ADVERTISEMENT

‘ರೈತರ ಸಂಕಷ್ಟದ ಸ್ಥಿತಿಗೆ ರಾಜ್ಯ ಸರ್ಕಾರವೇ ಹೊಣೆ’

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 10:35 IST
Last Updated 25 ಜೂನ್ 2016, 10:35 IST

ವಿಜಯಪುರ: ಬೆಳೆ ವಿಮೆ, ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರಗಳು ರೈತರಿಗೆ ಕಲ್ಪಿಸಿದ್ದರೆ, ಇಂದು ರೈತರು ಸಂಕಷ್ಟ ಅನುಭವಿಸುವ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಕೇಂದ್ರ ಸರ್ಕಾರಕ್ಕೆ ನೆರವು ಕೋರುವ ಅಗತ್ಯತೆ ಇರುತ್ತಿರಲಿಲ್ಲ ಎಂದು ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ಸಿಂಗ್ ತಿಳಿಸಿದರು.

ಕರ್ನಾಟಕ ಸರ್ಕಾರ ತಮ್ಮ ರಾಜ್ಯದ ರೈತರಿಗೆ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ವಾದ ಮಂಡಿಸುತ್ತಿರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದ ಅವರು,

ಪ್ರಕೃತಿ ವಿಕೋಪದಿಂದಾಗಿ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ಒದಗಿಸಿ ಎಂದು ಕೋರುವುದಕ್ಕಿಂತ ಬೆಳೆ ವಿಮೆ ಸೌಲಭ್ಯವನ್ನು ರೈತರಿಗೆ ನೀಡಿದ್ದರೆ ಈ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ ಎಂದು  ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಹಿಂದೆ ಜಾರಿಯಲ್ಲಿದ್ದ ವಿಮಾ ಯೋಜನೆಗಳು ರೈತರಿಗೆ ಗಗನಕುಸುಮವಾಗಿದ್ದವು. ಕಂತಿನ ಹೊರೆಯಿಂದ ಈ ಯೋಜನೆಗಳು ರೈತರ ಪ್ರಯೋಜನಕ್ಕೆ ಬರುತ್ತಿರಲಿಲ್ಲ.

ರೈತರ ಸಂಕಷ್ಟವನ್ನು ಅರಿತ ಕೇಂದ್ರ ಸರ್ಕಾರ ರೈತಸ್ನೇಹಿಯಾದ ಪ್ರಧಾನಮಂತ್ರಿ ರಾಷ್ಟ್ರೀಯ ಫಸಲ ಬಿಮಾ ಎಂಬ ವಿಮಾ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದೆ ಎಂದರು.

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳದಿಂದಾಗಿ ಆಸ್ತಿ ಕಳೆದುಕೊಳ್ಳುವ ಸಂತ್ರಸ್ತರಿಗೆ ಕಡಿಮೆ ಪ್ರಮಾಣದಲ್ಲಿ ಭೂ-ಪರಿಹಾರ ನೀಡಲಾಗುತ್ತಿದೆ ಎಂದು ಆ ಭಾಗದ ಜನ, ರೈತರು ನನ್ನ ಗಮನಕ್ಕೆ ತಂದಿದ್ದಾರೆ. ಈ ಕುರಿತಂತೆ ಅಗತ್ಯ ಚರ್ಚೆ ನಡೆಸುವುದಾಗಿಯೂ ತಿಳಿಸಿದರು.

ಹಲ ದಶಕಗಳ ಅವಧಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮಣ್ಣಿನ ಆರೋಗ್ಯಕ್ಕೆ ಮಹತ್ವ ನೀಡಲಿಲ್ಲ. ಆದರೆ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ಮೋದಿ ವಿಶೇಷ ಆದ್ಯತೆ ನೀಡಿ, ಮಣ್ಣಿನ ಸತ್ವ ಹೆಚ್ಚಿಸುವ ಕಾರ್ಯಕ್ರಮಗಳನ್ನು ಪ್ರಕಟಿಸಿದರು ಎಂದು ಹೇಳಿದರು.
ಸಂಸದ ರಮೇಶ ಜಿಗಜಿಣಗಿ, ಶಾಸಕ ರಮೇಶ ಭೂಸನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.