ADVERTISEMENT

ಎಕರೆಗೆ ₹25 ಸಾವಿರ ಬರ ಪರಿಹಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 19 ಮೇ 2017, 6:20 IST
Last Updated 19 ಮೇ 2017, 6:20 IST
ಬರ ಪರಿಹಾರಕ್ಕೆ ಆಗ್ರಹಿಸಿ ಯಾದಗಿರಿ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು
ಬರ ಪರಿಹಾರಕ್ಕೆ ಆಗ್ರಹಿಸಿ ಯಾದಗಿರಿ ಜಿಲ್ಲಾಡಳಿತ ಭವನದ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು   

ಯಾದಗಿರಿ: ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ. ಬರ ಪರಿಹಾರದ ರೂಪದಲ್ಲಿ ಪ್ರತಿ ಎಕರೆಗೆ ₹25 ಸಾವಿರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

‘ಐದಾರು ವರ್ಷಗಳಿಂದ ಮಳೆ ಕೊರತೆಯಾಗಿದೆ. ವಾಡಿಕೆ ಮಳೆಯೂ ಇಲ್ಲ. ಅಂತರ್ಜಲ ಮಟ್ಟ ಕುಸಿದಿದ್ದು, ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿ ಬಿತ್ತನೆಯಾಗಿಲ್ಲ. ಬಿತ್ತನೆ ಆಗಿರುವ ಭೂಮಿಯಲ್ಲಿನ ಬೆಳೆಗೆ ಮಳೆ ಕೊರತೆ ಉಂಟಾಗಿ ರೈತರಿಗೆ ನಷ್ಟವಾಗಿದೆ. ಸರ್ಕಾರ ಕೂಡಲೇ ಬೆಳೆವಿಮೆ ಬಿಡುಗಡೆ ಮಾಡಬೇಕು. ಬೆಳೆ ನಷ್ಟ ಭರಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

‘ಕೃಷಿ ತಜ್ಞ ಡಾ. ಎಂ.ಎಸ್‌. ಸ್ವಾಮಿನಾಥನ್ ವರದಿ ಪ್ರಕಾರ ಪ್ರತಿ ಕ್ವಿಂಟಲ್ ತೊಗರಿಗೆ ₹ 7500, ಮೆಣಸಿನಕಾಯಿಗೆ ₹10,000, ಹತ್ತಿಗೆ ₹,5800 ಬೆಂಬಲ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರಗಳನ್ನು ತೆರೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಮುಂಗಾರಿನ ಹಂಗಾಮಿಗೆ ಕೃಷಿ ಇಲಾಖೆ ಬಿತ್ತನೆಬೀಜ ಗೊಬ್ಬರ ಕ್ರಿಮಿನಾಶಕ ಅಗತ್ಯಕ್ಕೆ ತಕ್ಕಂತೆ ರೈತರಿಗೆ ಪೂರೈಸಬೇಕು. ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಎಲ್ಲ ಸಾಲ ಮನ್ನಾ ಮಾಡಬೇಕು  ಎಂದು ಒತ್ತಾಯಿಸಿದರು.

‘ಬಗರ್‌ಹುಕಂ ಭೂಮಿ ಸಾಗುವಳಿ ಮಾಡುತ್ತಿರುವ ಎಲ್ಲಾ ರೈತರಿಗೆ ಭೂಮಿಯನ್ನು ಸರ್ವೆ ಮಾಡಿ ಅವರ ಹೆಸರಿಗೆ ಪಟ್ಟಾ ನೀಡಿ ಹಕ್ಕುಪತ್ರ ಕೊಡಬೇಕು. ಎಲ್ಲಾ ಬಡವರಿಗೆ ನಿವೇಶನ ನೀಡಿ, ಮನೆ ಕಟ್ಟಲು ₹5 ಲಕ್ಷ ಮೀಸಲಿಡಬೇಕು’ ಎಂದು ಆಗ್ರಹಿಸಿದರು.

‘ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಮಪರ್ಕವಾಗಿ ಜಾರಿಗೊಳಿಸಬೇಕು. ಉದ್ಯೋಗ ನೀಡಿದವರಿಗೆ ಭತ್ಯೆ ನೀಡಬೇಕು. ಕೂಲಿಕಾರ್ಮಿಕರಿಗೆ  ದರವನ್ನು ₹ 600ಕ್ಕೆ ಏರಿಕೆ ಮಾಡಬೇಕು’ ಎಂದು ಒತ್ತಾಯಿಸಿದರು.

ಕರ್ನಾಟಕ ಪ್ರಾಂತ ರೈತ  ಸಂಘದ ಜಿಲ್ಲಾ ಘಕಟದ ಅಧ್ಯಕ್ಷ ಯಕ್ಕಪ್ಪ ಚಿನ್ನಾಕಾರ್, ಎಸ್.ಎಂ. ಸಾಗರ್, ಚಂದ್ರಶೇಖರ್ ಚವ್ಹಾಣ, ಗಣೇಶ ಅನಪೂರ್, ನಿಂಗಣ್ಣ ಆಡಕಾಯಿ, ಧರ್ಮಣ್ಣ ದೊರಿ, ಬಸವರಾಜ ಭಜಂತ್ರಿ, ರಾಮಯ್ಯ ಭೋಮಿ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.