ADVERTISEMENT

‘7ನೇ ವೇತನ ಆಯೋಗ ರಚಿಸಿ’

​ಪ್ರಜಾವಾಣಿ ವಾರ್ತೆ
Published 27 ಮೇ 2017, 9:15 IST
Last Updated 27 ಮೇ 2017, 9:15 IST
7ನೇ ವೇತನ ಆಯೋಗ ರಚಿಸುವಂತೆ ಒತ್ತಾಯಿಸಿ ಅಖಿಲ ಕನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು ವಿಜಯಪುರದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಧರಣಿ ನಡೆಸಿದರು
7ನೇ ವೇತನ ಆಯೋಗ ರಚಿಸುವಂತೆ ಒತ್ತಾಯಿಸಿ ಅಖಿಲ ಕನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು ವಿಜಯಪುರದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುರುವಾರ ಧರಣಿ ನಡೆಸಿದರು   

ವಿಜಯಪುರ:  7ನೇ ವೇತನ ಆಯೋಗ ರಚಿಸಲು ಒತ್ತಾಯಿಸಿ ಅಖಿಲ ಕನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸಾಂಕೇತಿಕ ಧರಣಿ ನಡೆಸಿ, ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.

ನೇತೃತ್ವ ವಹಿಸಿದ್ದ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಲೆಂಡಿ ಮಾತನಾಡಿ, ದೇಶದಲ್ಲಿಯೇ ಅತೀ ಕಡಿಮೆ ಸಂಬಳವನ್ನು ಕರ್ನಾಟಕ ರಾಜ್ಯದ ಸರ್ಕಾರಿ  ನೌಕರರು ಪಡೆಯುತ್ತಿದ್ದಾರೆ ಎಂದರು.

‘ಕರ್ನಾಟಕ ರಾಜ್ಯದಲ್ಲಿನ 1998ರ 5ನೇ ಮತ್ತು 6ನೇ ವೇತನ ಸಮಿತಿ, ಅಧಿಕಾರಿಗಳ ನೇತೃತ್ವದಲ್ಲಿ ಅವೈಜ್ಞಾನಿಕ ಹಾಗೂ ನೌಕರರ ವಿರೋಧಿ ನೀತಿ ಅನುಸರಿಸಿದ್ದರಿಂದಾಗಿ ಸಂವಿಧಾನದ ಬಹು ಮುಖ್ಯಆಶಯವಾದ ಸಮಾನ ಕೆಲಸಕ್ಕೆ ಸಮಾನ ವೇತನ ತತ್ವ ಗಾಳಿ ತೂರುವ ಮೂಲಕ ನೌಕರರಿಗೆ ಅನ್ಯಾಯ ಮಾಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

7ನೇ ವೇತನ ಆಯೋಗವನ್ನು ನಿವೃತ್ತ ನ್ಯಾಯಾದೀಶರ ನೇತೃತ್ವದಲ್ಲಿ ರಚಿಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಅನುಷ್ಠಾನವನ್ನು ಗಣನೆಗೆ ತೆಗೆದುಕೊಂಡರೆ ಶೇ 65ರಷ್ಟು ವೇತನದಲ್ಲಿ ವ್ಯತ್ಯಾಸವಾಗುತ್ತದೆ. ಅಲ್ಲದೇ ರಾಜ್ಯದ 6.50 ಲಕ್ಷ ಸರ್ಕಾರಿ ಹುದ್ದೆಗಳ ಪೈಕಿ 2.50 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿರುವುದರಿಂದ, ಹೆಚ್ಚಿನ ಹೊರೆ ಬಿದ್ದು ಒತ್ತಡದಲ್ಲಿ ಕೆಲಸ ಮಾಡುವ ದುಸ್ಥಿತಿ ಬಂದಿದೆ ಎಂದು ಕಿಡಿಕಾರಿದರು

ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತು ಕೊಂಡು ನೌಕರರ ಹಿತದೃಷ್ಟಿಯಿಂದ 7ನೇ ವೇತನ ಆಯೋಗ ರಚಿಸಬೇಕು, ಸದರಿ ಆಯೋಗವು ಗರಿಷ್ಠ 6 ತಿಂಗಳೊಳಗೆ ವರದಿಯನ್ನು ನೀಡುವಂತೆ ಆಯೋಗದ ಅವಧಿಯನ್ನು ನಿಗದಿ ಗೊಳಿಸಬೇಕು ಎಂದು ಒತ್ತಾಯಿಸಿದರು.

ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಸರ್ಕಾರಿ ನೌಕರರಿಗೆ 2017 ಜನೆವರಿಯಿಂದ ಅನ್ವಯವಾಗುವಂತೆ ಶೇ 30ರಷ್ಟು ಮಧ್ಯಂತರ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು. ಒಕ್ಕೂಟದ ಜಿಲ್ಲಾ ಘಟಕದ ಉಪಾಧ್ಯಕ್ಷ ಗೋಪಾಲ ಅಥರ್ಗಾ, ಪ್ರಧಾನ ಕಾರ್ಯದರ್ಶಿ ಎ.ಆರ್. ಮಾಶ್ಯಾಳ, ಆರ್.ವೈ.ಕಟ್ಟಿಮನಿ, ಅರ್ಜುನ ಬಗಲಿ ಇದ್ದರು.

* *

ಗರಿಷ್ಠ 6 ತಿಂಗಳ ಒಳಗಾಗಿ ವರದಿ ನೀಡುವಂತೆ ಅವಧಿಯನ್ನು ನಿಗದಿ ಮಾಡಿ 7ನೇ ವೇತನ ಆಯೋಗವನ್ನು ರಚನೆ ಮಾಡಬೇಕು
ಚಂದ್ರಶೇಖರ ಲೆಂಡಿ
ಅಧ್ಯಕ್ಷ, ಒಕ್ಕೂಟದ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.