ADVERTISEMENT

ಬಿಜೆಪಿ ಟಿಕೆಟ್‌ಗೆ ಪೈಪೋಟಿ

ಕಾಂಗ್ರೆಸ್‌ನಿಂದ ಶಿವಾನಂದ ಪಾಟೀಲ; ಜೆಡಿಎಸ್‌ನಿಂದ ಅಪ್ಪುಗೌಡ ಪಾಟೀಲ ಬಹುತೇಕ ಖಚಿತ

ಡಿ.ಬಿ, ನಾಗರಾಜ
Published 11 ಫೆಬ್ರುವರಿ 2018, 13:20 IST
Last Updated 11 ಫೆಬ್ರುವರಿ 2018, 13:20 IST
ಎಸ್.ಕೆ.ಬೆಳ್ಳಬ್ಬಿ
ಎಸ್.ಕೆ.ಬೆಳ್ಳಬ್ಬಿ   

ವಿಜಯಪುರ: ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಕಾಂಗ್ರೆಸ್‌, ಜೆಡಿಎಸ್‌ ಈಗಾಗಲೇ ಆಂತರಿಕವಾಗಿ ಘೋಷಿಸಿವೆ. ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆದಿದ್ದು, ಅಂತಿಮ ಕ್ಷಣದಲ್ಲಿ ಯಾರಿಗೆ ಹೈಕಮಾಂಡ್‌ ಶ್ರೀರಕ್ಷೆ ಒಲಿಯಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಹಾಲಿ ಶಾಸಕ ಶಿವಾನಂದ ಪಾಟೀಲಗೆ ಕಾಂಗ್ರೆಸ್‌ ಟಿಕೆಟ್‌ ಕಟ್ಟಿಟ್ಟ ಬುತ್ತಿ. ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆಯುವ ವಿಶ್ವಾಸ, ಭರವಸೆ ಕೊನೆಯವರೆಗೂ ಈಡೇರಲಿಲ್ಲ. ಈ ಕುರಿತಂತೆ ಮನದೊಳಗೆ ಅಸಮಾಧಾನ ಮಡುಗಟ್ಟಿದ್ದರೂ, ಬಹಿರಂಗವಾಗಿ ಹೊರಗೆ ಹಾಕಿದ್ದು ಅಪರೂಪ.

ವರ್ಷಗಳ ಹಿಂದೆಯೇ ಶಿವಾನಂದ ಪಾಟೀಲ ಕಾಂಗ್ರೆಸ್ ತೊರೆಯಲಿದ್ದಾರೆ ಎಂಬ ಸುದ್ದಿ ಹರಿದಾಡಿದರೂ, ಶಾಸಕರು ಮಾತ್ರ ಎಲ್ಲಿಯೂ ಖಚಿತಪಡಿಸಿರಲಿಲ್ಲ. ಸಮಯವೇ ಎಲ್ಲವನ್ನೂ ನಿರ್ಧರಿಸಲಿದೆ ಎಂಬ ಜಾಣ್ಮೆಯ ಉತ್ತರ ನೀಡಿದ್ದರು. ಚುನಾವಣೆ ಹೊಸ್ತಿಲಲ್ಲೂ ಪಾಟೀಲ ತಮ್ಮ ಮುಂದಿನ ನಡೆಯ ಗುಟ್ಟು ಬಿಟ್ಟುಕೊಟ್ಟಿಲ್ಲ.

ADVERTISEMENT

ಕ್ಷೇತ್ರದಲ್ಲಿ ಶಿವಾನಂದ ಪಾಟೀಲ ಸ್ಥಾನ ತುಂಬುವ ಸಮರ್ಥ ಅಭ್ಯರ್ಥಿ ಇಲ್ಲದಿರುವುದು ಕಾಂಗ್ರೆಸ್‌ಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಒಂದು ವೇಳೆ ಶಿವಾನಂದ ‘ಕೈ’ ಬಿಟ್ಟರೇ ಪರ್ಯಾಯ ಅಭ್ಯರ್ಥಿಗೆ ಪರದಾಡಬೇಕಾದ ಸ್ಥಿತಿಯಿದೆ. ಇದುವರೆಗೂ ಯಾರೊಬ್ಬರೂ ನಾನು ಆಕಾಂಕ್ಷಿ ಎಂದು ತಮ್ಮ ಆಪ್ತ ವಲಯದಲ್ಲೂ ಹೇಳಿಕೊಂಡಿರುವ ನಿದರ್ಶನಗಳಿಲ್ಲ.

ಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ದಶಕದ ಹಿಂದೆ ಏಕಚಕ್ರಾಧಿಪತ್ಯ ಸ್ಥಾಪಿಸಿಕೊಂಡು ಆಳ್ವಿಕೆ ನಡೆಸಿದ್ದ ಬಿ.ಎಸ್‌.ಪಾಟೀಲ ಮನಗೂಳಿ ಪುತ್ರ ಸೋಮನಗೌಡ (ಅಪ್ಪುಗೌಡ) ಪಾಟೀಲ ಜೆಡಿಎಸ್‌ ಅಭ್ಯರ್ಥಿ.

ತಂದೆಯ ಸ್ಮರಣಾರ್ಥ ಆಯೋಜಿಸಿದ್ದ ಸಮಾರಂಭಕ್ಕೆ ಜೆಡಿಎಸ್‌ನ ವರಿಷ್ಠರಿಬ್ಬರು ಬರದಿದ್ದುದ್ದಕ್ಕೆ ಅಪ್ಪುಗೌಡ ಕೆಲ ದಿನ ಮುನಿಸಿಕೊಂಡಿದ್ದರು. ಪಕ್ಷೇತರರಾಗಿ ಕಣಕ್ಕಿಳಿಯುವುದಾಗಿ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದರು.

ಕೆಲ ದಿನಗಳ ಹಿಂದೆ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ,ದೇವೇಗೌಡ ಮಾತನಾಡಿ ಅಸಮಾಧಾನ ತಣಿಸಿದ ಬಳಿಕ ಮತ್ತೆ ತೆನೆ ಹೊರಲು ಸಿದ್ಧರಾಗಿದ್ದಾರೆ. ಜೆಡಿಎಸ್‌ ಸ್ಥಿತಿಯೂ ಕಾಂಗ್ರೆಸ್‌ಗಿಂತ ಭಿನ್ನವಾಗಿಲ್ಲ. ಅಪ್ಪುಗೌಡ ಹೊರತುಪಡಿಸಿದರೆ, ಚುನಾವಣಾ ಕಣಕ್ಕಿಳಿಯುವ ಬೇರೊಬ್ಬ ಸಮರ್ಥ ಅಭ್ಯರ್ಥಿ ಜೆಡಿಎಸ್‌ನಲ್ಲಿಲ್ಲ.

ತೀವ್ರ ಪೈಪೋಟಿ...

ಒಂದೇ ಊರು. ಒಂದೇ ಸಮುದಾಯ. ಗರಡಿಯೂ ಒಂದೇ. ಒಬ್ಬರಿಗೆ ಅನುಭವದ ಶ್ರೀರಕ್ಷೆ. ಸಾಮಾನ್ಯರ ಒಡನಾಟ. ಮತ್ತೊಬ್ಬರದ್ದು ಯುವ ಮುಖ. ಧಣಿಯ ಪಟ್ಟ. ಇಬ್ಬರ ನಡುವೆ ಟಿಕೆಟ್‌ಗಾಗಿ ಜಂಗಿ ಕುಸ್ತಿ ನಡೆದಿದೆ... ಇದು ಬಾಗೇವಾಡಿ ಬಿಜೆಪಿಯ ಒಳ ಬೇಗುದಿ.

1999ರಲ್ಲಿ ಬಿ.ಎಸ್‌.ಪಾಟೀಲ ಮನಗೂಳಿಯ ರಾಜಕೀಯಕ್ಕೆ ಇತಿಶ್ರೀ ಹಾಕುವ ಜತೆಗೆ, ಬಾಗೇವಾಡಿಯಲ್ಲಿ ಕಮಲ ಅರಳಿಸಿದ ಕೀರ್ತಿ ಸಂಗಪ್ಪ ಕಲ್ಲಪ್ಪ ಬೆಳ್ಳುಬ್ಬಿಯದ್ದು. 2008ರಲ್ಲಿ ಪಕ್ಷದ ಸೂಚನೆಯಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಐತಿಹ್ಯವೂ ಬೆನ್ನಿಗಿದೆ.

ಎಸ್‌.ಕೆ.ಬೆಳ್ಳುಬ್ಬಿ ಇದೀಗ ಬಾಗೇವಾಡಿ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಜತೆ ಸಖ್ಯ ಹೊಂದಿದ್ದಾರೆ. ಈ ಹಿಂದೆ ರಾಷ್ಟ್ರೀಯ ಕಿಸಾನ್‌ ಮೋರ್ಚಾದ ಉಪಾಧ್ಯಕ್ಷರಾಗಿದ್ದ ಗೋಪಿನಾಥ್‌ ಪಾಂಡೆ ಒಡನಾಟವನ್ನು ಹೊಂದಿದ್ದು, ರಾಜ್ಯದ ಪ್ರಮುಖ ವರಿಷ್ಠರ ಬೆಂಬಲಕ್ಕೂ ಮುಂದಾಗಿದ್ದಾರೆ. ಆರ್‌ಎಸ್‌ಎಸ್‌ ಪ್ರಮುಖರ ಕೃಪಾಶೀರ್ವಾದ ಗಿಟ್ಟಿಸಲು ವಿಶೇಷ ಪ್ರಯತ್ನ ನಡೆಸಿದ್ದಾರೆ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಯುವ ಮುಖಂಡ ಸಂಗರಾಜ ದೇಸಾಯಿ ಬಿಎಸ್‌ವೈ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದರು. ಬಿಜೆಪಿ–ಕೆಜೆಪಿ ವಿಲೀನದ ಬಳಿಕ ಬಾಗೇವಾಡಿಯ ಬಿಜೆಪಿ ಟಿಕೆಟ್‌ ಈ ಬಾರಿ ನನಗೆ ಖಾತ್ರಿ ಎಂದು ತನ್ನ ಆಪ್ತವಲಯದಲ್ಲಿ ಘೋಷಿಸಿಕೊಂಡು, ಬಿರುಸಿನ ಸಂಚಾರ ನಡೆಸುವ ಮೂಲಕ ಚುನಾವಣಾ ತಯಾರಿ ನಡೆಸಿದ್ದಾರೆ.

ಯಡಿಯೂರಪ್ಪ ನೇತೃತ್ವದ ತಂಡ ತನ್ನನ್ನೇ ಬೆಂಬಲಿಸಲಿದೆ ಎಂಬ ಅಚಲ ವಿಶ್ವಾಸ ದೇಸಾಯಿಯದ್ದು. ಪದಾಧಿಕಾರಿ ಮಿತ್ರರ ಜತೆ ಸಂಘ ಪರಿವಾರದ ಮುಖಂಡರ ಆಶೀರ್ವಾದ ಪಡೆಯುವ ಯತ್ನವನ್ನು ನಡೆಸಿದ್ದಾರೆ. ಟಿಕೆಟ್‌ಗಾಗಿ ಪ್ರಬಲ ಲಾಬಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.