ಸೇವಿಸಿದ್ದು ಇದಕ್ಕೆ ಕಾರಣವಾಗಿರಬಹುದು. ಸದ್ಯ ಎಲ್ಲರಿಗೂ ತುರ್ತು ಚಿಕಿತ್ಸೆ ನೀಡಲಾಗಿದೆ. ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ’ ಎಂದು ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಬಿ.ಕೆ.ಓಂಕಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.