ADVERTISEMENT

ಸಮಾಜದಲ್ಲಿ ಸಮಾನತೆ ಅಗತ್ಯ

ಸಾರಿಪುತ್ರ ಬುದ್ಧ ವಿಹಾರ ಉದ್ಘಾಟಿಸಿ ಸಚಿವ ಎಂ.ಬಿ.ಪಾಟೀಲ ಭಾಷಣ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 13:18 IST
Last Updated 22 ಮಾರ್ಚ್ 2018, 13:18 IST

ವಿಜಯಪುರ: ‘ಬಸವ, ಬುದ್ಧ, ಅಂಬೇಡ್ಕರರು ಕಂಡ ಕನಸು ನನಸು ಮಾಡಲು ಅವರ ತತ್ವಾದರ್ಶಗಳ ಕುರಿತು ಪ್ರತಿಯೊಬ್ಬರೂ ಅವಲೋಕನ ಮಾಡಿಕೊಳ್ಳುವುದು ಅತ್ಯವಶ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಇಲ್ಲಿನ ಜಲನಗರದಲ್ಲಿ ಸಾರಿಪುತ್ರ ಬುದ್ಧ ವಿಹಾರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಸಮಾಜ ಸುಧಾರಣೆಗಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟ ಮಹಾನ್‌ ಪುರುಷರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರೂ ಒಂದು ಎಂಬ ಭಾವನೆಯಿಂದ ಬಾಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದರು.

‘ಜಗತ್ತು ಸುಂದರವಾಗಬೇಕು. ಸಮಾಜದಲ್ಲಿ ಸಮಾನತೆ ಬರಬೇಕು ಎಂಬ ಮಹತ್ತರ ಉದ್ದೇಶದಿಂದ ಗೌತಮ ಬುದ್ಧ ತನ್ನ ಸಾಮ್ರಾಜ್ಯವನ್ನು ತ್ಯಜಿಸಿ ಮಾನವೀಯ ಮೌಲ್ಯ ಒಳಗೊಂಡ ಬೌದ್ಧ ಧರ್ಮ ಸ್ಥಾಪಿಸಿದರು’ ಎಂದರು.

ADVERTISEMENT

‘ಸಮಾಜ ಸುಧಾರಕ ಬಸವಣ್ಣ 12ನೇ ಶತಮಾನದಲ್ಲಿ ಸ್ಥಾಪಿಸಿದ ಲಿಂಗಾಯತ ಧರ್ಮವನ್ನು ಮರುಸ್ಥಾಪನೆಗೆ ಮುಂದಾಗಿರುವ ನಾವು 10 ತಿಂಗಳಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಅಂದು ಅವರೆಷ್ಟು ಕಷ್ಟ ಅನುಭವಿಸಿರಬೇಕು. ಏನೇ ಆಗಲಿ ಪ್ರತ್ಯೇಕ ಲಿಂಗಾಯತ ಧರ್ಮ ಆಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದರು.

‘ಬುದ್ಧ ವಿಹಾರ ಯಾವ ಕಾರಣಕ್ಕೆ ನಿರ್ಮಾಣಗೊಂಡಿದ್ದೆ ಅದಕ್ಕೆ ಬಳಕೆಯಾಗಬೇಕು. ರಾಜಕೀಯವನ್ನು ಗೇಟಿನ ಹೊರಗೆ ಬಿಟ್ಟು, ಒಳ ಪ್ರವೇಶ ಮಾಡಬೇಕು. ಇಲ್ಲಿನ ಎಲ್ಲ ಚಟುವಟಕೆಗಳು ಹೃದಯದಿಂದ ನಡೆಯಬೇಕು. ಬುದ್ಧನ ಪ್ರಾರ್ಥನೆ, ತತ್ವಾದರ್ಶಗಳು ಪ್ರಚಾರಗೊಳ್ಳಬೇಕು. ತರಾತುರಿಯಲ್ಲಿ ಉದ್ಘಾಟನೆ ನಡೆದಿದೆ. ಎಲ್ಲ ಕೆಲಸ ಪೂರ್ಣಗೊಂಡ ನಂತರ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸುಶೀಲಕುಮಾರ ಶಿಂಧೆ ಅವರನ್ನು ಕರೆಸಿ, ಸುಮಾರು 50 ಸಾವಿರ ಜನರು ಸೇರಿಸಿ ಬೃಹತ್‌ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡೋಣ’ ಎಂದು ಭರವಸೆ ನೀಡಿದರು.

‘ಸಂವಿಧಾನ ಬದಲಿಸುವುದಕ್ಕಾಗಿಯೇ ನಾವು ಬಂದಿರುವುದು ಎಂದು ಹೇಳುವ ಮೂಲಕ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಡಾ.ಬಿ.ಆರ್.ಅಂಬೇಡ್ಕರ್‌ ಅವರಿಗೆ ಅಮಮಾನ ಮಾಡಿದ್ದಾರೆ. ಇದನ್ನು ಖಂಡಿಸಿ ದೊಡ್ಡ ಪ್ರಮಾಣದ ಹೋರಾಟ ನಡೆಯುತ್ತದೆ ಅಂದುಕೊಂಡಿದ್ದೆ. ಹಾಗಾಗಲಿಲ್ಲ. ಅದಕ್ಕಾಗಿಯೇ ಇಂಥಹ ಘಟನೆಗಳು ಮರುಕಳಿಸುತ್ತಿವೆ’ ಎಂದರು.

ನಿವೃತ್ತ ಐಜಿಪಿ ಬಸವರಾಜ ಆಕಾಶಿ ಮಾತನಾಡಿ, ಸಮಾಜ ಸುಧಾರಣೆಗೆ ಶ್ರಮಿಸಿದ ಬುದ್ಧ ಮತ್ತು ಬಸವಣ್ಣನ ತತ್ವಗಳಲ್ಲಿ ಸ್ವಾಮ್ಯವಿದೆ. ಬೌದ್ಧ ಧರ್ಮದ ಸಿದ್ದಾಂತಗಳನ್ನು ಬಸವಣ್ಣ ತಮ್ಮ ವಚನಗಳಲ್ಲಿ ಅಳವಡಿಸಿಕೊಂಡಿದ್ದಾರೆ ಎಂದ ಅವರು, ಬುದ್ಧ ವಿಹಾರ ಯಾವ ವಿಚಾರಕ್ಕೆ ತಲೆ ಎತ್ತಿದೆ. ಅದಕ್ಕೆ ಬಳಕೆಯಾಗಬೇಕು. ಇದರ ಆಡಳಿತ ಮಂಡಳಿಯನ್ನು ಸದಸ್ಯರ ಅಭಿಪ್ರಾಯದ ಮೇರೆಗೆ ಆಯ್ಕೆಯಾಗಬೇಕು ಎಂದು ಸಲಹೆ ನೀಡಿದರು.

ಎನ್.ಪಿ.ರೂಡಗಿ ರಚಿಸಿದ ‘ಬುದ್ಧ ಹೇಳಿದ ಬದುಕಿನ ಪಾಠ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಬೌದ್ಧಧರ್ಮದ ಗುರು ಭಿಕ್ಕು ಸಂಘ ಸಾನ್ನಿಧ್ಯ ವಹಿಸಿದ್ದರು. ಶಾಸಕ ಪ್ರೊ.ರಾಜು ಆಲಗೂರ ಅಧ್ಯಕ್ಷತೆ ವಹಿಸಿದ್ದರು.

ಮುಖಂಡ ಚಂದ್ರಶೇಖರ ಕೊಡಬಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಮುಖಂಡ ಗೋಪಾಲ ಕಾರಜೋಳ ಉಪಸ್ಥಿತರಿದ್ದರು.
**
ಸಾಮ್ರಾಟ ಅಶೋಕ ಬುದ್ಧನನ್ನು ಜಗತ್ತಿಗೆ ಪರಿಚಯಿಸಿದಂತೆ ಬಸವಣ್ಣ ಅವರನ್ನು ಮುಂದೆ ಒಯ್ಯಬೇಕು ಅಂದ್ರೂ ಕೆಲವು ಜನರು ಬಿಡುತ್ತಿಲ್ಲ.
 –ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.