ADVERTISEMENT

ಐಷಾರಾಮಿ ಬಸ್‌ಗಳಿಲ್ಲದ ಸಾರಿಗೆ ಘಟಕ

ಎನ್‌ಇಕೆಆರ್‌ಟಿಸಿ ನಿರಾಸಕ್ತಿ

ಮಲ್ಲೇಶ್ ನಾಯಕನಹಟ್ಟಿ
Published 20 ಮಾರ್ಚ್ 2017, 8:43 IST
Last Updated 20 ಮಾರ್ಚ್ 2017, 8:43 IST
ಯಾದಗಿರಿಯ ಜಿಲ್ಲಾ ಸಾರಿಗೆ  ಘಟಕ ಸಂಕೀರ್ಣ
ಯಾದಗಿರಿಯ ಜಿಲ್ಲಾ ಸಾರಿಗೆ ಘಟಕ ಸಂಕೀರ್ಣ   

ಯಾದಗಿರಿ: ಶಹಾಪುರ ಜಿಲ್ಲಾ ಕೇಂದ್ರದಿಂದ 30 ಕಿ.ಮೀ. ಇದೆ. ಕಲಬುರ್ಗಿಯಿಂದ ಅಲ್ಲಿಗೆ ಬರುವ ಸ್ಲೀಪರ್‌ ಬಸ್‌ಗಳನ್ನು ನಾವು ಕ್ಯಾಚ್‌ ಮಾಡಬೇಕು. ಶಹಾಪುರಕ್ಕೆ ಈ ಬಸ್‌ಗಳು 9ಕ್ಕೆ ಬರುವುದಿದ್ದರೆ ನಾವು ಯಾದಗಿರಿಯನ್ನು 7ಕ್ಕೆ ಬಿಡಬೇಕು. ಆದರೆ, ಸಂಜೆ 6ರಿಂದ 8ರವರೆಗೆ ಶಹಾಪುರಕ್ಕೆ ಒಂದೂ ಬಸ್‌ ವ್ಯವಸ್ಥೆ ಇರುವುದಿಲ್ಲ.

7.30ಕ್ಕೆ ಶಹಾಪುರ ಘಟಕದಿಂದ ಒಂದು ಬಸ್‌ ವಾಲಾಡಿಕೊಂಡು ಬರುತ್ತದೆ. ಆದರೆ, ಕಾಯಂ ಆಗಿ ಬಂದೇಬರುತ್ತದೆ ಎಂಬುದು ಖಾತ್ರಿ ಇಲ್ಲ. ಹಾಗಾಗಿ, ಶಹಾಪುರದಲ್ಲಿ ಸ್ಲೀಪರ್ ಕೋಚ್ ಬಸ್‌ ಹಿಡಿಯಲು ಪ್ರಯಾಣಿಕರು ಅನುಭವಿಸುವ ಆತಂಕ ಅಷ್ಟಿಷ್ಟಲ್ಲ. ಎಷ್ಟೋ ಸಲ ಸಾವಿರಾರು ರೂಪಾಯಿ ನೀಡಿ ಕಾಯ್ದಿರಿಸಿದ ಬಸ್‌ಗಳು ಕೈತಪ್ಪಿದ ಉದಾಹರಣೆಗಳಿವೆ..

ಬೆಂಗಳೂರು, ಧಾರವಾಡ, ಶಿವಮೊಗ್ಗ,  ಮೈಸೂರು, ಮಂಗಳೂರು, ಮಣಿಪಾಲ್, ಹೊಸಪೇಟೆ, ದಾವಣಗೆರೆ, ಹೈದರಾಬಾದ್ ನಗರಗಳಿಗೆ ರಾತ್ರಿ ಸಂಚರಿಸುವ ಪ್ರಯಾಣಿಕರ ಸಂಕಷ್ಟದ ನುಡಿಗಳಿವು.

ಸಾವಿರಾರು ಕಿಲೋ ಮೀಟರ್ ದೂರದ ಈ ನಗರಗಳಿಗೆ ಇಲ್ಲಿನ ಎನ್‌ಇಕೆಆರ್‌ಟಿಸಿ ಜಿಲ್ಲಾ ಘಟಕದಿಂದ ಕೆಂಪುಬಸ್‌ಗಳ ಸೌಕರ್ಯ ಹೊರತುಪಡಿಸಿದರೆ ಉಳಿದ ಯಾವುದೇ ಉತ್ಕೃಷ್ಟ ಬಸ್‌ ಸಂಚಾರ ವ್ಯವಸ್ಥೆಯನ್ನು ಜಿಲ್ಲಾ ಸಾರಿಗೆ ಸಂಸ್ಥೆಯ ಜಿಲ್ಲಾ ಘಟಕ ಆರಂಭಿಸಿಲ್ಲ.

ಜಿಲ್ಲಾ ಕೇಂದ್ರದಿಂದ ಧಾರವಾಡ ಮಾರ್ಗ ಸೌಕರ್ಯ ಬಿಟ್ಟರೆ ಮಂಗಳೂರು, ಶಿವಮೊಗ್ಗ, ಬೆಂಗಳೂರುಗ ಳಂತಹ ದೂರದ ನಗರಗಳಿಗೆ ಪ್ರಯಾಣಿಕರು ಕೆಂಪು ಬಸ್‌ಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದೆ. ಹಾಗಾಗಿ, ರಾಜ್ಯದ ದೂರದ ನಗರಗಳಿಗೆ ಖಾಸಗಿ ಮಾಲೀಕತ್ವದ ಬಸ್‌ಗಳನ್ನೇ ಜನರು ನೆಚ್ಚಿಕೊಳ್ಳುವಂತಾಗಿದೆ. ಆದರೆ, ದುಪ್ಪಟ್ಟು ಬಸ್‌ ದರದಿಂದಾಗಿ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಇಡೀ ಘಟಕಕ್ಕೆ ಒಂದೂ ಐಷಾರಾಮಿ ಬಸ್‌ಗಳ ಸೌಕರ್ಯ ಇಲ್ಲ. ಯಾದಗಿರಿ–ಧಾರವಾಡ ಮಾರ್ಗವಾಗಿ ಒಂದು ಸುಹಾಸ್‌ ಐಷಾರಾಮಿ ಬಸ್‌ ಸೌಕರ್ಯ ಮಾತ್ರ ಇದೆ. ಉಳಿದಂತೆ ಜಿಲ್ಲಾ ಸಾರಿಗೆ ಸಂಸ್ಥೆಯ ಘಟಕದಿಂದ ಗ್ರಾಮೀಣ ಸಂಚಾರ ಸೇವೆಗೆ ಮಾತ್ರ ಸೀಮಿತಗೊಂಡಿದೆ.

ಸಾರಿಗೆ ಘಟಕದಲ್ಲಿ ಒಟ್ಟು 11 ನಗರ ಸಾರಿಗೆ ಮತ್ತು 113 ಕೆಂಪುಬಸ್‌ಗಳು ಇವೆ. 39 ಮಂದಿ ಕಂಡಕ್ಟರ್‌ಗಳು, 162 ಮಂದಿ ಚಾಲಕರು, 139 ಮಂದಿ ಕಂಡಕ್ಟರ್‌ ಕಂ ಡ್ರೈವರ್‌ ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಐಷಾರಾಮಿ ಬಸ್‌ ಸಂಚಾರ ಆರಂಭಕ್ಕಾಗಿ ಅವರೂ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

‘ಜಿಲ್ಲೆಯಲ್ಲಿ ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ನೌಕರರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಂದಾಯ ಮತ್ತು ಕೃಷಿ ಇಲಾಖೆಯಲ್ಲಿಯೇ 46ಕ್ಕೂ ಹೆಚ್ಚು ಪ್ರಥಮ ಮತ್ತು ದ್ವಿತೀಯ ದರ್ಜೆ ಸಹಾಯಕರು ಇದ್ದಾರೆ. ಅವರಲ್ಲಿ ಹೊಸಪೇಟೆ, ಕೂಡ್ಲಿಗಿ ತಾಲ್ಲೂಕಿನ 16 ಮಂದಿ ನೌಕಕರಿದ್ದಾರೆ. ಹಾಗೆ ನೋಡಿದರೆ 52 ಇಲಾಖೆಯಲ್ಲಿ ಒಟ್ಟು 149 ಮಂದಿ ನೌಕರರು ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದು ಇಲ್ಲಿ ನೆಲೆಸಿದ್ದಾರೆ.

ಸಿಬ್ಬಂದಿ ಕೊರತೆ ಕಾರಣ ಸರ್ಕಾರ ಇವರಿಗೆ ವರ್ಗಾವಣೆ ನೀಡುತ್ತಿಲ್ಲ. ಊರು ನೋಡಲು ಇವರು ರೈಲಿನ ಮೂಲಕ ಬಳ್ಳಾರಿ–ಬೆಂಗಳೂರು ಸುತ್ತಿ ನಂತರ ಊರಿನ ಬಸ್‌ ಹಿಡಿಯುತ್ತಾರೆ. ನಿತ್ಯ ಈ ನರಕ ಸಾಕುಬೇಕಾಗಿದೆ’ ಎಂದು ನೌಕರರಾದ ಕೊಟ್ರೇಶ್, ರವೀಂದ್ರ, ಸತೀಶ್‌ ಹೇಳುತ್ತಾರೆ.

ಬಸ್‌ ಖರೀದಿಸದ ಸಂಸ್ಥೆ
ವೋಲ್ವೊ, ಸ್ಲೀಪರ್ ಬಸ್‌ಗಳನ್ನು ಈಶಾನ್ಯ ಸಾರಿಗೆ ಸಂಸ್ಥೆ ಇದುವರೆಗೂ ಒಂದೂ ಬಸ್‌ಗಳನ್ನು ಖರೀದಿಸಿಲ್ಲ ಎಂಬುದು ಬೇಸರದ ಸಂಗತಿ. ಜನಪ್ರತಿನಿಧಿಗಳ ನಿರ್ಲಕ್ಷ್ಯ, ಸಾರಿಗೆ ನಿಗಮ ಅಧ್ಯಕ್ಷರ ಬೇಜವಾಬ್ದಾರಿ ಎದ್ದು ತೋರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಹಣಮಂತಪ್ಪ ಭಂಗಿ ಅಸಮಾಧಾನ ವ್ಯಕ್ತಪಡಿಸಿದರು.

ಒಟ್ಟು 372 ಬಸ್‌ಗಳು
‘ಯಾದಗಿರಿ ಸಾರಿಗೆ ಸಂಸ್ಥೆಯ ವಿಭಾಗದಲ್ಲಿ ಒಟ್ಟು 372 ಬಸ್‌ಗಳ ಸೌಕರ್ಯ ಇದೆ. ಇದರಲ್ಲಿ ಒಟ್ಟು 26 ಬಸ್‌ಗಳು ಐಷಾರಾಮಿ ಇವೆ (ಎಲ್ಲವೂ ಕೆಂಪುಬಸ್‌ಗಳು!). ಒಂದು ಸುಹಾಸ್‌ ಇವೆ. ವೋಲ್ವೊ, ಸ್ಲೀಪರ್‌ ಮಾದರಿ ಬಸ್‌ ಸೌಕರ್ಯ ಇಲ್ಲ. ಅವುಗಳಿಗಾಗಿ ಸಂಸ್ಥೆಗೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರ ಣಾಧಿಕಾರಿ ಸಂತೋಷ್ ಎಂ. ಗೋಗೇರಿ ತಿಳಿಸಿದರು.

ADVERTISEMENT

ಇದು ಅಧಿಕಾರಿಗಳ ಗಿಮಿಕ್!
ಖಾಸಗಿ ಮಾಲೀಕತ್ವದಲ್ಲಿ ಯಾದಗಿರಿ ಯಿಂದ ಒಟ್ಟು ನಾಲ್ಕು ಐಷಾರಾಮಿ ಬಸ್‌ ಸಂಚರಿಸುತ್ತಿವೆ. ಬೆಂಗಳೂರು–2, ಶಿವಮೊಗ್ಗ–2 ಐಷಾರಾಮಿ ಬಸ್‌ಗಳು ಸಂಚರಿಸುತ್ತಿವೆ. ಖಾಸಗಿಯವರಿಗೆ ಆಗದ ನಷ್ಟ ಸಾರಿಗೆ ಸಂಸ್ಥೆಗೆ ಹೇಗಾಗುತ್ತದೆ. ಇದು ಅಧಿಕಾರಿಗಳ ಗಿಮಿಕ್‌ ಎಂದು ಪ್ರಯಾಣಿಕರಾದ ರಾಜು, ಪ್ರಭುದೇವ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.