ADVERTISEMENT

ರೈಲಿಗೆ ಲಾರಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 21 ಮೇ 2017, 7:00 IST
Last Updated 21 ಮೇ 2017, 7:00 IST

ಆಲಮಟ್ಟಿ(ನಿಡಗುಂದಿ):  ಇಲ್ಲಿನ ಬೇನಾಳ ಬಳಿಯ ರೈಲ್ವೆ ಕ್ರಾಸಿಂಗ್‌ ಬಳಿ ಶನಿವಾರ ಸಂಜೆ ಲಾರಿಯೊಂದು ಹುಬ್ಬಳ್ಳಿ–ಸೋಲಾಪುರ ಪ್ಯಾಸೆಂಜರ್‌ ರೈಲಿಗೆ ಡಿಕ್ಕಿಯಾಗಿದ್ದು, ಲಾರಿ ಚಾಲಕ ಹಾಗೂ ರೈಲು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಡಿಕ್ಕಿಯಾದ ಲಾರಿಯು, ರೈಲ್ವೆ ಎಂಜಿನ್‌ನ ಎಡಬದಿಯಿಂದ ಕೊನೆಯ ಬೋಗಿಯವರೆಗೂ ನಿರಂತರ ಬಡಿಯುತ್ತಲೇ ಸಾಗಿದ್ದರಿಂದ ಲಾರಿ ನಜ್ಜುಗುಜ್ಜಾಗಿದೆ. ಲಾರಿ ಚಾಲಕ, ಹೂವಿನ ಹಿಪ್ಪರಗಿಯ ಪ್ರಭು ಪರಶುರಾಮ ಚಲವಾದಿ ಅವರಿಗೆ ಗಂಭೀರ ಗಾಯಗಳಾಗಿವೆ.

ರೈಲು ಬೋಗಿಯ ಬಾಗಿಲ ಬಳಿ ನಿಂತಿದ್ದ ಇಂಡಿ ತಾಲ್ಲೂಕಿನ ಚಿಕ್ಕಬೇವೂರ ಗ್ರಾಮದ ಶ್ರೀಕಾಂತ ಮಾಲಗಾರ ಅವರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೇನಾಳ ರೈಲು ನಿಲ್ದಾಣದಲ್ಲಿ ನೆರವಿಗೆ ಧಾವಿಸಿದ ಗ್ರಾಮಸ್ಥರು, ಇಬ್ಬರಿಗೂ  ನಿಡಗುಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದರು. ಆಬಳಿಕ, ಪ್ರಭು ಅವರನ್ನು ಬಾಗಲಕೋಟೆ ಹಾಗೂ ಶ್ರೀಕಾಂತ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ADVERTISEMENT

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನೂ ಹೆಚ್ಚಿನ ಜನರಿಗೆ ಗಾಯವಾಗಿರುವ ಸಾಧ್ಯತೆಯಿದ್ದು, ರೈಲು ಕಿಟಕಿಯೊಳಗೆ ಕೈ ಹಾಕಿದವರಿಗೆ, ರೈಲ್ವೆ ಬಾಗಿಲು ಬಳಿ ನಿಂತವರಿಗೂ ಗಾಯವಾಗಿರುವ ಸಾಧ್ಯತೆಯಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಆಲಮಟ್ಟಿ ಮತ್ತು ವಿಜಯಪುರ ಮಧ್ಯೆ ರೈಲ್ವೆ ದ್ವಿಪಥ ಹಳಿಯ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಸ್ಸಾ ಕನ್‌ಸ್ಟ್ರಕ್ಷನ್‌ ಕಂಪೆನಿಗೆ ಸೇರಿದ ಲಾರಿ ರೈಲಿಗೆ ಡಿಕ್ಕಿ ಹೊಡೆದಿದೆ.

‘ಬೇನಾಳ ಬಳಿ ರೈಲು ಹಳಿಯ ತಿರುವು ಇದ್ದು, ಅಪಾಯಕಾರಿಯಾಗಿದೆ. ರೈಲು ಬರುವ ಯಾವುದೇ ಮುನ್ಸೂಚನೆಯೂ ಗೊತ್ತಾಗುವುದಿಲ್ಲ. ಇದರಿಂದ ಇಂಥ ಅಪಘಾತ ಸಂಭವಿಸಿದೆ. ಕಾಮಗಾರಿ ನಡೆಯುತ್ತಿರುವುದರಿಂದ ಈ ರೈಲ್ವೆ ಗೇಟ್‌ಗೆ ಕಾವಲುಗಾರನನ್ನು ನೇಮಿಸುವಂತೆ ಸೂಚಿಸಿದರೂ ರೈಲ್ವೆ ಇಲಾಖೆ ಗಮನಹರಿಸಿಲ್ಲ’ ಎಂದು ಕಾಮಗಾರಿ ನಿರ್ವಹಿಸುತ್ತಿರುವ ಕಂಪೆನಿಯ ಎಂಜಿನಿಯರ್‌ ಸುನೀಲ್‌ ತಿಳಿಸಿದರು.

ಸೋಲಾಪುರ ಕಡೆಗೆ ತೆರಳುತ್ತಿದ್ದ ಹುಬ್ಬಳ್ಳಿ- –ಸೋಲಾಪುರ ಪ್ಯಾಸೆಂಜರ್ ರೈಲು (56906) ಬೇನಾಳ ಬಳಿ ರೈಲ್ವೆ ಹಳಿ ಕ್ರಾಸಿಂಗ್ (ಬಾವಾಸಾಬ್ ಗುಡ್ಡದ ಹತ್ತಿರ) ಮಾಡುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರು ಸೇರಿದಂತೆ ಲಾರಿ ಚಾಲಕನಿಗೆ  ಗಂಭೀರ ಗಾಯಗಳಾದ ಘಟನೆ ಶನಿವಾರ ಸಂಜೆ 6.30 ರ ಸುಮಾರು ಸಂಭವಿಸಿದೆ.

ಡಿಕ್ಕಿಯಿಂದಾಗಿ ಲಾರಿಯು ರೈಲ್ವೆ ಎಂಜಿನ್‌ನ ಎಡಬದಿಯಿಂದ ರೈಲು ಡಬ್ಬಿಯ ಕೊನೆಯವರೆಗೂ ನಿರಂತರ ಬಡಿಯುತ್ತಲೇ ಸಾಗಿದೆ. ಇದರಿಂದಾಗಿ ಲಾರಿ ಚಾಲಕ ಹೂವಿನಹಿಪ್ಪರಗಿ ಗ್ರಾಮದ ಪ್ರಭು ಪರಶುರಾಮ ಚಲವಾದಿಗೆ ಗಂಭೀರ ಗಾಯವಾಗಿದೆ. ಲಾರಿ ನುಜ್ಜುಗುಜ್ಜಾಗಿದೆ.

ಲಾರಿ ರೈಲಿಗೆ ಬಡಿದ ಪರಿಣಾಮ ರೈಲಿನ ಪ್ರಯಾಣಿಕ ಬಾಗಿಲು ಬಳಿ ನಿಂತಿದ್ದ ಇಂಡಿ ತಾಲ್ಲೂಕಿನ ಚಿಕ್ಕಬೇವನೂರ ಗ್ರಾಮದ ಶ್ರೀಕಾಂತ ಮಾಲಗಾರ (19) ಅವರಿಗೂ ಗಂಭೀರ ಗಾಯವಾಗಿದೆ.

ಲಾರಿಯ ಬಡಿತಕ್ಕೆ ರೈಲಿನಲ್ಲಿರುವ ಇನ್ನೂ ಹಲವಾರು ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯಗಳಾಗಿರುವ ಸಾಧ್ಯತೆಯಿದ್ದು, ಶ್ರೀಕಾಂತ ಮಾಲಗಾರ ಮುಂದಿನ ಬೇನಾಳ ರೈಲು ನಿಲ್ದಾಣದಲ್ಲಿ ಇಳಿದಿದ್ದಾನೆ.

ಕೂಡಲೇ ಬೇನಾಳ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಗಾಯಗೊಂಡಿದ್ದ ಇಬ್ಬರನ್ನು ನಿಡಗುಂದಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪರಶುರಾಮ ಚಲವಾದಿಯನ್ನು ಬಾಗಲಕೋಟೆಗೆ, ಶ್ರೀಕಾಂತ ಮಾಲಗಾರ ಅವರನ್ನು ವಿಜಯಪುರ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ತಪ್ಪಿದ ಭಾರಿ ಅನಾಹುತ
‘ಲಾರಿಯು ಬಂದ್ ಆಗಿಲ್ಲ. ಬಡಿದ ರಭಸಕ್ಕೆ ಎಕ್ಸಲರೇಟರ್ ಜಾಮ್ ಆಗಿ ನಿರಂತರ ಚಾಲು ಸ್ಥಿತಿಯಲ್ಲಿತ್ತು. ಲಾರಿಯ ಡಿಕ್ಕಿಯ ರಭಸಕ್ಕೆ ರೈಲಿನ ಬೋಗಿಗಳು ಅಲುಗಾಡಿವೆ. ಅದೃಷ್ಟವಶಾತ್ ರೈಲು ಹಳಿ ತಪ್ಪಿಲ್ಲ. ಹಾಗೇನಾದರೂ ಆಗಿದ್ದರೆ ಭಾರಿ ಅನಾಹುತ ಸಂಭವಿಸುತ್ತಿತ್ತು’ ಎಂದು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.