ADVERTISEMENT

ಹಿಂಗಾರು: ಗರಿಗೆದರಿದ ಕೃಷಿ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 5:46 IST
Last Updated 22 ಸೆಪ್ಟೆಂಬರ್ 2017, 5:46 IST
ಹೊಲ ಹರಗುವ ಮೂಲಕ ಹಿಂಗಾರಿ ಬಿತ್ತನೆಗೆ ಭೂಮಿ ಅಣಿಗೊಳಿಸಿದ ರೈತ
ಹೊಲ ಹರಗುವ ಮೂಲಕ ಹಿಂಗಾರಿ ಬಿತ್ತನೆಗೆ ಭೂಮಿ ಅಣಿಗೊಳಿಸಿದ ರೈತ   

ವಿಜಯಪುರ: ‘ಉತ್ತರೆ’ ಮಳೆಯ ಆರಂಭದ ಅಬ್ಬರಕ್ಕೆ ಜಿಲ್ಲೆಯ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಇದೀಗ ಎತ್ತ ನೋಡಿದರೂ ಜಮೀನುಗಳಲ್ಲಿ ಕೃಷಿ ಕೆಲಸದಲ್ಲಿ ತಲ್ಲೀನರಾಗಿರುವ ರೈತರು, ರೈತ ಕೂಲಿ ಕಾರ್ಮಿಕರೇ ಗೋಚರಿಸುತ್ತಿದ್ದಾರೆ.

ವಾತಾವರಣವೂ ಪೂರಕವಾಗಿದೆ. ಬಿಸಿಲಿನ ತಾಪ ತಟ್ಟದಂತೆ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ಸುರಿಯುವ ಸೋನೆ ಮಳೆಗೆ ಮೈಯೊಡ್ಡಿ ಕೃಷಿ ಕಾಯಕ ನಡೆಸುತ್ತಿರುವ ರೈತ ಸಮೂಹದ ಚಿತ್ರಣವೇ ಎಲ್ಲೆಡೆ ಕಂಡು ಬರುತ್ತಿದೆ.

ಜಿಲ್ಲೆಯಾದ್ಯಂತ ಮಘೆ, ಹುಬ್ಬಿ ಮಳೆ ಚದುರಿದಂತೆ ವ್ಯಾಪಕ ಪ್ರಮಾಣದಲ್ಲಿ ಸುರಿದಿದ್ದು, ಅಸಂಖ್ಯಾತ ರೈತರು ಈ ಹದಕ್ಕೆ ಹಿಂಗಾರಿ ಬಿತ್ತನೆಗೆ ಅಗತ್ಯವಿರುವ ಭೂಮಿ ಹರಗಿ ಅಣಿಗೊಳಿಸಿಕೊಂಡಿದ್ದಾರೆ. ಇದೇ 15ರಿಂದ ಜಿಲ್ಲೆಯ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮು ಆರಂಭಗೊಂಡಿದ್ದು, ಹಿಂಗಾರಿ ಜೋಳ, ಕುಸುಬೆ, ಸೂರ್ಯಕಾಂತಿಯ ಬಿತ್ತನೆ ವಿವಿಧೆಡೆ ಆರಂಭಗೊಂಡಿದೆ.

ADVERTISEMENT

ಮುಂಗಾರಿನಲ್ಲಿ ತೊಗರಿ ಬಿತ್ತನೆ ನಡೆಸಿದ ಪ್ರದೇಶ ಹೊರತುಪಡಿಸಿ, ಹೆಸರು, ಉದ್ದು ಇನ್ನಿತರೆ ಬೆಳೆ ಬಿತ್ತಿದ್ದವರು ಸಹ ಹಿಂಗಾರಿಗೆ ತಮ್ಮ ಭೂಮಿ ಸಿದ್ಧಗೊಳಿಸಿಕೊಂಡಿದ್ದಾರೆ. ರೈತ ಸಂಪರ್ಕ ಕೇಂದ್ರಗಳಿಗೆ ಎಡತಾಕಿ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸಿದ್ದಾರೆ.

‘12ರಿಂದ 14 ಎಕರೆ ಭೂಮಿಯಲ್ಲಿ ಹಿಂಗಾರಿ ಜೋಳದ ಏಳೆಂಟು ತಳಿ ಬಿತ್ತುವ ಆಲೋಚನೆ ನಡೆಸಿದ್ದೇನೆ. ಬಿತ್ತನೆಗೆ ಚಲೋ ಹಸಿಯಿದೆ. ಆದರೆ ಇದೀಗ ಬಿತ್ತಲ್ಲ. ಈ ತಿಂಗಳ ಅಂತ್ಯದಲ್ಲಿ ಬಿತ್ತನೆ ನಡೆಸುವೆ. ಇದೀಗ ಬಿತ್ತಿದರೆ ಜೋಳ ಬಿರುಸಾಗಿ ಎತ್ತರಕ್ಕೆ ಬೆಳೆಯುತ್ತದೆ. ನವೆಂಬರ್‌–ಡಿಸೆಂಬರ್‌ನಲ್ಲಿ ಚಂಡಮಾರುತದ ಪರಿಣಾಮದಿಂದ ಸುರಿಯುವ ಮಳೆಗೆ ಜೋಳದ ದಂಟು ಸೊಂಟ ಮುರಿದುಕೊಂಡು ನೆಲಕ್ಕೆ ಬೀಳುತ್ತದೆ.

ತೆನೆ ನೆಲಕ್ಕೆ ಬೀಳುತ್ತಿದ್ದಂತೆ ಇಲಿಗಳ ಕಾಟ ಹೆಚ್ಚುತ್ತದೆ. ನಿಯಂತ್ರಣ ಅಸಾಧ್ಯ. ಆದ್ದರಿಂದ ಎಲ್ಲವನ್ನೂ ಗಮನಿಸಿಕೊಂಡು ಸೆಪ್ಟೆಂಬರ್‌ ಅಂತ್ಯಕ್ಕೆ ಬಿತ್ತನೆ ನಡೆಸಲು ಸಿದ್ಧತೆ ಮಾಡಿಕೊಂಡಿರುವೆ’ ಎಂದು ಇಂಚಗೇರಿಯ ರೈತ ಶೆಟ್ಟೆಪ್ಪ ದುಂಡಪ್ಪ ನಾವಿ ತಿಳಿಸಿದರು.

ಕೃಷಿ ಇಲಾಖೆ ಸಜ್ಜು: ‘5.25 ಲಕ್ಷ ಹೆಕ್ಟೇರ್‌ನಲ್ಲಿ ಹಿಂಗಾರು ಬಿತ್ತನೆಗೆ ಅಗತ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಇನ್ನಿತರೆ ಪೂರಕ ಸಾಮಗ್ರಿಗಳನ್ನು’ ಕೃಷಿ ಇಲಾಖೆ ಸಿದ್ಧಪಡಿಸಿಟ್ಟುಕೊಂಡಿದೆ ಎಂದು ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್‌ ಹೇಳಿದರು.

‘50 ಸಾವಿರ ಕ್ವಿಂಟಲ್‌ ಕಡಲೆ ಬಿತ್ತನೆ ಬೀಜದ ಬೇಡಿಕೆ ಬರುವ ನಿರೀಕ್ಷೆಯಿದೆ. ಇದಕ್ಕೆ ಪೂರಕವಾಗಿ ಇಲಾಖೆ 55 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜ ಸಿದ್ಧವಾಗಿಟ್ಟುಕೊಂಡಿದೆ.
ಹಿಂಗಾರು ಹಂಗಾಮಿನ ಆರಂಭದಿಂದ ಮಾರ್ಚ್‌ ಅಂತ್ಯದವರೆಗೆ 1.05 ಲಕ್ಷ ಮೆಟ್ರಿಕ್‌ ಟನ್‌ ವಿವಿಧ ರಸಗೊಬ್ಬರದ ಅಗತ್ಯವಿದ್ದು, ಮಾರ್ಚ್‌ ಅಂತ್ಯದವರೆಗೂ ಆಯಾ ಬೇಡಿಕೆಗೆ ತಕ್ಕಂತೆ ಅಗತ್ಯ ರಸಗೊಬ್ಬರ ವಿತರಿಸಲು ವಿಜಯಪುರ ಜಿಲ್ಲಾ ಕೃಷಿ ಇಲಾಖೆ ಸಜ್ಜಾಗಿದೆ’ ಎಂದು ಅವರು ತಿಳಿಸಿದರು.

‘ಇದೇ 15ರಿಂದ ಅ 15ರವರೆಗೆ ಹಿಂಗಾರಿ ಜೋಳ, ನಾಲ್ಕು ಸಾವಿರ ಹೆಕ್ಟೇರ್‌ನಲ್ಲಿ ಕುಸುಬೆ, ಸೂರ್ಯಕಾಂತಿ ಬಿತ್ತನೆಯಾಗಲಿದೆ. ಅಕ್ಟೋಬರ್ ಆರಂಭದಿಂದ ನವೆಂಬರ್ ಅಂತ್ಯದವರೆಗೂ ಎರಡು ತಿಂಗಳ ಅವಧಿಯಲ್ಲಿ ಕಡಲೆ ಬಿತ್ತನೆಯಾಗಲಿದೆ. ಅ 15ರಿಂದ ನ 15ರವರೆಗೆ ಗೋಧಿ ಬಿತ್ತನೆಯಾದರೆ, ಅಕ್ಟೋಬರ್‌ನಲ್ಲಿ ಮೆಕ್ಕೆಜೋಳದ ಬಿತ್ತನೆ ನಡೆಯಲಿದೆ’ ಎಂದು ಕೃಷಿ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿ ಎ.ಪಿ.ಬಿರಾದಾರ ಮಾಹಿತಿ ನೀಡಿದರು.

ಅಂಕಿ–ಅಂಶ
2.21 ಲಕ್ಷ ಹೆಕ್ಟೇರ್‌ನಲ್ಲಿ ಜೋಳ ಬಿತ್ತನೆ ಗುರಿ
1.87 ಲಕ್ಷ ಹೆಕ್ಟೇರ್‌ನಲ್ಲಿ ಕಡಲೆ ಬಿತ್ತನೆ ಗುರಿ
60 ಸಾವಿರ ಹೆಕ್ಟೇರ್‌ನಲ್ಲಿ ಗೋಧಿ ಬಿತ್ತನೆ ಗುರಿ
34 ಸಾವಿರ ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ ಬಿತ್ತನೆ ಗುರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.