ADVERTISEMENT

ಅಧಿಕಾರಿ ಗೈರು ಹಾಜರಿ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 8:33 IST
Last Updated 3 ಜನವರಿ 2017, 8:33 IST

ಯಾದಗಿರಿ:  ಆಹಾರ ನಿರೀಕ್ಷಣಾ ಅಧಿಕಾರಿ ಗೈರು ಹಾಜರಿ ಖಂಡಿಸಿ ಆಧಾರ್‌ ಸಂಖ್ಯೆ ಜೋಡಣೆಗೆ ಬಂದಿದ್ದ ನೂರಾರು ಪಡಿತರ ಫಲಾನುಭವಿಗಳು ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಆಹಾರ ಇಲಾಖೆ ಅಧಿಕಾರಿ ಹೆಬ್ಬೆರಳಿನ ಗುರುತು ನೀಡಿದರೆ ಮಾತ್ರ ಆಧಾರ್ ಲಿಂಕ್ ಸೇರಿದಂತೆ ಮುಂದಿನ ಕಾರ್ಯ ಅರಂಭವಾಗುತ್ತದೆ. ಪ್ರತಿದಿನ ನಸುಕಿನಿಂದ ಸಂಜೆವರೆಗೂ ಗುರುಮಠಲ್ ವ್ಯಾಪ್ತಿಯ ಸೈದಾಪುರ, ಹೋರುಂಚಾ, ಬದೆಪಲ್ಲಿ, ಮುಂಡರಗಿ, ಶಿವಪೂರ, ಗಾಜರಕೋಟ್, ಅಲ್ಲಿಪುರ, ಹತ್ತಿಕುಣಿ, ಸೇರಿದಂತೆ ವಿವಿಧ ಗ್ರಾಮಗಳ ಗ್ರಾಮಸ್ಥರು ಪಡಿತರ ಚೀಟಿಗೆ ಆಧಾರ ಸಂಖ್ಯೆ ಜೋಡಣೆಗೆ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಆದರೆ, ಆಹಾರ ಇಲಾಖೆ ಅಧಿಕಾರಿ ಬೆಳಿಗ್ಗೆ ಕಚೇರಿಗೆ ಆಗಮಿಸದೆ ಗೈರು ಹಾಜರಾಗುವ ಮೂಲಕ ಜನರ ಸಹನೆ ಪರೀಕ್ಷಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಅಧಿಕಾರಿ ವಿರುದ್ಧ ಹರಿಹಾಯ್ದರು.

ಈಗಾಗಲೇ ಆಧಾರ್ ಸಂಖ್ಯೆ ಲಿಂಕ್ ಮಾಡಿಸದಿರುವ ಪಡಿತರ ಚೀಟಿಯನ್ನು ರದ್ದುಪಡಿಸುವಂತೆ ಸರ್ಕಾರ ಆದೇಶಿದೆ. ಅದರಂತೆ ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡದ ಹಿನ್ನೆಲೆಯಲ್ಲಿ ಸಾಕಷ್ಟು ಕುಂಟುಬಗಳ ಪಡಿತರ ಚೀಟಿ ತಾತ್ಕಾಲಿಕವಾಗಿ ರದ್ದಾಗಿದೆ.

ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸಲು ಗ್ರಾಮೀಣ ಭಾಗದ ಜನರು ಆಹಾರ ಇಲಾಖೆ ಕಚೇರಿಗೆ ರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಒಂದು ವಾರದಿಂದ ಯಾದಗಿರಿ ತಾಲ್ಲೂಕು ಕಚೇರಿಯಲ್ಲಿ ದಿನಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಅಧಿಕಾರಿಗಳು ಮಾತ್ರ ಕುಂಟುನೆಪ ಹೇಳಿ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಜನರನ್ನ ಸತಾಯಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

‘ಕೂಡಲೇ ಆಹಾರ ಇಲಾಖೆ ಅಧಿಕಾರಿಯ ಮೇಲೆ ಕ್ರಮಕೈಗೊಂಡು ಆಧಾರ್ ಲಿಂಕ್ ಮಾಡಲು ಅನುಕೂಲ ಕಲ್ಪಿಸಬೇಕು’ ಎಂದು  ಪ್ರತಿಭಟನಾ ನಿರತ ಗ್ರಾಮಸ್ಥರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.

ಹುಸೇನ್‌ ಗುಡೂರ, ಮಹಾದೇವಿ ಯರಗೋಳ, ಅಲಿಪುರ ಮುದ್ನಾಳ, ಪದ್ದೆಪಲ್ಲಿ ತಾಂಡಾದ ಧರ್ಮಣ್ಣ, ಗೋವಿಂದ ಬಸಂತಪ್ಪ, ರಾಘವೇಂದ್ರ, ಸಿದ್ರಾಪ್ಪ, ತಿಮಪ್ಪ, ರಾಕೇಶ, ಸತೀಶ್, ರಾಜೇಂಧ್ರ, ತಾಯಪ್ಪ, ಯಂಕಪ್ಪ, ಸಾಬಮ್ಮ ಬೆಳಗೇರಾ ವಿವಿಧ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.