ADVERTISEMENT

ಮುಚ್ಚಿದ ಬಾವಿ ಜಾಗದಲ್ಲಿ ಉದ್ಯಾನ ನಿರ್ಮಿಸಿ

ಬಸವನಬಾಗೇವಾಡಿ ಪುರಸಭೆಯ ತುರ್ತು ಸಭೆ; ವಿವಿಧ ಕಾಮಗಾರಿಗೆ ಮಂಜೂರಾತಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2018, 12:38 IST
Last Updated 24 ಮಾರ್ಚ್ 2018, 12:38 IST

ಬಸವನಬಾಗೇವಾಡಿ: ಸ್ಥಳೀಯ ಚನ್ನಬಸವೇಶ್ವರ ನಗರದ ಮುಚ್ಚಿದ ಬಾವಿಯ ಜಾಗದಲ್ಲಿ ಉದ್ಯಾನ ನಿರ್ಮಾಣ ಮಾಡಬೇಕು ಎಂದು ಪುರಸಭೆ ಸದಸ್ಯ ಸಂಜೀವ ಕಲ್ಯಾಣಿ ಒತ್ತಾಯಿಸಿದರು.

ಸ್ಥಳೀಯ ಪುರಸಭೆ ಸಭಾಭವನದಲ್ಲಿ ಗುರುವಾರ ಜರುಗಿದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ‘ಮುಚ್ಚಿದ ಬಾವಿಯ ಜಾಗದಲ್ಲಿ ಅನಧಿಕೃತವಾಗಿ ಶೆಡ್‌ ನಿರ್ಮಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಶೀಘ್ರಗತಿಯಲ್ಲಿ ಉದ್ಯಾನ ನಿರ್ಮಾಣ ಮಾಡಿದರೆ ಆ ಭಾಗದ ಜನರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

ಸದಸ್ಯ ನೀಲಪ್ಪ ನಾಯಕ ಮಾತನಾಡಿ, ‘ಉದ್ಯಾನ ನಿರ್ಮಿಸುವ ವಿಷಯದ ಬಗ್ಗೆ ಮುಂದಿನ ಸಭೆಯಲ್ಲಿ ಠರಾವು ಪಾಸು ಮಾಡೊಣ, ಸದ್ಯ  ಜಾಗದ ಸುತ್ತ ತಂತಿ ಬೇಲಿ ಹಾಕಿ ನಾಮಫಲಕ ಹಾಕಬೇಕು’ ಎಂದು ಸಭೆಗೆ ತಿಳಿಸಿದರು.

ADVERTISEMENT

ವಿವಿಧ ಅನುದಾನದ ಅಡಿಯಲ್ಲಿ ಕರೆಯಲಾದ ಟೆಂಡರ್‌ಗೆ ಸಭೆಯಲ್ಲಿ ಮಂಜೂರಾತಿ ಪಡೆಯಲಾಯಿತು. ಪುರಸಭೆ ವ್ಯಾಪ್ತಿಯ ಸಾರ್ವಜನಿಕ ಸುಲಭ ಶೌಚಾಲಯಗಳನ್ನು ನಿರ್ವಹಿಸುತ್ತಿರುವ ಸಂಘ- ಸಂಸ್ಥೆಗಳನ್ನು 2018–19ನೇ ಸಾಲಿಗೆ ಮುಂದುವರಿಸುವ ಕುರಿತು ಸದಸ್ಯರಿಂದ ಅನುಮೋದನೆ ಪಡೆದುಕೊಳ್ಳಲಾಯಿತು.

ಆರ್‌ಬಿಆರ್‌ಕೆ ಮತ್ತು ಐನಾಕ್ಸ್‌ ಸಂಸ್ಥೆಗೆ ನಿರಾಕ್ಷೇಪಣಾ ಪತ್ರ ನೀಡುವ ಕುರಿತ ಚರ್ಚೆಯಲ್ಲಿ ಸದಸ್ಯ ಶ್ರೀಕಾಂತ ನಾಯಕ ಇತರರು ಆಕ್ಷೇಪ ವ್ಯಕ್ತಪಡಿಸಿದರು. ತುರ್ತು ಸಾಮಾನ್ಯ ಸಭೆಯಲ್ಲಿ ಇಂತಹ ವಿಷಯಗಳನ್ನು ಸೇರಿಸುವುದು ಸೂಕ್ತವಲ್ಲ ಎಂಬ ಶ್ರೀಕಾಂತ ಅವರ ಮಾತಿಗೆ ಕೆಲ ಸದಸ್ಯರು ದನಿಗೂಡಿಸಿದರು.

ಪುರಸಭೆ ಅಧ್ಯಕ್ಷೆ ಪರ್ಜಾನ ಚೌಧರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶ್ರೀದೇವಿ ಲಮಾಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಮುತ್ತು ಉಕ್ಕಲಿ, ಸದಸ್ಯರಾದ ಪ್ರವೀಣ ಪವಾರ, ಮುರಗೇಶ ನಾಯ್ಕೋಡಿ, ನಜೀರ ಗಣಿ, ಮುದುಕು ಬಸರಕೋಡ, ಮುತ್ತು ಕಿಣಗಿ, ಬಸವರಾಜ ತುಂಬಗಿ ಇತರರು ಇದ್ದರು.

ಮುಖ್ಯಾಧಿಕಾರಿ ಬಿ.ಎ.ಸೌದಾಗರ ಸ್ವಾಗತಿಸಿದರು. ಹಿರಿಯ ಆರೋಗ್ಯ ಸಹಾಯಕ ಸಿದ್ದಾರ್ಥ ಕಳ್ಳಿಮನಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.