ADVERTISEMENT

ರಸ್ತೆಗಳ ಗುಂಡಿ ಮುಚ್ಚಿ; ಅಪಮಾನ ತಪ್ಪಿಸಿ!

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 10:17 IST
Last Updated 13 ನವೆಂಬರ್ 2017, 10:17 IST
ವಿಜಯಪುರದ ರಾಮನಗರ ಸಂಪರ್ಕಿಸುವ ರಸ್ತೆಯ ದುಃಸ್ಥಿತಿ
ವಿಜಯಪುರದ ರಾಮನಗರ ಸಂಪರ್ಕಿಸುವ ರಸ್ತೆಯ ದುಃಸ್ಥಿತಿ   

ವಿಜಯಪುರ: ಪ್ರವಾಸೋದ್ಯಮದ ಸಮಯವಿದು. ಮುಂದಿನ ಮೂರ್ನಾಲ್ಕು ತಿಂಗಳು ದೇಶ–ವಿದೇಶ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದಲೂ ಜಗದ್ವಿಖ್ಯಾತ ಐತಿಹಾಸಿಕ ಸ್ಮಾರಕಗಳ ವೀಕ್ಷಣೆಗಾಗಿ ವಿಜಯಪುರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ನಿತ್ಯವೂ ಸಹಸ್ರ, ಸಹಸ್ರ ದಾಟುತ್ತದೆ.

ಅಧ್ಯಯನ ಪ್ರವಾಸ, ಶೈಕ್ಷಣಿಕ ಪ್ರವಾಸಕ್ಕೆಂದು ವಿಜಯಪುರದ ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾ ಕಮಾನ್, ಜುಮ್ಮಾ ಮಸೀದಿ, ಮುಲ್ಕ್–ಎ–ಮೈದಾನ್‌ ತೋಪು, ಉಪ್ಪಲಿ ಬುರುಜ್, ಗಗನ ಮಹಲ್ ವೀಕ್ಷಿಸಲು ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಅಸದಳ.

ವಿಜಯಪುರ ವೀಕ್ಷಣೆಗಾಗಿ ನಿತ್ಯವೂ ಹೊರ ಭಾಗದಿಂದ ಸಹಸ್ರಾರು ಜನರು ಭೇಟಿ ನೀಡಿದರೂ, ಕನಿಷ್ಠ ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಜಯಪುರ ಮಹಾನಗರ ಪಾಲಿಕೆ ಆಡಳಿತ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ ವಿಫಲವಾಗಿದೆ ಎಂಬ ದೂರು ಪ್ರವಾಸಿಗರೂ ಸೇರಿದಂತೆ ಸ್ಥಳೀಯರದ್ದಾಗಿದೆ.

ADVERTISEMENT

‘ವಿಜಯಪುರ ಐತಿಹಾಸಿಕ ನಗರ ಎಂಬುದು ಜಗದ್ವಿಖ್ಯಾತ. ಇದೀಗ ಪ್ರವಾಸೋದ್ಯಮದ ಸಮಯ ಆರಂಭಗೊಂಡಿದೆ. ಅಕ್ಟೋಬರ್‌ನಿಂದ ಆರಂಭಗೊಳ್ಳುವ ಪ್ರವಾಸಿ ದಿನಗಳು ಫೆಬ್ರುವರಿ ಅಂತ್ಯದವರೆಗೂ ಪ್ರವಾಸಿಗರ ದಟ್ಟಣೆಯಿಂದ ಕೂಡಿರುತ್ತದೆ. ಎತ್ತ ನೋಡಿದರೂ ಪ್ರವಾಸಿಗರ ತಂಡಗಳೇ ಗೋಚರಿಸುತ್ತವೆ. ಈ ಐದು ತಿಂಗಳ ಅವಧಿಯಲ್ಲಿ ಲಕ್ಷ, ಲಕ್ಷ ಸಂಖ್ಯೆಯ ಜನರು ನಗರಕ್ಕೆ ಭೇಟಿ ನೀಡಿ ಇಲ್ಲಿನ ಸ್ಮಾರಕಗಳನ್ನು ವೀಕ್ಷಿಸುತ್ತಾರೆ.

ಆದರೆ ಇದಕ್ಕೆ ಪೂರಕವಾಗಿರಬೇಕಿದ್ದ ನಗರದ ರಸ್ತೆಗಳು ವ್ಯತಿರಿಕ್ತವಾಗಿವೆ. ನಗರ ಸಂಪರ್ಕಿಸುವ ರಸ್ತೆಗಳು ಗುಂಡಿ ಬಿದ್ದಿರುವ ಜತೆಗೆ, ನಗರದೊಳಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳೇ ಗುಂಡಿಮಯವಾಗಿವೆ. ಇನ್ನೂ ಸ್ಮಾರಕಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸ್ಥಿತಿ ಭಿನ್ನವಾಗಿಲ್ಲ. ನಗರದೊಳಗಿನ ರಸ್ತೆಗಳ ಚಿತ್ರಣ ಹೇಳತೀರದು’ ಎಂದು ಸಿದ್ದು ತೊರವಿ ಅಸಮಾಧಾನ ವ್ಯಕ್ತಪಡಿಸಿದರು.

‘ನಗರದ ಐತಿಹಾಸಿಕ ಸ್ಮಾರಕಗಳನ್ನು ಸಂಪರ್ಕಿಸುವ ಹೆರಿಟೇಜ್‌ ಪಾತ್‌ ನಿರ್ಮಾಣ ಘೋಷಣೆಗೆ ಸೀಮಿತವಾಗಿದೆ. ನಗರದ ಪ್ರಮುಖ ರಸ್ತೆಗಳೇ ಗುಂಡಿಮಯ. ಬಸ್‌ ನಿಲ್ದಾಣದ ಮುಂಭಾಗವೇ ಹತ್ತಾರು ಗುಂಡಿಗಳು. ಪ್ರವಾಸಿಗರು ನಗರ ಪ್ರವೇಶಿಸುತ್ತಿದ್ದಂತೆ ಗುಂಡಿಗಳ ಸ್ವಾಗತ ಆರಂಭಗೊಳ್ಳುತ್ತದೆ. ಇದರ ಬೆನ್ನಿಗೆ ಪ್ರವಾಸಿಗರು ಹಿಡಿಶಾಪ ಹಾಕಿಕೊಂಡೇ ವಿಜಯಪುರ ಆರಂಭಿಸುತ್ತಾರೆ. ಇಲ್ಲಿನ ರಸ್ತೆಗಳ ಶೋಚನೀಯ ಸ್ಥಿತಿ ಕಂಡು ವಿಜಯಪುರಿಗರನ್ನು ಹೀಯಾಳಿಸುತ್ತಾರೆ’ ಎಂದು ಸಿದ್ದು ಹೇಳಿದರು.

ಇನ್ನಾದ್ರೂ ದುರಸ್ತಿಗೊಳಿಸಿ: ‘ನಗರದ ಪ್ರಮುಖ ರಸ್ತೆಗಳ ಸ್ಥಿತಿ ಏಳೆಂಟು ತಿಂಗಳಿಂದ ಅಯೋಮಯವಾಗಿದೆ. ಒಂದೇ ಒಂದು ರಸ್ತೆಯೂ ಸಂಚಾರಕ್ಕೆ ಯೋಗ್ಯವಾಗಿಲ್ಲ. ಅಕ್ಟೋಬರ್‌ ಮಧ್ಯದವರೆಗೂ ವರ್ಷಧಾರೆಯ ನೆಪದಲ್ಲಿ ಮಹಾನಗರ ಪಾಲಿಕೆ ಆಡಳಿತ ಒಂದೇ ಒಂದು ರಸ್ತೆಯ ಗುಂಡಿ ಮುಚ್ಚಲಿಲ್ಲ.

ಜನರ ಆಕ್ರೋಶ ಹೆಚ್ಚಿದ್ದ ಕಡೆ, ಮಾಧ್ಯಮಗಳಲ್ಲಿ ವರದಿ ಬಿತ್ತರವಾಗಿದ್ದ ಭಾಗದಲ್ಲೂ ಬೇಕಾಬಿಟ್ಟಿ ಜಲ್ಲಿಕಲ್ಲು–ಮಣ್ಣು ತುಂಬಿ ರಸ್ತೆ ದುರಸ್ತಿಯ ಕೈ ತೊಳೆದುಕೊಳ್ಳುವ ಕೆಲಸ ಮಾಡಿ, ಬೋಗಸ್‌ ಬಿಲ್‌ ಪಡೆದಿದ್ದೇ ಪಾಲಿಕೆ ಆಡಳಿತದ ಸಾಧನೆಯಾಗಿದೆ’ ಎಂದು ನಗರದ ನಿವಾಸಿ ನಾಸೀರ್ ಬಾಗವಾನ ಅಸಮಾಧಾನ ವ್ಯಕ್ತಪಡಿಸಿದರು.

‘ವಿಜಯಪುರದಲ್ಲಿ ಮಹಾನಗರ ಪಾಲಿಕೆ ಆಡಳಿತ ಅಸ್ಥಿತ್ವದಲ್ಲಿದೆಯಾ? ನಗರ ಪ್ರತಿನಿಧಿಸುವ ಶಾಸಕರು ನಿತ್ಯ ಇವೇ ರಸ್ತೆಗಳಲ್ಲಿ ಸಂಚರಿಸುತ್ತಿದ್ದರೂ, ಗುಂಡಿ ಮುಚ್ಚಿಸಬೇಕು ಎಂಬ ಕಲ್ಪನೆ ಇದುವರೆಗೂ ಯಾರಿಗೂ ಬಂದಿಲ್ಲವೇ ? ದಕ್ಷ ಅಧಿಕಾರಿಗಳು ಎಲ್ಲಿ ಹೋದರು ? ಅಭಿವೃದ್ಧಿಯ ಹರಿಕಾರರು ನಗರದಿಂದ ನಾಪತ್ತೆಯಾದರಾ ? ಪ್ರವಾಸಿಗರೆದುರು ನಮಗಾಗುವ ಅಪಮಾನ ತಪ್ಪಿಸುವುದು ಯಾವಾಗ ? ಎಂದು ಬಾಗವಾನ ‘ಪ್ರಜಾವಾಣಿ’ ಬಳಿ ಆಕ್ರೋಶ ವ್ಯಕ್ತಪಡಿಸಿದರು.

‘ಏಳೆಂಟು ತಿಂಗಳಿಂದ ರಸ್ತೆಗಳು ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ. ಯಾರೊಬ್ಬರು ಇತ್ತ ತಲೆ ಹಾಕ್ತಿಲ್ಲ. ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ರಾತ್ರಿ ವೇಳೆ ರಸ್ತೆಯ ಗುಂಡಿಗಳಲ್ಲಿ ಬಿದ್ದು ಗಾಯಗೊಂಡವರ ಆಕ್ರಂದನ ಯಾರಿಗೂ ಕೇಳುತ್ತಿಲ್ಲ. ಪ್ರಮುಖ ರಸ್ತೆಗಳೇ ಹಾಳಾಗಿವೆ’ ಎಂದು ರಾಜು ಶಿರಶ್ಯಾಡ ಪಾಲಿಕೆ ಆಡಳಿತದ ವಿರುದ್ಧ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.