ADVERTISEMENT

ಸೆಪ್ಟೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2017, 9:10 IST
Last Updated 16 ಜುಲೈ 2017, 9:10 IST

ವಿಜಯಪುರ: ಯುಕೆಪಿ ಮೂರನೇ ಹಂತದ ಮುಳವಾಡ ಏತ ನೀರಾವರಿ ಯೋಜನೆಯ ಕಾಮಗಾರಿಗಳನ್ನು ಮುಂಬರುವ ಸೆಪ್ಟೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಸೂಚಿಸಿದರು. ಮುಳವಾಡ ಏತ ನೀರಾವರಿ ಯೋಜನೆ ವ್ಯಾಪ್ತಿಯ ಹಣಮಾಪುರ ಜಾಕ್‌ವೆಲ್‌, ಮಸೂತಿ ಹೆಡ್ವರ್ಕ್‌ ಕಾಮಗಾರಿ, ರೈಲ್ವೆ ಕ್ರಾಸಿಂಗ್, ಎನ್.ಎಚ್. ಕ್ರಾಸಿಂಗ್, ಹಿಟ್ನಳ್ಳಿ ಹತ್ತಿರ ಡೋಣಿ ನದಿಗೆ ನಿರ್ಮಿಸುತ್ತಿರುವ ಅಕ್ವಾಡೆಕ್ಟ್ ಕಾಮಗಾರಿಗಳನ್ನು ಶನಿವಾರ ವೀಕ್ಷಿಸಿದ ಸಚಿವ, ನಿಗದಿತ ಅವಧಿಗೂ ಮುನ್ನವೇ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರು, ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ವಿವಿಧ 9 ನೀರಾವರಿ ಉಪ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾ ಗಿದೆ. ಮುಂಬರುವ ಸೆಪ್ಟೆಂಬರ್ ಅಂತ್ಯದೊಳಗೆ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಯಲ್ಲಿ ನೀರು ಹರಿಸುವ ಮೂಲಕ, ಜಿಲ್ಲೆಯ 203 ಕೆರೆಗಳನ್ನು ತುಂಬಿಸಲಾಗುವುದು ಎಂದು ತಿಳಿಸಿದರು.

ಕೂಡಗಿ ರೈಲ್ವೆ ಸ್ಟೇಷನ್ ಬಳಿ, ರಾಷ್ಟ್ರೀಯ ಹೆದ್ದಾರಿಯ ಮುತ್ತಗಿ ಕ್ರಾಸ್ ಬಳಿ ಹಾದು ಹೋಗುವ ಕಾಲುವೆ ಕಾಮಗಾರಿ ಸೇರಿದಂತೆ, ಹಿಟ್ನಳ್ಳಿ ಬಳಿ ಡೋಣಿ ನದಿಗೆ ನಿರ್ಮಿಸಲಾಗುತ್ತಿರುವ ಅಕ್ವಾಡೆಕ್ಟ್ ಕಾಮಗಾರಿಗಳನ್ನು ವೀಕ್ಷಿಸಿದ ಎಂ.ಬಿ.ಪಾಟೀಲ, ಅಡೆ–ತಡೆಗಳನ್ನು ನಿವಾರಿಸಿಕೊಂಡು ಕಾರ್ಯ ನಿರ್ವಹಿ ಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್, ಉಪ ಕಾರ್ಯದರ್ಶಿ ಅನಿಲಕುಮಾರ ಮರಡಿ, ತಾಂತ್ರಿಕ ಸಲಹೆಗಾರ ಪ್ರೊ.ಅರ ವಿಂದ ಗಲಗಲಿ, ಕೆಬಿಜೆಎನ್‌ಎಲ್‌ನ ಮುಖ್ಯ ಎಂಜಿನಿಯರ್‌ ಜೆ.ಪಿ.ರೆಡ್ಡಿ ಉಪಸ್ಥಿತರಿದ್ದರು.

ರೈತರಿಗೆ ಆಭಾರಿ: ‘ಮುಳವಾಡ ಏತ ನೀರಾವರಿ ಯೋಜನೆಯ ಪ್ರಗತಿ ಹಿಂದೆ ಅನೇಕರ ಶ್ರಮವಿದೆ. ಎಲ್ಲರ ಸಂಘಟಿತ ಪ್ರಯತ್ನದ (ಟೀಂ ವರ್ಕ್‌) ಫಲವಾಗಿ ಈ ಯೋಜನೆ ನಿರ್ಣಾಯಕ ಹಂತಕ್ಕೆ ತಲುಪಿದೆ.

ವಿಶೇಷವಾಗಿ ಈ ಭಾಗದ ರೈತರು ತಮ್ಮ ಜಮೀನು ನೀಡಿದರು. ಅನೇಕ ರೀತಿಯಲ್ಲಿ ಸಹಕಾರ ನೀಡಿದರು. ಅಧಿಸೂಚನೆ, ಪರಿಹಾರ ಎಂಬಿತ್ಯಾದಿ ವಿಷಯಗಳನ್ನು ಬದಿಗೊತ್ತಿ ಸಹಕರಿಸಿ ದರು, ಅವರ ಈ ಸಹಕಾರವನ್ನು ಯಾರೂ ಮರೆಯಾಬಾರದು, ಅವರಿಗೆ ನಾನು ಆಭಾರಿ’ ಎಂದ ಸಚಿವ ಎಂ.ಬಿ. ಪಾಟೀಲ, ಇಲಾಖೆಯ ಅಧಿಕಾರಿಗಳ ಕಾರ್ಯ ನಿರ್ವಹಣೆಯನ್ನೂ ಈ ಸಂದರ್ಭ ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.