ADVERTISEMENT

ಸಿಎಂ ಕಾರ್ಯವೈಖರಿಗೆ ಬಸನಗೌಡ ಪಾಟೀಲ ಯತ್ನಾಳ ಕಟು ಟೀಕೆ

ಅಧಿಕಾರ ಕಳೆದುಕೊಳ್ಳುವ ಭಯದಿಂದ ದೇಗುಲ–ದರ್ಗಾ ಸುತ್ತುತ್ತಿರುವ ಜಾತ್ಯತೀತರು..!

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2018, 14:23 IST
Last Updated 24 ಆಗಸ್ಟ್ 2018, 14:23 IST

ವಿಜಯಪುರ: ‘ಕರ್ನಾಟಕಕ್ಕೆ ಕಷ್ಟ ಬಂದಿದೆ. ನೆರೆ–ಬರದಲ್ಲಿ ಸಿಲುಕಿ ಕಂಗಾಲಾಗಿರುವ ಜನರಿಗೆ ಸ್ಪಂದಿಸುವುದನ್ನು ಬಿಟ್ಟು ಜ್ಯೋತಿಷಿಗಳ ಸಲಹೆ ಮೇರೆಗೆ ಮುಖ್ಯಮಂತ್ರಿ ದೇಗುಲ–ದರ್ಗಾ ಸುತ್ತುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಎಚ್‌.ಡಿ.ಕುಮಾರಸ್ವಾಮಿ ನಡೆಯನ್ನು ಟೀಕಿಸಿದರು.

‘ದೇವರು ಅವರವರ ನಂಬಿಕೆ ವಿಷಯ. ವೈಯಕ್ತಿಕ ಟೀಕೆ ಮಾಡಲ್ಲ. ಆದರೆ ಇಂತಹ ಸಂದರ್ಭದಲ್ಲೂ ಅಧಿಕಾರ ಕೈ ತಪ್ಪುವ ಭಯದಿಂದ ಕುಮಾರಸ್ವಾಮಿ ದೇಶದ ವಿವಿಧೆಡೆಯ ದರ್ಗಾ, ದೇಗುಲ ಸುತ್ತುತ್ತಿರುವುದು ಶೋಭೆ ತರುವುದಿಲ್ಲ’ ಎಂದು ಶುಕ್ರವಾರ ನಗರದಲ್ಲಿ ತಮ್ಮ ಜನಸಂಪರ್ಕ ಕಚೇರಿ ಉದ್ಘಾಟನೆ ಬಳಿಕ ಪತ್ರಕರ್ತರಿಗೆ ತಿಳಿಸಿದರು.

‘ಬಿಜೆಪಿಯವರನ್ನು ಮತಾಂಧರು, ಕೋಮುವಾದಿಗಳು ಎಂದು ಜರಿಯುವ ಈ ದೇಶದ ಮಹಾನ್‌ ಜಾತ್ಯತೀತ ಮಾಡುತ್ತಿರುವುದಾದರೂ ಏನು ? ಇದು ದುರ್ದೈವದ ಸಂಗತಿ. ಈ ಸರ್ಕಾರ ಜನರ ಪಾಲಿಗಿಲ್ಲ. ಮಾಜಿಯಾದ ಬಳಿಕ ತಮ್ಮ ಕುಟುಂಬ, ವಂಶದವರನ್ನೆಲ್ಲಾ ಕರೆದುಕೊಂಡು ದೇಗುಲ, ದರ್ಗಾ ಸುತ್ತಲಿ. ನಮ್ಮ ಅಭ್ಯಂತರವೇನಿಲ್ಲ. ಪ್ರಸ್ತುತ ಜನರ ನೋವಿಗೆ ಸ್ಪಂದಿಸಲಿ’ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.

ADVERTISEMENT

‘ಈ ಹಿಂದಿನ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ದಿನೇಶ್‌ ಅಮಿನ್‌ ಮಟ್ಟು ಒಬ್ಬ ಅಯೋಗ್ಯ. ಈತನ ಸಲಹೆಯಿಂದಲೇ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರು. ಮಟ್ಟು ದೇಶದ ಶಾಪ. ಭಾರತದಲ್ಲಿರಲು ಯೋಗ್ಯನಲ್ಲ. ಪಾಕಿಸ್ತಾನಕ್ಕೆ ಹೋಗಬೇಕು’ ಎಂದು ಬಸನಗೌಡ ಹರಿಹಾಯ್ದರು.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುತ್ತೇವೆ. ವಿಜಯಪುರದಲ್ಲಿ ಈ ಹಿಂದಿನ ಬಕ್ರೀದ್‌ ಅವಧಿಯಲ್ಲಿ ನಡೆದಿದ್ದ ಗೋಹತ್ಯೆಯ ಶೇ 10ರಷ್ಟು ಗೋಹತ್ಯೆ ಈ ಬಾರಿ ನಡೆದಿವೆ. ಇದಕ್ಕೆ ಕಾರಣ ನಾನು ನಗರ ಕ್ಷೇತ್ರದ ಶಾಸಕನಾಗಿದ್ದು’ ಎಂದು ಇದೇ ಸಂದರ್ಭ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.