ADVERTISEMENT

ಕಾಲುವೆಗಳಿಗೆ ನೀರು ಹರಿಸಲು ಆಗ್ರಹ

ಕಕ್ಕೇರಾ: ಕೆಬಿಜೆಎನ್ಎಲ್ ಉಪವಿಭಾಗ ಸಂಖ್ಯೆ- 5ರ ಕಚೇರಿಗೆ ರೈತರ ಭೇಟಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2017, 10:46 IST
Last Updated 4 ಮಾರ್ಚ್ 2017, 10:46 IST

ಕಕ್ಕೇರಾ: ವಾರಾಬಂದಿ ಪದ್ಧತಿ ಕೈಬಿಟ್ಟು ಕಾಲುವೆಗಳಿಗೆ ಸರಿಯಾಗಿ ನೀರು ಹರಿಸಬೇಕು ಎಂದು ರೈತರು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳನ್ನು ಆಗ್ರಹಿಸಿದರು.

ಪಟ್ಟಣದ ಕೆಬಿಜೆಎನ್ಎಲ್ ಉಪವಿಭಾಗ ಸಂಖ್ಯೆ-5ರ ಕಚೇರಿಗೆ ಭೇಟಿ ನೀಡಿದ ರೈತರು ಅಧಿಕಾರಿ ರಂಜಾನ್‌ ಅವರೊಂದಿಗೆ ಚರ್ಚಿಸಿದರು. ವಾರಾಬಂದಿಯಿಂದ ನೀರು ಸರಿಯಾಗಿ ತಲುಪುತ್ತಿಲ್ಲ. ಹೀಗಾಗಿ ಬೆಳೆಗಳು ಒಣಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

‘ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ನೀವು ಪಾಲಿಸಿಲ್ಲ. ನಿಮ್ಮ ಮನಸಿಗೆ ಬಂದಂತೆ ವಾರಾಬಂದಿ ಮಾಡುತ್ತಿರುವುದರಿಂದ ನಮ್ಮ ಬೆಳೆ ಒಣಗುತ್ತಿದೆ. ಸಾಲ  ಮಾಡಿ ಬೆಳೆದ ಬೆಳೆಗಳು ವಿನಾಶದ ಅಂಚಿಗೆ ತಲುಪಲಿಕ್ಕೆ ಅಧಿಕಾರಿಗಳೆ ನೇರ ಹೊಣೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

‘ಆಲಮಟ್ಟಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದಂತೆ 14ದಿವಸ ಚಾಲು, 12ದಿವಸ ಬಂದ್ ಪದ್ಧತಿ ಮಾಡಲಾಗಿತ್ತು. ರೈತರಿಗೆ ಗೊತ್ತಿಲ್ಲದಂತೆ ಮತ್ತೊಮ್ಮೆ ಸಭೆ ನಡೆಸಿ 12ದಿವಸ ಚಾಲು 12 ದಿವಸ ಬಂದ್ ಪದ್ಧತಿ ಮಾಡಿದ್ದಾರೆ. ಆದರೆ ಅಧಿಕಾರಿಗಳು ಅದನ್ನು ಸರಿಯಾಗಿ ಪಾಲಿಸದೇ 11ದಿವಸ ಚಾಲು 15ದಿವಸ ಬಂದ್ ಪದ್ಧತಿ ಅನುಸರಿಸುತ್ತಿದ್ದಾರೆ.

ಕಾಲುವೆಗೆ ಅರ್ಧ ಗೇಜ್ ನೀರನ್ನು ಹರಿಸಲಾಗುತ್ತಿದೆ. ಇದರಿಂದ  ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಇದಕ್ಕೆಲ್ಲ ಅಧಿಕಾರಿಗಳೇ ನೇರ ಹೊಣೆ’ ಎಂದು ದಶರಥ ದೊರೆ ಹೇಳಿದರು.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳು ತೆನೆ ಕಟ್ಟುವ ಹಂತಕ್ಕೆ ಬಂದಿದ್ದು ಇಂತಹ ಸಂದರ್ಭದಲ್ಲಿ ಸರಿಯಾಗಿ ನೀರು ದೊರೆಯದಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗುತ್ತದೆ ಎಂದರು.

‘ಈ ಮೊದಲು ಆಲಮಟ್ಟಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾ.28ರವರೆಗೆ ಕಾಲುವೆಗೆ ನೀರು ಹರಿಸಲಾಗುತ್ತದೆ ಎಂದು ಹೇಳಿದ್ದರು. ಆದರೆ ಈಗ ಏಕಾ ಏಕಿ ಮಾ.14ಕ್ಕೆ ನೀರು ನಿಲ್ಲಿಸಲಾಗುವುದು ಎಂದು ಹೇಳಲಾಗುತ್ತಿದೆ.

ಮಾರ್ಚ್‌ ಕೊನೆಯವರೆಗೆ ನೀರು ಹರಿಸಲಾಗುತ್ತದೆ ಎಂದು ಹೇಳಿದ್ದಕ್ಕೆ ನಾವು ಹಿಂಗಾರು ಹಂಗಾಮಿನ ಕೃಷಿಯಲ್ಲಿ ತೊಡಗಿದ್ದೇವೆ. ಅಧಿಕಾರಿಗಳ ಈ ಕ್ರಮದಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.  ಜಲಾಶಯ ವಿಭಾಗದ ಅಧಿಕಾರಿಗಳ ಭೇಟಿಗೆ ರೈತರು ನಾರಾಯಣಪುರಕ್ಕೆ ತೆರಳಿದರು.

ಚಿದಾನಂದ ಕಮತಗಿ, ಪರಮಣ್ಣ ಪೂಜಾರಿ, ಮಲ್ಲಣ್ಣ ಜಂಪಾ, ಶ್ಯಾಮಸುಂದರ ಶೆಟ್ಟಿ, ದೇವಿಂದ್ರಪ್ಪ ಗುಡಗುಂಟಿ, ವೆಂಕಟೇಶರಡ್ಡಿ,  ವೀರಭದ್ರಯ್ಯ ದೇವಿಂದ್ರಪ್ಪ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT