ADVERTISEMENT

‘ಕಾನೂನು ವ್ಯಾಪ್ತಿಯಲ್ಲೇ ಜೀವನ ನಡೆಸಿ’

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 7:12 IST
Last Updated 21 ಫೆಬ್ರುವರಿ 2018, 7:12 IST

ವಿಜಯಪುರ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾಗರಿಕ ಸಮಾಜದ ಪ್ರತಿಯೊಬ್ಬ ಪ್ರಜೆಗಳಿಗೆ ಉಚಿತ ಹಾಗೂ ನ್ಯಾಯ ಸಮ್ಮತ ಸಮರ್ಥ ಕಾನೂನು ಸೇವೆಗಳನ್ನು ಒದಗಿಸುವುದು ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಪ್ರಭಾಕರ ರಾವ್ ಹೇಳಿದರು.

ತಾಲೂಕಿನ ಹೊನ್ನಳ್ಳಿಯ ಶಿವಶರಣೆ ನಿಂಬೆಕ್ಕ ವಿದ್ಯಾ ಸಂಸ್ಥೆಯ ಪ್ರೌಢ ಶಾಲೆಯಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಆಹೇರಿ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕೃತಿ ವೇದಿಕೆ ವತಿಯಿಂದ ವಿಶ್ವ ಸಾಮಾಜಿಕ ನ್ಯಾಯದ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಾಮಾಜಿಕ ನ್ಯಾಯದ ಮಹತ್ವ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬಂತೆ, ಕಾನೂನು ಮುಂದೆ ಸರ್ವರೂ ಸಮಾನರು. ಕಾನೂನು ಪಾಲನೆ ಮಾಡುವುದು, ಗೌರವಿಸುವುದು ದೇಶದ ಎಲ್ಲಾ ನಾಗರಿಕ ಸಮಾಜದ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಯಾರೇ ಕಾನೂನು ವಿರುದ್ದ ನಡೆದುಕೊಂಡರೇ, ಕಾನೂನು ಉಲ್ಲಂಘನೆ ಮಾಡಿದರೆ ಅಪರಾಧಕ್ಕೆ ಒಳಗಾಗುತ್ತಾರೆ. ಆದ್ದರಿಂದ ಪ್ರತಿಯೊಬ್ಬ ನಾಗರಿಕರು ಕಾನೂನು ವ್ಯಾಪ್ತಿಯಲ್ಲಿ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಸದಸ್ಯೆ ವಿದ್ಯಾಶ್ರೀ ಗೆರಡೆ ಮಾತನಾಡಿ, ಇಂದಿನ ಸಮಾಜದಲ್ಲಿ ಮಹಿಳೆಯರಿಗೆ ರಕ್ಷಣೆ ಮತ್ತು ಸುರಕ್ಷತೆ ಎಂಬುದು ಕನಸಿನ ಮಾತಾಗಿದೆ. ಆದ್ದರಿಂದ ಸರ್ಕಾರ ಮತ್ತು ಕಾನೂನು ಮಹಿಳೆಯರ ಸಾಮಾಜಿಕ ಭದ್ರತೆಗೆ ರಕ್ಷಣೆ ಮತ್ತು ಸುರಕ್ಷತೆ ನೀಡಬೇಕು ಎಂದರು.

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಬಂಡೆಪ್ಪ ತೇಲಿ ಮಾತನಾಡಿದರು. ಮುಖ್ಯೋಪಾಧ್ಯಾಯ ಎಸ್.ಎಂ. ಮನಿಯಾರ ಅಧ್ಯಕ್ಷತೆ ವಹಿಸಿದ್ದರು. ಎಚ್.ಪಿ.ದೇಶಪಾಂಡೆ, ಜಿ.ಎಂ.ಹೊನ್ನಳ್ಳಿ, ಎಸ್.ಎಂ.ಪಾಟಕ, ಸಿ.ಎಸ್.ಗೂಗಿ, ಡಿ.ಜಿ.ಗರೇಬಾಳ ಉಪಸ್ಥಿತರಿದ್ದರು. ಕವಿತಾ ಸಾಲೋಟಗಿ ಸ್ವಾಗತ ಗೀತೆ ಹಾಡಿದರು. ಜಿ.ಕೆ.ಜಹಾಗೀರದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.