ADVERTISEMENT

ಮಾತೃಪೂರ್ಣ ಯೋಜನೆ: ಸಮಸ್ಯೆ ನಿವಾರಿಸಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2017, 6:19 IST
Last Updated 2 ಡಿಸೆಂಬರ್ 2017, 6:19 IST

ವಿಜಯಪುರ: ಅಂಗನವಾಡಿ ಕೇಂದ್ರಗಳಲ್ಲಿನ ಮಾತೃಪೂರ್ಣ ಯೋಜನೆ ತೊಂದರೆ ನಿವಾರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು)ದ ಪದಾಧಿಕಾರಿಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಮನವಿ ಸಲ್ಲಿಸಿದರು.

ಸಂಘದ ತಾಲ್ಲೂಕು ಘಟಕ ಅಧ್ಯಕ್ಷೆ ಸುನಂದಾ ನಾಯಕ ಮಾತನಾಡಿ, ‘ಮಾತೃಪೂರ್ಣ ಯೋಜನೆ ಅನುಷ್ಠಾನಗೊಳಿಸಲು ಅಂಗನವಾಡಿ ಕೇಂದ್ರಗಳಲ್ಲಿ ಕುಕ್ಕರ್, ಬೊಗೊಣಿ, ಊಟದ ಪ್ಲೇಟ್‌ಗಳಂತಹ ಸಾಮಗ್ರಿಗಳಿಲ್ಲ. ತರಕಾರಿ ಪಡೆಯಲು ಮೇಲ್ವಿಚಾರಕರೊಂದಿಗೆ ಜಂಟಿ ಖಾತೆ ತೆಗೆಯಲು ತಮ್ಮಿಂದ ಸಾಧ್ಯವಿಲ್ಲ’ ಎಂದರು.

‘ಕೆಲ ಕೇಂದ್ರಗಳಲ್ಲಿ ಸಹಾಯಕಿಯರ, ಕಾರ್ಯಕರ್ತೆಯರ ಕೊರತೆ ಕಾಡುತ್ತಿದ್ದು, ತಕ್ಷಣ ನೇಮಿಸಿಕೊಳ್ಳಬೇಕು. ತತ್ತಿ ವಿತರಣೆಗಾಗಿ ಪ್ರತಿ ತಿಂಗಳ ಮುಂಚಿತವಾಗಿ ಬಿಲ್ ನೀಡಬೇಕು. ನಗರದಲ್ಲಿ ಹೆಚ್ಚಿನ ಪ್ರಮಾಣದ ಕೇಂದ್ರಗಳು ಬಾಡಿಗೆ ಮನೆಯಲ್ಲಿವೆ. ಸ್ವಂತ ಕಟ್ಟಡ ನಿರ್ಮಿಸಬೇಕು. ಇಲ್ಲ ಎರಡ್ಮೂರು ಕೋಣೆಯಿರುವ ಮನೆ ಹಿಡಿಯಲು ಹೆಚ್ಚಿನ ಬಾಡಿಗೆ ನೀಡಬೇಕು. ಇಲ್ಲದಿದ್ದರೆ ಮಾತೃಪೂರ್ಣ ಯೋಜನೆ ಯಶಸ್ವಿಗೊಳಿಸಲು ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.

ADVERTISEMENT

‘ಗರ್ಭಿಣಿ, ಬಾಣಂತಿಯರು ₹ 200 ದಿನಗೂಲಿ ಬಿಟ್ಟು ಅಂಗನವಾಡಿ ಕೇಂದ್ರಕ್ಕೆ ಊಟ ಮಾಡಲು ಬರುವುದಿಲ್ಲ. ಈ ಹಿಂದೆ ನೀಡುತ್ತಿದ್ದಂತೆ ಮನೆಗೆ ಪೌಷ್ಟಿಕ ಆಹಾರ ನೀಡಬೇಕು ಎಂದು ಬಹುತೇಕ ಮಹಿಳೆಯರು ಸಹಿ ಮಾಡಿ ತಮಗೆ ನೀಡಿದ್ದಾರೆ. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದೂ ಆಗ್ರಹಿಸಿದರು.

ಜಯಶ್ರೀ ಪೂಜಾರಿ, ರಿಜ್ವಾನ್‌, ಎಸ್.ಎಂ.ಜಮಾದಾರ, ದಾನಮ್ಮ ವಿರಕ್ತಮಠ, ಸುನಂದಾ ಕುಲಕರ್ಣಿ, ತಬಸುಮ, ರಾಜೇಶ್ವರಿ ಸಂಕದ, ಸುಮಿತ್ರಾ ಗುಗ್ರಿ, ಎಲ್.ಎಸ್.ಪೋಳ, ಗೀತಾ ನಾಯಿಕ, ದೀಪಾ ಚವ್ಹಾಣ, ಶಾಲಿನಿ ಸೇರಿದಂತೆ ಇತರರು ನೇತೃತ್ವ ವಹಿಸಿದ್ದರು.

* * 

ಬಹುತೇಕ ಕೇಂದ್ರಗಳಲ್ಲಿ ಗ್ಯಾಸ್‌ ಇಲ್ಲದ ಕಾರಣ ಕಟ್ಟಿಗೆ ಖರೀದಿಸಲು ತಿಂಗಳಿಗೆ ₹ 100 ಮಾತ್ರ ನೀಡಲಾಗುತ್ತಿದ್ದು, ಇದು ಯಾವುದಕ್ಕೂ ಸಾಲುವುದಿಲ್ಲ
ಸುನಂದಾ ನಾಯಕ
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.