ADVERTISEMENT

ಮೇವಿನ ಕೊರತೆಯಾದರೆ ಅಧಿಕಾರಿಗಳೇ ಹೊಣೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 5:34 IST
Last Updated 23 ಏಪ್ರಿಲ್ 2017, 5:34 IST
ಬಸವನಬಾಗೇವಾಡಿಯ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ನಡೆದ ಬರ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಮಾತನಾಡಿದರು
ಬಸವನಬಾಗೇವಾಡಿಯ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ನಡೆದ ಬರ ನಿರ್ವಹಣಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ ಮಾತನಾಡಿದರು   

ಬಸವನಬಾಗೇವಾಡಿ: ‘ತಾಲ್ಲೂಕಿನಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆ­ಯಾಗದಂತೆ ಅಧಿಕಾರಿಗಳು ಗಮನ ಹರಿಸಬೇಕು. ಒಂದು ವೇಳೆ ಅಧಿಕಾ­ರಿಗಳು ಸರಿಯಾಗಿ ಸ್ಪಂದಿಸದೇ ಹೋದರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳ­ಲಾಗುವುದು’ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯ್ತಿಯ ರಾಜೀವ್‌ಗಾಂಧಿ ಸೇವಾ ಕೇಂದ್ರದ ಸಭಾಭವನದಲ್ಲಿ ನಡೆದ ಬರ ನಿರ್ವ­ಹಣಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಪಿಡಿಓಗಳು ತಕ್ಷಣವೇ ಇಓ ಇಲ್ಲವೇ ನಮಗೆ ಮಾಹಿತಿ ನೀಡಬೇಕು. ಅದಕ್ಕೆ ಸಂಬಂಧಿಸಿದಂತೆ ನಾವು ತಕ್ಷಣವೇ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ’ ಎಂದು ಹೇಳಿದರು. ‘ತಾಲ್ಲೂಕಿನಲ್ಲಿ ಬಹುಹಳ್ಳಿ ಕುಡಿ­ಯುವ ನೀರಿನ ಯೋಜನೆ ಇರುವುದ­ರಿಂದ ಇದೂವರೆಗೂ ನೀರಿನ ಸಮಸ್ಯೆ ಉಂಟಾಗಿಲ್ಲ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಇದೆ ಎಂದು ಅಧಿಕಾರಿಗಳು ನಿರಾಳವಾಗಿರದೇ ಇರುವ ನೀರನ್ನು ಜೂನ್್ 15ರವರೆಗೆ ಬಳಕೆ ಮಾಡುವ ನಿಟ್ಟಿನಲ್ಲಿ ಬೇಕಾದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಿಇಓ ಎಂ. ಸುಂದರೇಶಬಾಬು ಮಾತನಾಡಿ ‘ಬರ ನಿರ್ವಹಣೆಯಲ್ಲಿ ಪಿಡಿಓಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡುವ ಜೊತೆಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಕೇಳಿಕೊಂಡು ಬರುವವರೆಗೆ ಕೆಲಸ ಇಲ್ಲ ಎನ್ನದೇ ಅವರಿಗೆ ಉದ್ಯೋಗ ನೀಡ­ಬೇಕು. ತಾಂತ್ರಿಕ ಸಿಬ್ಬಂದಿ ಎನ್ಎಂಆರ್ ಸರಿಯಾಗಿ ದಾಖಲು ಮಾಡಬೇಕು. ಈ ಕುರಿತು ಸರಿಯಾಗಿ ಮಾಹಿತಿ ನೀಡದೇ ಹೋದರೆ ಪಿಡಿಓಗಳನ್ನೇ ಹೊಣೆಗಾರ­ರನ್ನಾಗಿ ಮಾಡಬೇಕಾ­ಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

ಬಹುತೇಕ ಪಿಡಿಓಗಳು ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಸಭೆಗೆ ತಿಳಿಸಿದರು. ದಿಂಡವಾರ ಗ್ರಾಮ ಪಂಚಾಯ್ತಿ ಪಿಡಿಓ ಅವರು ಬೂದಿಹಾಳ ಗ್ರಾಮದಲ್ಲಿ ಖಾಸಗಿ ಜಮೀನು ಒಂದರಲ್ಲಿ ಕೊಳವೆ ಬಾವಿ ಹಾಕಿಸಿದೆ. ಅದಕ್ಕೆ ವಿದ್ಯುತ್ ಸಂಪರ್ಕ ಇಲ್ಲದೇ ಇರುವುದರಿಂದ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ ಎಂದು ಸಭೆ ಗಮನಕ್ಕೆ ತಂದಾಗ, ಜಿಲ್ಲಾಧಿ­ಕಾರಿಗಳು ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿ  ಸೂಕ್ತ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ನೀರು ವಿಭಾಗದ ಎಇಇ ಪಿ.ಎಚ್.ಬಂಡಿ ಮಾತನಾಡಿ ‘ಅರೇ­ಶಂಕರ ಕೆರೆಯಿಂದ 36 ಗ್ರಾಮ­ಗಳಿಗೆ ಕುಡಿಯುವ ನೀರು ಪೂರೈಕೆ­ಯಾಗುತ್ತಿದೆ. ಈ ಕೆರೆಯ ನೀರು ಹೊಲಸಾಗದಂತೆ ನೋಡಿಕೊಳ್ಳಲು ಅಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಯನ್ನು ನೇಮಿ­ಸಬೇಕು’ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಆಗ ಜಿಲ್ಲಾಧಿಕಾರಿ­ಗಳು ಈ ಕುರಿತು ಪರಿಶೀಲನೆ ಮಾಡ­ಲಾಗು­ವುದು ಎಂದು ಹೇಳಿದರು.ಸಭೆಯಲ್ಲಿ ತಹಶೀಲ್ದಾರ್‌ ಎಂ.ಎನ್. ಚೋರಗಸ್ತಿ, ತಾಲ್ಲೂಕು ಪಂಚಾಯ್ತಿ ಇಓ ಬಿ.ಎಸ್.ರಾಠೋಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.