ADVERTISEMENT

ಅಂಗವಿಕಲತೆ ಮೆಟ್ಟಿನಿಂತ ಹಣಮಂತ

ಮಹಾಂತೇಶ ಸಿ.ಹೊಗರಿ
Published 31 ಡಿಸೆಂಬರ್ 2017, 8:56 IST
Last Updated 31 ಡಿಸೆಂಬರ್ 2017, 8:56 IST
ಕಕ್ಕೇರಾದ ಅಂಗವಿಕಲ ಹಣಮಂತ ಕಂಪ್ಯೂಟರ್ ದುರಸ್ತಿ ಕಾಯಕದಲ್ಲಿ ತೊಡಗಿರುವುದು
ಕಕ್ಕೇರಾದ ಅಂಗವಿಕಲ ಹಣಮಂತ ಕಂಪ್ಯೂಟರ್ ದುರಸ್ತಿ ಕಾಯಕದಲ್ಲಿ ತೊಡಗಿರುವುದು   

ಕಕ್ಕೇರಾ: ಪಟ್ಟಣದಲ್ಲಿ ವಿವಿಧ ಕಾರ್ಯಗಳನ್ನು ಮಾಡುವ ಸಾಬಣ್ಣ ವೀರಗಟ್ ಅವರ ಪುತ್ರ ಹಣಮಂತ ಅವರು ಹುಟ್ಟು ಅಂಗವಿಕಲನಾದರೂ ಅಪ್ರತಿಮ ಸಾಧನೆ ಮಾಡುತ್ತಿದ್ದಾರೆ. ಹುಟ್ಟಿನಿಂದ ಅಂಗವಿಕಲತೆ ಇದ್ದರೂ ಅದು ಅವರ ಸಾಧನೆಗೆ ಎಂದೂ ತೊಡಕಾಗಿಲ್ಲ.

ಕಡುಬಡತನವಿದ್ದರೂ ಮತ್ತೊಬ್ಬ ರಿಗೆ ತಮ್ಮಿಂದಾಗುವ ಸೇವೆ, ಸಹಾಯ ಮಾಡುತ್ತ ತಾವು ಅಂಗವಿಕಲ ಎಂಬ ಕೊರಗಿನಿಂದ ಹೊರಬಂದಿದ್ದಾರೆ. ಕೊರಗುತ್ತ ಕೂರದೇ ಕಾಯಕದಲ್ಲಿ ತೊಡಗಿಸಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

‘ಚಿಕ್ಕವರಿದ್ದಾಗಲೇ ಅವರು ಇದು ನನ್ನಿಂದ ಆಗದು, ಸಾಧ್ಯವಿಲ್ಲ ಎಂದು ಹೇಳಿದ ಉದಾಹರಣೆಗಳೇ ಇಲ್ಲ. ಕಂಪ್ಯೂಟರ್‌ನಿಂದ ಟಂಟಂ ವಾಹನದವರೆಗೆ ಎಲ್ಲವನ್ನೂ ಸಲೀಸಾಗಿ ದುರಸ್ತಿ ಮಾಡಬಲ್ಲ ಸಾಮರ್ಥ್ಯ ಇವರಲ್ಲಿದೆ. ಯಾವುದಕ್ಕೂ ಅಂಜದೇ, ಹೆದರದೆ ಧೈರ್ಯದಿಂದ ಮುನ್ನುಗ್ಗುವುದು ಹಣಮಂತ ಅವರ ಜಾಯಮಾನ’ ಎಂದು ಅವರ ಸ್ನೇಹಿತ ಸೋಮಶೇಖರ ಗುರಿಕಾರ ಹೇಳುತ್ತಾರೆ.

ADVERTISEMENT

ಹಣಮಂತ ಕುಟುಂಬದ ತಂದೆ ತಾಯಿಗೆ 4ನೇ ಮಗ. ಇವರು ಮೊದಲು ಸೈಕಲ್ ಅಂಗಡಿ ತೆರೆದಿದ್ದರು. ನಂತರ ತಮ್ಮ ಸಹೋದರನಿಗೆ ಕಲಿಸಿದ ಇವರು, ಟೇಲರಿಂಗ್ ಅಂಗಡಿ ಆರಂಭಿಸಿದರು. ಇದಾದ ಬಳಿಕ ಮೊಬೈಲ್ ಹಾಗೂ ಕಂಪ್ಯೂಟರ್ ದುರಸ್ತಿ ಮಾಡುವ ಮೂಲಕ ಪರಿಣತರಾದರು. ತಾವು ಅಂಗವಿಕಲರಾದರೂ ಆಟೊ ಚಾಲಕರಾಗಿ ಜನಸಾಮಾನ್ಯರನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ತಲುಪಿಸುವ ಜವಾವ್ದಾರಿಯನ್ನೂ ಹೊತ್ತುಕೊಂಡಿದ್ದಾರೆ.

ಪದವೀಧರರಾದ ಹಣಮಂತ ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆದಿಲ್ಲ. ಹೀಗಾಗಿ ಅವರು ಕಲಿತಿರುವ ವಿದ್ಯೆ ಹಾಗೂ ಪಾಲಕರ ಪ್ರೋತ್ಸಾದಿಂದ ಕಂಪ್ಯೂಟರ್ ಕೇಂದ್ರವೊಂದನ್ನು ತೆರೆದು ಕೆಲಸ ಮಾಡುತ್ತಿದ್ದಾರೆ. ಜತೆಗೆ ಟಂಟಂ ವಾಹನ ನಡೆಸುವ ಮೂಲಕ ತಮ್ಮ ಕುಟುಂಬವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

***
ಚಿಕ್ಕವನಿರುವಾಗಲೇ ಚುರುಕಾಗಿದ್ದ ಹಣಮಂತನಿಗೆ ತಾನು ಅಂಗವಿಕಲ ಎಂಬ ಭಾವನೆಯಿಲ್ಲ. ಅಂಗವಿಕಲತೆ ಶಾಪವಲ್ಲ ಎಂಬುದನ್ನು ಅರಿತಿದ್ದಾನೆ.
    -ದ್ಯಾಮವ್ವ ವೀರಗಟ್
       ಹಣಮಂತರ ತಾಯಿ

ಕೈಕಾಲು ಇದ್ದವರು ಹರಟೆ ಹೊಡೆಯುವ ಈ ಕಾಲದಲ್ಲಿ ಹಲವಾರು ಯುವಕರಿಗೆ ಮಾದರಿ ಆಗಿರುವ ಹಣಮಂತನಿಗೆ ಸರ್ಕಾರ ಗುರುತಿಸಿ, ಪ್ರೋತ್ಸಾಹಿಸಿಬೇಕು.
-ಕೊಟ್ರಯ್ಯ ಸ್ವಾಮಿ, ಅಧ್ಯಕ್ಷ
ವೀರಶೈವ ಲಿಂಗಾಯತ ಸಮಾಜ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.