ADVERTISEMENT

ಮತದಾರರ ಪಟ್ಟಿಗೆ ‘ಮಿಂಚಿನ ನೋಂದಣಿ’ ನಾಳೆ

ಮುದ್ದೇಬಿಹಾಳ: ತಿದ್ದುಪಡಿ ಮಾಡುವ ಅವಕಾಶ ಬಳಸಿಕೊಳ್ಳಲು ಮನವಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 12:05 IST
Last Updated 7 ಏಪ್ರಿಲ್ 2018, 12:05 IST
ಮುದ್ದೇಬಿಹಾಳದ ತಹಶೀಲ್ದಾರ್‌ ಕಚೇರಿಯಲ್ಲಿ ಚುನಾವಣಾ ಸಿದ್ಧತೆ ಕುರಿತು ನಡೆದ ಸಭೆಯಲ್ಲಿ ತಹಶೀಲ್ದಾರ್‌ ಮಂಜುಳಾ ನಾಯಕ ಮಾತನಾಡಿದರು
ಮುದ್ದೇಬಿಹಾಳದ ತಹಶೀಲ್ದಾರ್‌ ಕಚೇರಿಯಲ್ಲಿ ಚುನಾವಣಾ ಸಿದ್ಧತೆ ಕುರಿತು ನಡೆದ ಸಭೆಯಲ್ಲಿ ತಹಶೀಲ್ದಾರ್‌ ಮಂಜುಳಾ ನಾಯಕ ಮಾತನಾಡಿದರು   

ಮುದ್ದೇಬಿಹಾಳ: ಎಲ್ಲ ಮತಗಟ್ಟೆಗಳಲ್ಲಿ ಏ.8ರಂದು ಮತದಾರರ ಮಿಂಚಿನ ನೋಂದಣಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅರ್ಹ
ಮತದಾರರು ಅಂದು ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ತೆರಳಿ ಹೆಸರು ನೋಂದಾಯಿಸುವ, ತಿದ್ದುಪಡಿ ಮಾಡುವ ಅವಕಾಶ ಬಳಸಿಕೊಳ್ಳಬೇಕು ಎಂದು ಸಹಾಯಕ ಚುನಾವಣಾಧಿಕಾರಿ ಮಂಜುಳಾ ನಾಯಕ ಮನವಿ ಮಾಡಿದರು.

ಇಲ್ಲಿನ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಏ.14ರವರೆಗೂ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು, ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದ್ದು ಹೊಸ ಮತದಾರರು ಇದರ ಸದುಪ
ಯೋಗಪಡಿಸಿಕೊಳ್ಳಬೇಕು ಎಂದರು.

ಮತದಾರರಲ್ಲಿ ಅರಿವು ಮೂಡಿಸಲು ಈಗಾಗಲೇ ತಂಡ ರಚಿಸಲಾಗಿದ್ದು, ಪ್ರಚಾರ ಸಾಮಾಗ್ರಿಗಳನ್ನು ಎಲ್ಲೆಡೆ ವಿತರಿಸಲಾಗುತ್ತಿದೆ. ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ನೀಡಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತದೆ. ಚುನಾವಣೆಯನ್ನು ಒಂದು ಹಬ್ಬದ ರೀತಿಯಲ್ಲಿ ಪರಿಗಣಿಸಿ ಮತದಾನದ ಪಾವಿತ್ರ್ಯ ಕಾಪಾಡಲು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು.

ADVERTISEMENT

ಕಟ್ಟುನಿಟ್ಟಿನ ನಿಯಮಾವಳಿ: ಮುದ್ದೇಬಿಹಾಳ ವಿಧಾನ ಸಭಾ ಮತಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಎನ್.ರಾಘವೇಂದ್ರ ಮಾತನಾಡಿ, ಏ.17ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭಗೊಂಡ ಮೇಲೆ ಚುನಾವಣಾಧಿಕಾರಿ ಕೊಠಡಿಯೊಳಗೆ ಅಭ್ಯರ್ಥಿ ಮತ್ತು ಅವರ ಜೊತೆಗೆ ನಾಲ್ವರು ಸೇರಿ ಒಟ್ಟು 5 ಜನರಿಗೆ ಮಾತ್ರ ಪ್ರವೇಶಿಸಲು ಅವಕಾಶ ಕಲ್ಪಿಸುವಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಇದನ್ನು ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳ ಪೋಟೊ ತೆಗೆದುಕೊಳ್ಳಲು ಸುದ್ದಿ ಮಾಧ್ಯಮದವರಿಗೂ ಅವಕಾಶ ಇಲ್ಲ. ಚುನಾವಣಾ ಅಧಿಕಾರಿಗಳೇ ಪೋಟೊ ಒದಗಿಸಲು ಕ್ರಮಕೈಕೊಳ್ಳುತ್ತಾರೆ ಎಂದು ತಿಳಿಸಿದರು.

ಇವಿಎಂ, ವಿವಿ ಪ್ಯಾಟ್ ಬಳಕೆ: ಇದೇ ಮೊದಲ ಬಾರಿಗೆ ಮತದಾನಕ್ಕಾಗಿ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ಒಟ್ಟಾಗಿ ಬಳಕೆ ಮಾಡಲಾಗುತ್ತಿದೆ. ಇವುಗಳ ಬಳಕೆ ಕುರಿತು ಎಲ್ಲೆಡೆ ಜನಜಾಗೃತಿ ಮೂಡಿಸಲು ಕ್ರಮ ಕೈಕೊಳ್ಳಲಾಗಿದೆ. ವಿವಿಪ್ಯಾಟ್ ಬಗ್ಗೆ ಮತದಾರರು ಗೊಂದಲ ಮಾಡಿಕೊಳ್ಳಬಾರದು ಎಂದರು.

ವಿವಿಪ್ಯಾಟ್‌ನ ಡಿಸ್‌ಪ್ಲೇನಲ್ಲಿ ಮತದಾರ ತಾನು ಯಾರಿಗೆ ಮತ ಚಲಾಯಿಸಿದ್ದಾನೆ ಎನ್ನುವುದನ್ನು ನೋಡಲು ಅವಕಾಶ ಇದೆ. ಆದರೆ, ಇದರ ಪ್ರತಿಯನ್ನು ಮತದಾರನಿಗೆ ಕೊಡಲಾಗುವುದಿಲ್ಲ. ವಿವಿಪ್ಯಾಟ್‌ನಲ್ಲಿ ಮತ ಚಲಾವಣೆ ಯಾರಿಗೆ ಆಗಿದೆ ಎಂದು ತೋರಿಸಿದ ಮೇಲೆ ಮತ ಚೀಟಿಯು (ಸ್ಲಿಪ್) ಯಂತ್ರದೊಳಗೆ ಇರುವ ಡ್ರಾಪ್ ಬಾಕ್ಸಿನಲ್ಲಿ ಬೀಳುತ್ತದೆ. ಇದನ್ನು ಮತದಾನ ಜಾಗೃತಿ ಮೂಡಿಸುವ ಸಂದರ್ಭ ತಿಳಿಸಿಕೊಡಲು ತಯಾರಿ ನಡೆದಿದೆ ಎಂದು ತಿಳಿಸಿದರು.

ಮತಕ್ಷೇತ್ರದ ನೋಡಲ್ ಅಧಿಕಾರಿ ಆಲಮಟ್ಟಿ ಪುನರ್ವಸತಿ ಮತ್ತು ಪುನರ್‌ ನಿರ್ಮಾಣ ವಿಭಾಗದ ಅಧಿಕಾರಿ ವೈ.ಎಸ್.ಮಲ್ಲಿಕಾರ್ಜುನ, ಸಿಪಿಐ ರವಿಕುಮಾರ ಕಪ್ಪತ್ತನ್ನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.