ADVERTISEMENT

ಶೋಷಿತರ ಏಳ್ಗೆ ಸಹಿಸದವರಿಂದ ಅಶಾಂತಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 6:22 IST
Last Updated 21 ಜುಲೈ 2017, 6:22 IST

ವಿಜಯಪುರ: ‘ಡಾ.ಬಾಬಾಸಾಹೇಬ್ ಅಂಬೇಡ್ಕರ್ ರೂಪಿಸಿದ ಸಂವಿಧಾನದ ಬಲದಿಂದ ಶೋಷಿತರು ಉನ್ನತ ಹುದ್ದೆ ಅಲಂಕರಿಸಿದ್ದಾರೆ, ಇದನ್ನು ಸಹಿಸದ ಕೆಲವರು ದೇಶದಲ್ಲಿ ಶಾಂತಿ ಕದಡಿ, ಸಮಗ್ರತೆ ಹಾಳು ಮಾಡುವ ವ್ಯವಸ್ಥಿತ ಕೆಲಸದಲ್ಲಿ ತಲ್ಲೀನರಾಗಿದ್ದಾರೆ’ ಎಂದು ವಕೀಲ ಕೆ.ಎಫ್.ಅಂಕಲಗಿ ವಿಷಾದಿಸಿದರು.

ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಮುಸ್ಸಂಜೆ ಹಮ್ಮಿಕೊಳ್ಳಲಾಗಿದ್ದ ‘ಮೂರು ನುಡಿ ನೂರು ದುಡಿ’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮಂಡಿಸಿದ ಅವರು ‘ದೇಶದಲ್ಲಿ ಮಾನವನನ್ನು ದನಕ್ಕೆ ಸಮನಾಗಿ ತಂದು ನಿಲ್ಲಿಸಲಾಗಿದೆ. ಗೋ ರಕ್ಷಣೆ, ನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಮಾನವ ಕುಲದ ಮೇಲೆ ಶೋಷಣೆ ನಡೆಯುತ್ತಿ ರುವುದು ನಿಜಕ್ಕೂ ದುರ್ದೈವ’ ಎಂದರು.

‘ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಜೀವಿತದ ಕೊನೆ ದಿನಗಳಲ್ಲಿ ಅರ್ಥಪೂರ್ಣವಾದ ಮಾತುಗಳನ್ನು ಹೇಳಿದ್ದರು. ಓ ದೇಶ ಬಾಂಧವರೇ, ಸಾಮಾಜಿಕ ನ್ಯಾಯದ ರಥವನ್ನು ನಾನು ಇಲ್ಲಿವರೆಗೆ ಎಳೆದು ತಂದಿದ್ದೇನೆ, ಸಾಧ್ಯ ವಾದರೆ ಅದನ್ನು ಮುಂದಕ್ಕೆ ಒಯ್ಯಿರಿ. ಇಲ್ಲವಾದರೆ ಅಲ್ಲಿಯೇ ಇರಲು ಬಿಡಿ. ಆದರೆ ಅದನ್ನು ಮತ್ತಷ್ಟು ಹಿಂದಕ್ಕೆ ತಳ್ಳಬೇಡಿ... ಎಂದಿದ್ದರು.  ದೇಶದ ಭವಿಷ್ಯದ ದೃಷ್ಟಿಕೋನವನ್ನಿಟ್ಟು ಕೊಂಡು ಅವರು ಈ ಮಾತು ಹೇಳಿದ್ದರು ಎಂಬುದು ಇದೀಗ ತೋರುತ್ತದೆ’ ಎಂದು ಅಂಕಲಗಿ ವಿಶ್ಲೇಷಿಸಿದರು.

ADVERTISEMENT

‘ಡಾ.ಬಿ.ಆರ್‌.ಅಂಬೇಡ್ಕರ್‌ ದಲಿತ ರನ್ನು ಮಾತ್ರ ತನ್ನ ಜನರು ಎಂದು ಕರೆಯಲಿಲ್ಲ, ಶ್ರೇಣಿಕೃತ ವ್ಯವಸ್ಥೆಯಲ್ಲಿ ನೋವುಂಡ ಪ್ರತಿಯೊಂದು ಸಮುದಾಯವನ್ನು ತನ್ನ ಜನರು’ ಎಂದು ಕರೆದರು ಎಂದರು.

ಸುಭದ್ರ ರಾಷ್ಟ್ರ ನಿರ್ಮಾಣ: ‘ಡಾ.ಬಾಬಾಸಾಹೇಬ್‌ ರಚಿಸಿದ ಶ್ರೇಷ್ಠ ಸಂವಿಧಾನದ ಫಲವಾಗಿಯೇ ಭಾರತ ಇಂದು ವಿಶ್ವದ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬೆಳೆದು ನಿಂತಿದೆ. ನಮಗಿಂತ ಹಿಂದೆ ಸ್ವಾತಂತ್ರ್ಯಗೊಂಡ ಪಾಕಿಸ್ತಾನ ಶಾಶ್ವತವಾದ ಸಂವಿಧಾನ ಹೊಂದಲು ಸಾಧ್ಯವಾಗಲಿಲ್ಲ, ಅದು ಸ್ವಾತಂತ್ರ್ಯವಾದ ಅನೇಕ ವರ್ಷದ ಬಳಿಕ ಸಂವಿಧಾನ ರಚಿಸಿಕೊಂಡಿತು, ಕೆಲ ವರ್ಷಗಳ ಬಳಿಕ ಅದು ರದ್ಧಾಗಿ ಹೊಸ ಸಂವಿಧಾನ ಅನುಷ್ಠಾನಕ್ಕೆ ತರಲಾಯಿತು.

ಅದು ಸಹ ಬಹುಕಾಲ ಉಳಿಯಲಿಲ್ಲ, ಪಕ್ಕದ ಶ್ರೀಲಂಕಾದಲ್ಲಿ ಜನಾಂಗೀಯ ದ್ವೇಷ ಮಟ್ಟ ಹಾಕುವ ಸಂವಿಧಾನ ರೂಪುಗೊಳ್ಳಲೇ ಇಲ್ಲ. ಆದರೆ ನಮ್ಮಲ್ಲಿ ಮಾತ್ರ ಡಾ.ಬಿ.ಆರ್.ಅಂಬೇಡ್ಕರ್‌ ಹಗಲಿ ರುಳೆನ್ನದೇ ಸಿದ್ಧಪಡಿಸಿದ ಸಂವಿಧಾನ ಬಲವಾಗಿ ಭಾರತ ವಿಶ್ವದಲ್ಲಿಯೇ ಪ್ರಮುಖ ಸ್ಥಾನ ಪಡೆಯುವಂತೆ ಮಾಡಿದೆ’ ಎಂದು ಅಂಕಲಗಿ ಹೇಳಿದರು.

ವಿಡಿಎ ಅಧ್ಯಕ್ಷ ಆಜಾದ್ ಪಟೇಲ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾಧಿ ಕಾರಿ ಕೆ.ಬಿ.ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಸಿಇಓ ಸುಂದರೇಶಬಾಬು, ಉಪ ವಿಭಾಗಾಧಿಕಾರಿ ಡಾ.ಶಂಕರ ವಣಕ್ಯಾಳ, ಡಿವೈಎಸ್‌ಪಿ ಗಣೇಶ, ಮುಖಂಡರಾದ ಅಡಿವೆಪ್ಪ ಸಾಲಗಲ್ಲ, ಭೀಮರಾಯ ಜಿಗಜಿಣಗಿ, ಅಭಿಷೇಕ ಚಕ್ರವರ್ತಿ, ಶ್ರೀನಾಥ ಪೂಜಾರಿ, ಸಿದ್ಧು ರಾಯಣ್ಣವರ, ತಿಪ್ಪಣ್ಣ ಮಾದರ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ ಪೋತದಾರ ಸ್ವಾಗತಿಸಿದರು. ರಾಜಶೇಖರ ದೈವಾಡಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.