ADVERTISEMENT

ರಾಜ್ಯ ಹೆದ್ದಾರಿ ಕಾಮಗಾರಿ ತಡೆದು ಪ್ರತಿಭಟನೆ

ಡಾಂಬರೀಕರಣ ಕಳಪೆ ಆರೋಪ: ಗುತ್ತಿಗೆದಾರರು, ಎಂಜಿನಿಯರ್‌ ವಿರುದ್ಧ ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 6:26 IST
Last Updated 22 ಏಪ್ರಿಲ್ 2017, 6:26 IST
ಮುದ್ದೇಬಿಹಾಳ: ತಾಲ್ಲೂಕಿನ ಅಬ್ಬಿಹಾಳ ಕ್ರಾಸ್ ಬಳಿ  ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ನಡೆಸುತ್ತಿರುವ ಹುನ­ಗುಂದ– ತಾಳಿಕೋಟೆ ರಾಜ್ಯ ಹೆದ್ದಾರಿ ಕಾಮಗಾರಿ ಪೂರ್ಣ ಕಳಪೆ ಗುಣ­ಮಟ್ಟದಿಂದ  ನಡೆದಿದೆ ಎಂದು ಆರೋ­ಪಿಸಿ ಗುಡ್ನಾಳ, ಅಬ್ಬಿಹಾಳ, ಜಮ್ಮಲದಿನ್ನಿ ಗ್ರಾಮಸ್ಥರು  ಕಾಮಗಾರಿ ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು. 
 
ಈಗಾಗಲೇ ಇದ್ದ ರಸ್ತೆಯ ಡಾಂಬರ್ ಮೇಲ್ಪದರ ಸಂಪೂರ್ಣ ತೆಗೆದುಹಾಕಿ ಹೊಸದಾಗಿ ಡಾಂಬರೀಕರಣ ಮಾಡಿಲ್ಲ. ಮೊದಲಿದ್ದ ಡಾಂಬರ್‌ ರಸ್ತೆ ಮೇಲೆಯೇ ಮರು ಡಾಂಬರೀಕರಣ ಮಾಡಲಾಗುತ್ತಿದೆ.
 
ಇದರಿಂದ ಮೇಲಿನ ಪದರ ಗಟ್ಟಿಮುಟ್ಟಾಗಿ ರಸ್ತೆಗೆ ಅಂಟಿಕೊಂಡಿಲ್ಲ. ಹೀಗಾಗಿ ಕೆಲವೇ ದಿನಗಳಲ್ಲಿ ಕಿತ್ತಿಹೋಗುತ್ತದೆ ಎಂದು ಗ್ರಾಮಸ್ಥರ ತಂಡದಲ್ಲಿದ್ದ ಬಿಇ ಸಿವಿಲ್ ಪದವೀಧರ ಮೊಹಮ್ಮದ್‌ ರಫೀಕ ಗೋಗಿ ಆರೋಪಿಸಿದರು.
 
ಡಾಂಬರೀಕರಣಕ್ಕಿಂತ ಮೊದಲು ರಸ್ತೆಯನ್ನು ಗಟ್ಟಿ ಮಾಡಲು ನಿತ್ಯ 10- 12 ಟ್ಯಾಂಕರ್ ನೀರು ಸಿಂಪಡಿಸುವ ಬದಲು ಮೂಕಿಹಾಳ ಹಳ್ಳದಿಂದ 2-3 ಟ್ಯಾಂಕರ್ ನೀರನ್ನು ಮಾತ್ರ ಸಿಂಪಡಿಸಲಾಗುತ್ತಿದೆ. ಕಾಮಗಾರಿಗೆ ಉತ್ತಮ ಖಡಿ ಬಳಸುತ್ತಿಲ್ಲ. ಸಣ್ಣ ಸಣ್ಣ ಕಲ್ಲುಗಳನ್ನು, ಮಿಣಜಗಿ ಫರಸಿ ತುಕಡಿಗಳನ್ನು ಮಿಕ್ಸ್ ಮಾಡಲಾಗುತ್ತಿದೆ ಎಂದು ದೂರಿದರು.
 
ಪಕ್ಕಾ ಗರಸು ಮಣ್ಣು ಬದಲು ಧೂಳೆಬ್ಬಿಸುವ ಹಾಳು ಮಣ್ಣು ಮಿಶ್ರಿತ ಕಳಪೆ ಮಣ್ಣು ಬಳಸಲಾಗುತ್ತಿದೆ. ಡಬ್ಲುಬಿಎಂ ಹಾಕಿ ರಸ್ತೆ ಕೆಳಭಾಗ ಗಟ್ಟಿಗೊಳಿಸಲಾಗುತ್ತಿದೆ. ಡಾಂಬರ್ ಪದರಿಗೆ ಗುಣಮಟ್ಟದ ಡಾಂಬರ್‌ ಬಳಸುತ್ತಿಲ್ಲ.  
 
ಉತ್ತಮ ಡಾಂಬರ್‌ ಬಳಸಿದಲ್ಲಿ ಖಡಿಗಳು ಒಂದಕ್ಕೊಂದು ಬಿಗಿಯಾಗಿ ಜಿಗುಟಾಗಿ ಅಂಟಿಕೊಳ್ಳ­ಬೇಕು. ಆದರೆ ಇಲ್ಲಿ ಕಳಪೆ ಡಾಂಬರ್‌ ಬಳಸುತ್ತಿರುವ ಕಾರಣ ಖಡಿಗಳು ಒಂದಕ್ಕೊಂದು ಅಂಟಿಕೊಳ್ಳುತ್ತಿಲ್ಲ ಎಂದು ದೂರಿದರು.
 
ಈ ವೇಳೆ ಕಾಮಗಾರಿ ಉಸ್ತುವಾರಿ ಎಂಜಿನಿಯರ್ ಪ್ರಶಾಂತ ಮತ್ತು ಲ್ಯಾಬ್‌ ಟೆಕ್ನಿಷಿಯನ್ ಮಧು ಜೊತೆ ವಾಗ್ವಾದ ನಡೆಸಿದ ಗ್ರಾಮಸ್ಥರು ಸಾರ್ವಜನಿಕರು, ಸರ್ಕಾರದ ಕಣ್ಣಿಗೆ ಮಣ್ಣೆರಚಿ ಕೋಟ್ಯಂತರ ರೂಪಾಯಿ ಲೂಟಿ ಹೊಡೆಯುವ ವ್ಯವಸ್ಥಿತ ಸಂಚು ನಡೆದಿದೆ.
 
ಆಲಕೊಪ್ಪರ ಭಾಗದಲ್ಲಿರುವ ರಾಜಕಾರಣಿಗಳಿಗೆ ಸೇರಿದ ಕ್ರಷಿಂಗ್ ಘಟಕಗಳಿಂದ ಕಳಪೆ ಗುಣಮಟ್ಟದ ಖಡಿ ತಂದು ಬಳಸಲಾಗುತ್ತಿದೆ. ಇದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಆಪಾದಿಸಿದರು.
 
ಕೆಲ ದಿನಗಳ ಹಿಂದೆ ದೇವರ ಹುಲ­ಗ­ಬಾಳ ಬಳಿ ಧರಣಿ ಸತ್ಯಾಗ್ರಹ ನಡೆಸಿದ್ದ ಸಂದರ್ಭ ಗುಣಮಟ್ಟದ ಕಾಮಗಾರಿ ನಡೆಸುವ ಭರವಸೆ ನೀಡಿದ್ದ ಕೆಆರ್‌­ಡಿಸಿಲ್ ಅಧಿಕಾರಿಗಳು ಮಾತು ತಪ್ಪಿ­ದ್ದಾರೆ. ತಜ್ಞರು, ಜನರ ಕಣ್ಣಿಗೆ ಮಣ್ಣೆರಚಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ.
 
ಇದು ಹೀಗೆಯೇ ಮುಂದುವರಿದಲ್ಲಿ ಮತ್ತೊಮ್ಮೆ ಧರಣಿ ನಡೆಸಿ ಪ್ರತಿಭ­ಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಬಿ.ಎ.ಬಿರಾದಾರ, ಎ.ಆರ್.ಪಟೇಲ, ಮಕಬುಲ್ ನಾವದಗಿ, ಪುಟ್ಟು ತಳೇವಾಡ, ಸೋಮನಗೌಡ ಮಂಗ್ಯಾಳ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.