ADVERTISEMENT

‘ಹಿರಿಯರ ಮಧ್ಯಸ್ಥಿಕೆಯಲ್ಲಿ ಪರಿಹಾರ ಕಂಡುಕೊಳ್ಳಿ’

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 9:27 IST
Last Updated 20 ಜುಲೈ 2017, 9:27 IST

ಬಸವನಬಾಗೇವಾಡಿ: ‘ಜಿಲ್ಲೆಯಲ್ಲಿ ಜೂಜಾಟ, ಮರಳು ದಂಧೆ, ಆಕ್ರಮ ಮದ್ಯ ಮಾರಾಟ ಸೇರಿದಂತೆ ವಿವಿಧ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಮೌಖಿಕವಾಗಿ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯವಾಗುತ್ತದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಲದೀಪ ಜೈನ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ಮಂಗಳವಾರ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ  ಪೊಲೀಸ್ ಠಾಣೆಯ ಸುಧಾರಿತ ಬೀಟ್ ವ್ಯವಸ್ಥೆ ಹಾಗೂ ನಾಗರಿಕರ ಸಮಿತಿ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಯಾವುದೇ ಸಣ್ಣ ಪುಟ್ಟ ಸಮಸ್ಯೆಗಳಿದ್ದರೇ ಊರಿನ ಹಿರಿಯರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕು. ಅಂದಾಗ ಮಾತ್ರ ಜಿಲ್ಲೆಯಲ್ಲಿ ದೂರು ದಾಖಲೆಗಳ ಸಂಖ್ಯೆ ಕಡಿಮೆಯಾಗುವುದರೊಂದಿಗೆ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಂತಾಗುತ್ತದೆ ಎಂದು ಹೇಳಿದರು. 

ADVERTISEMENT

ಮುಗ್ಧ ಗ್ರಾಮೀಣ ಪ್ರದೇಶದ ಜನರಿಗೆ ದೂರವಾಣಿ ಕರೆ ಮಾಡಿ ತಮ್ಮ ಬ್ಯಾಂಕ್‌ ಖಾತೆಯ ಬಗ್ಗೆ ಮಾಹಿತಿ ಕೇಳಿದರೆ ಯಾವುದೇ ಕಾರಣಕ್ಕೂ ಮಾಹಿತಿ ನೀಡಬಾರದು. ದೇಶದಲ್ಲಿ ಬ್ಯಾಂಕ್‌ ಖಾತೆಯ ವಿವರ, ಎಟಿಎಂ ಸಂಖ್ಯೆ ಕೇಳುವವರ ಜಾಲವಿದೆ. ಸಾರ್ವಜನಿಕರು ಅನಾಮಿಕ ಕರೆಗಳಿಗೆ ಕಿವಿಗೊಡದೇ ಜಾಗೃತರಾಗಿರಬೇಕು ಎಂದು ಹೇಳಿದರು.

ಸಾತಿಹಾಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭೀಮನಗೌಡ ಲಚ್ಯಾಣ ಮಾತನಾಡಿ, ಬಸವನಬಾಗೇವಾಡಿ ತಾಲ್ಲೂಕಿನಲ್ಲಿ ಆಕ್ರಮವಾಗಿ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಗ್ರಾಮೀಣ ಭಾಗದಲ್ಲಿ ಆಕ್ರಮವಾಗಿ ಚಹಾದ ಅಂಗಡಿ ಮತ್ತು ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಜೂಜಾಟ ವ್ಯಾಪಕವಾಗಿ ನಡೆಯುತ್ತಿದೆ. ಇದನ್ನು ತಡೆಗಟ್ಟುವಲ್ಲಿ ಇಲಾಖೆ ಮುಂದಾಗಬೇಕು ಎಂದು ಮನವಿ ಮಾಡಿಕೊಂಡರು.


ಗೊಳಸಂಗಿ ಗ್ರಾಮದ ಮುರುಗೇಶ ಹೆಬ್ಬಾಳ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇನ್ನೂ ಹೆಚ್ಚು ಬೀಟ್ ವ್ಯವಸ್ಥೆಯಾಗಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದ ಅನೇಕ ಯುವಕರು ದ್ವಿಚಕ್ರವಾಹನ ಸೇರಿದಂತೆ ಇತರೆ ವಾಹನಗಳ ಲೈಸನ್ಸ್‌ ಹೊಂದಿರುವುದಿಲ್ಲ. ಲೈಸನ್ಸ್‌ ಹೊಂದದೆ ಇರುವ ಬೈಕ್‌ ಸವಾರರು ಸೇರಿದಂತೆ ಇತರೆ ವಾಹನ ಚಾಲಕರಿಗೆ ಲೈಸನ್ಸ್‌ ಹೊಂದುವಂತೆ ಕ್ರಮ ಕೈಗೊಳ್ಳಬೇಕು. ಈ ಕುರಿತು ಜಾಗೃತಿ ಮೂಡಿಸುವಂತಹ ಕೆಲಸವಾಗಬೇಕಿದೆ ಎಂದು ಹೇಳಿದರು.
ಸಿ.ಪಿ.ಐ ಮಾಹಾದೇವ ಶಿರಹಟ್ಟಿ, ಪಿಎಸ್ಐ ಶರಣಗೌಡ ಗೌಡರ ವೇದಿಕೆಯಲ್ಲಿದ್ದರು.

ಸಭೆಯಲ್ಲಿ ರಾಷ್ಟ್ರೀಯ ಬಸವಸೈನ್ಯ, ಕರ್ನಾಟಕ ರಕ್ಷಣಾ ವೇದಿಕೆ, ಜೈ ಕರ್ನಾಟಕ ಸಂಘಟನೆ ಸೇರಿದಂತೆ ದಲಿತ ಪರ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.