ADVERTISEMENT

ಸಿ.ಎಂ ವಿರುದ್ಧ ಶಾಸಕ ಶಿವಾನಂದ ಪಾಟೀಲ ಕಿಡಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2017, 10:20 IST
Last Updated 10 ನವೆಂಬರ್ 2017, 10:20 IST

ವಿಜಯಪುರ: ‘ಕಾಂಗ್ರೆಸ್‌ನಿಂದ ನನಗೆ ಸಾಕಷ್ಟು ಅನ್ಯಾಯವಾಗಿದೆ. ಹಿಂದೆ ಎಸ್‌.ಎಂ.ಕೃಷ್ಣ, ಧರ್ಮಸಿಂಗ್‌ ಮೋಸ ಮಾಡಿದ್ದರು. ಇದೀಗ ಸಿದ್ದರಾಮಯ್ಯ ಅದನ್ನೇ ಮುಂದುವರೆಸಿದ್ದಾರೆ...’ ಬಸವನ ಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಶಿವಾನಂದ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉದ್ದೇಶಿಸಿ ಮಾತನಾಡಿರುವ ವಿಡಿಯೊ ತುಣುಕು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ.

‘ಬಸವನ ಬಾಗೇವಾಡಿಯಲ್ಲಿ ಮೆಗಾ ಮಾರ್ಕೆಟ್‌ ಸ್ಥಾಪನೆಗೆ ₹50 ಕೋಟಿ ಮಂಜೂರು ಮಾಡಿ ಎಂದು ಮೂರು ವರ್ಷದಿಂದ ಕೇಳಿದರೂ ಅನುದಾನ ಕೊಡಲಿಲ್ಲ.
ಆದರೆ, ಪ್ರತಿನಿತ್ಯ ಸರ್ಕಾರವನ್ನು ಟೀಕಿಸುವ ದೇವರಹಿಪ್ಪರಗಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರ ಕ್ಷೇತ್ರಕ್ಕೆ ₹800 ಕೋಟಿ ಮೊತ್ತದ ಯೋಜನೆಗಳನ್ನು ಮಂಜೂರು ಮಾಡಿದ್ದಾರೆ. ಅವರ ಸಂಬಂಧಗಳ ಬಗ್ಗೆ ನಾ ಮಾತನಾಡಲ್ಲ’ ಎಂದು ಶಿವಾನಂದ ಹೇಳಿದ್ದಾರೆ.

‘ಸತತ ಅನ್ಯಾಯ ನಡೆಯುತ್ತಿದ್ದರೂ ಯಾವುದರ ಬಗ್ಗೆ ಪ್ರಸ್ತಾಪಿಸದೆ, ಎಲ್ಲವನ್ನೂ ಮೌನವಾಗಿ ಸಹಿಸಿಕೊಂಡು ಕಾಂಗ್ರೆಸ್‌ನೊಳಗೆ ಬಾಳ್ವೆ ಮಾಡ್ತಿದ್ದೇನೆ. ಈಚಿನ ದಿನಗಳಲ್ಲಿ ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ವಿರುದ್ಧವೂ ಅವರು ಟೀಕೆ ಮಾಡಿದ್ದಾರೆ. ‘ಎಂ.ಬಿ.ಪಾಟೀಲ ಜನ ನಾಯಕನಾಗಿದ್ದರೆ ಬೇರೆ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲಲಿ’ ಎಂದಿರುವ ಶಿವಾನಂದ, ‘ವರಿಷ್ಠರಿಂದ ಜಲಸಂಪನ್ಮೂಲ ಖಾತೆ ಪಡೆದಿದ್ದಾನೆ ಎಂದು ಸಿದ್ದರಾಮಯ್ಯ ನನ್ನ ಎದುರೇ ಹೇಳಿದ್ದಾನೆ’ ಎಂದು ಏಕ ವಚನ ಪ್ರಯೋಗಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಶಿವಾನಂದ ಪಾಟೀಲರ ಪ್ರತಿಕ್ರಿಯೆಗೆ ಯತ್ನಿಸಿದರೂ, ಮೊಬೈಲ್ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.