ADVERTISEMENT

ಬೆಟ್ಟಿಂಗ್‌ ಬಿರುಸು : ಕೋಡ್‌ ವರ್ಡ್‌ ಬಳಕೆ

ಡಿ.ಬಿ, ನಾಗರಾಜ
Published 21 ಏಪ್ರಿಲ್ 2017, 7:17 IST
Last Updated 21 ಏಪ್ರಿಲ್ 2017, 7:17 IST

ವಿಜಯಪುರ: ಐಪಿಎಲ್‌ನ ಹತ್ತನೇ ಆವೃತ್ತಿಯ 20–20 ಕ್ರಿಕೆಟ್‌ ಟೂರ್ನಿ ಆರಂಭದೊಂದಿಗೆ ಜಿಲ್ಲೆಯಾದ್ಯಂತ ಬೆಟ್ಟಿಂಗ್‌ ದಂಧೆ ಬಿರುಸುಗೊಂಡಿದೆ.ಕೋಡ್‌ ವರ್ಡ್‌ ಮೂಲಕ ಈ ದಂಧೆ ನಡೆಯುತ್ತಿದೆ. ಪ್ರಸ್ತುತ ಕಾಂಗ್ರೆಸ್‌–ಬಿಜೆಪಿ  ಹೆಸರನ್ನು ಸೋಲು–ಗೆಲುವಿಗೆ ಬಳಸ­ಲಾಗುತ್ತಿದೆ ಎಂಬ ಮಾಹಿತಿಯನ್ನು ಮೂಲಗಳು ನೀಡಿವೆ.

ಯಾವುದೇ ತಂಡ ಗೆಲುವು ಸಾಧಿಸಿದರೆ ಕಾಂಗ್ರೆಸ್‌ ಗೆಲುವು ಎಂದು ಹೇಳುವ ಮೂಲಕ ಹಣ ಬಟವಾಡೆ­ಯಾಗುತ್ತಿದೆ. ಸೋತರೆ ಬಿಜೆಪಿಯ ಸೋಲು ಎಂಬ ಸಂಕೇತ ರವಾನೆ­ಯಾಗುತ್ತದೆ. ಇತ್ತೀಚೆಗಷ್ಟೇ ನಡೆದ ನಂಜನಗೂಡು, ಗುಂಡ್ಲುಪೇಟೆ ವಿಧಾನ­ಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್‌ ಇಲ್ಲಿ ವಿಜಯದ ಸಂಕೇತವಾದರೆ, ಬಿಜೆಪಿಯ ಉಲ್ಲೇಖ ಸೋಲಿನ ಸಂಕೇತ. ವಿಜಯ­ಪುರ ನಗರವೊಂದರಲ್ಲೇ ಪ್ರತಿ ಪಂದ್ಯ­ಕ್ಕೂ ₹1 ಕೋಟಿಗೂ ಅಧಿಕ ಮೊತ್ತದ ಬೆಟ್ಟಿಂಗ್‌ ನಡೆಯುತ್ತಿದೆ.

ಹಲವು ಬೆಟ್ಟಿಂಗ್‌ ಅಡ್ಡೆಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಈ ಮಾಹಿತಿ ಲಭ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್‌.ಎನ್‌.ಸಿದ್ದರಾಮಪ್ಪ ತಿಳಿಸಿದರು.
ಗೋವಾಗೆ ಜಿಲ್ಲಾ ಪೊಲೀಸರುಬೆಟ್ಟಿಂಗ್‌ ಅಡ್ಡೆಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕೆಲ ಪ್ರಮುಖ ಬುಕ್ಕಿಗಳು  ತಪ್ಪಿಸಿಕೊಂಡು ಪರಾರಿ­ಯಾಗಿದ್ದಾರೆ. ಬಂಧಿಸಿರುವ ಕೆಲವರನ್ನು ವಿಚಾರಣೆಗೆ ಒಳಪಡಿಸಿದಾಗ, ನಗರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬೆಟ್ಟಿಂಗ್‌ ದಂಧೆಯನ್ನು ಗೋವಾದಿಂದ ನಿಯಂತ್ರಿಸ­ಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾಗೀ, ಅವರನ್ನು ಬಂಧಿಸಲು ಜಿಲ್ಲಾ ಪೊಲೀಸರ ತಂಡವೊಂದನ್ನು ಗುರುವಾರ ಗೋವಾಗೆ ಕಳುಹಿಸಲಾಗಿದೆ. ಲಭ್ಯ ಮಾಹಿತಿ ಮೇರೆಗೆ ಶೋಧ ನಡೆಸಿ ಪ್ರಮುಖ ಬುಕ್ಕಿಗಳನ್ನು ಬಂಧಿಸುವ ವಿಶ್ವಾಸವಿದೆ ಎಂದು ಸಿದ್ಧರಾಮಪ್ಪ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.