ADVERTISEMENT

ಕುಲ ಕಸುಬು ಮಾಯವಾಗಿ ‘ಕುಲ’ ಉಳಿದಿದೆ

ಅವನತಿಯ ಅಂಚಿಗೆ ತಲುಪಿದ ಗ್ರಾಮೀಣ ಗುಡಿ ಕೈಗಾರಿಕೆಗಳು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 12:03 IST
Last Updated 12 ಫೆಬ್ರುವರಿ 2017, 12:03 IST
ಚಕ್ಕಡಿಯ ಗಾಲಿಯನ್ನು ಸಿದ್ಧಪಡಿಸುತ್ತಿರುವ ಕಂಬಾರ
ಚಕ್ಕಡಿಯ ಗಾಲಿಯನ್ನು ಸಿದ್ಧಪಡಿಸುತ್ತಿರುವ ಕಂಬಾರ   

ಶಹಾಪುರ: ಕೃಷಿ  ರೈತರಿಗೆ ಲಾಭದಾಯಕ ಕೆಲಸವಾಗಿ ಉಳಿದಿಲ್ಲ. ಯುವಕರು ಕೃಷಿಯಿಂದ ವಿಮು ಖರಾಗುತ್ತಿರುವ ಈ ಹಂತದಲ್ಲಿ ಒಕ್ಕಲು ತನಕ್ಕೆ ಬೇಕಾದ ಅಗತ್ಯ ಸಲಕರಣೆಗಳನ್ನು ಪೂರೈಕೆ ಮಾಡುತ್ತಿದ್ದ ಕಂಬಾರಿಕೆ, ಬಡಿಗತನ ಅವನತಿಯ ಅಂಚಿಗೆ ಬಂದಿವೆ.

ಗ್ರಾಮಗಳ ಜನರ ಜೀವನ ಶೈಲಿಯಲ್ಲಿ ಬದಲಾವಣೆಯಾದ್ದರಿಂದ ಕುಲ ಕಸುಬು ಮಾಯವಾಗಿ ಕುಲ (ಜಾತಿ) ಮಾತ್ರ ಉಳಿದುಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ತಮ್ಮ ಕುಲ ಕಸುಬುಗಳ ಜೊತೆ ಇದ್ದ ಭಾವನಾತ್ಮಕ ಸಂಬಂಧಗಳ ಕೊಂಡಿ ಕಳಚಿ ಬಿದ್ದಿವೆ. ಗ್ರಾಮದ ಸಾಮಾಜಿಕ,  ಸಾಂಸ್ಕೃತಿಕ ಸಾಮರಸ್ಯ ಕಣ್ಮರೆಯಾಗುತ್ತಿದೆ.

ನಗರೀಕರಣ ಹಾಗೂ ಔದ್ಯೋಗೀಕರಣದಿಂದಾಗಿ ಗ್ರಾಮ ಗಳಲ್ಲಿ ವೃತ್ತಿ ಸಂಘರ್ಷಗಳ ತಿಕ್ಕಾಟ ನಡೆದಿದೆ. ರೈತ ತನ್ನನ್ನು ತಾನು ಸಲುಹಿಕೊಳ್ಳಲು ಹೆಣಗಾಡುತ್ತಿದ್ದಾನೆ. ಇದರ ನಡುವೆ ಕುಲ ಕಸಬುದಾರರಾದ ಕಮ್ಮಾರ, ಕುಂಬಾರ, ಕ್ಷೌರಿಕ, ಅಗಸ, ಚಮ್ಮಾರ, ಕೊರವರು ಶಿಕ್ಷಣ ಹಾಗೂ ಯಂತ್ರೋಪಕರಣ ಬಳಕೆ ಜೊತೆಯಲ್ಲಿ ಆರ್ಥಿಕ ದೃಷ್ಠಿಕೋನದಿಂದ ವೃತ್ತಿಯಲ್ಲಿ ಬದಲಾವಣೆ ಕಂಡುಕೊಂಡ ಕಾರಣ ಸಾಂಪ್ರದಾಯಿಕ  ಕಸುಬು ಈಗ ನೆನಪು ಮಾತ್ರ ಎನ್ನುತ್ತಾರೆ ಉಪನ್ಯಾಸಕ ರಾಘವೇಂದ್ರ ಹಾರಣಗೇರಾ.

ಕುಲುಮೆ ಕೆಲಸ ಮಾಡುವ ಕಮ್ಮಾರರು ಅಪ್ರಸ್ತುತರಾಗಿದ್ದಾರೆ. ಯಂತ್ರ ನಿರ್ಮಿತ ಉಪಕರಣಗಳು ಮಾರುಕಟ್ಟೆಗೆ ಲಗ್ಗೆ ಹಾಕಿವೆ. ರಬ್ಬರ್‌, ಪ್ಲಾಸ್ಟಿಕ್ ವಸ್ತುಗಳಿಂದ ಚಮ್ಮಾರಿಕೆ ಮತ್ತು ಕುಂಬಾರಿಕೆಗೆ ಹೊಡೆತ ಬಿದ್ದಿದೆ. ಕುಂಬಾರಣ್ಣನ ಟಿಗರಿಗೆ ಕೆಲಸವಿಲ್ಲದಂತೆ ಆಗಿದೆ. ಮಣ್ಣಿನ ಮಡಿಕೆ, ಕೊಡ, ಮುಚ್ಚಳ ಯಾರು ಕೇಳುತ್ತಿಲ್ಲ.

‘ಪ್ಲಾಸ್ಟಿಕ್ ವಸ್ತುಗಳು ನಮ್ಮ ತುತ್ತಿನ ಅನ್ನದ ಬಟ್ಟಲನ್ನು ಕಸಿದುಕೊಂಡಿವೆ. ನಾವು ಅನಿವಾರ್ಯವಾಗಿ ಟಿಗರಿಗೆ ವಿದಾಯ ಹೇಳಿ ಅನ್ಯ ಕಸುಬುಗಳತ್ತ ವಾಲಬೇಕಾಗಿ ಬಂದಿದೆ. ಕುಲ ಕಸುಬು ನಂಬಿ ಜೀವನ ನಡೆಸಿದರೆ ಒಪ್ಪತ್ತಿನ ಊಟಕ್ಕೂ ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ. ಈಗ ನಮಗೆ ಜಾತಿ ಉಳಿದು ಕೊಂಡಿದೆ. ಕುಲ ಕಸಬು ನೇಪಥ್ಯಕ್ಕೆ ಸರಿದಿದೆ’ ಎನ್ನುತ್ತಾರೆ ಬಸ ವರಾಜ ಕುಂಬಾರ.

ಈಚಲದ ಗಿಡದ ಉದ್ದನೆಯ ಪೊರಕೆಯನ್ನು ಕತ್ತರಿಸಿ ಅದನ್ನು ಹೆಣೆದು, ಕೃಷಿಯ ದವಸ ಧಾನ್ಯ ಸರಬ ರಾಜು ಮಾಡಲು ಪುಟ್ಟಿ, ಚಾಪೆ, ಡೊಳ್ಳೋಡಗಿ, ಹೆಂಡಿ ಪುಟ್ಟಿ, ಕೋಳಿ ಪುಟ್ಟಿ, ಪೊರಕೆ ಹೀಗೆ ವಿವಿಧ ವಸ್ತಗ ಳನ್ನು ತಯಾರಿಸುತ್ತಿದ್ದರು. ಇಂದು ಈಚಲದ ಗಿಡಗಳೇ ಮರೆ ಯಾಗಿರುವಾಗ ಸಾಮಗ್ರಿ ತಯಾ ರಿಸುವುದು ಎಲ್ಲಿಂದ. ಈಗ ನಾವು ಅನಿವಾರ್ಯವಾಗಿ ಜಾತ್ರೆ ಮುಂತಾದ ಕಡೆ ತೆರಳಿ ದೇವರ ಭಾವಚಿತ್ರ, ಕಾಸಿ ದಾರ, ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದೇವೆ ಎನ್ನುತ್ತಾರೆ ಕೊರವರ ಹಣಮಂತ.

ಇದೇ ರೀತಿ ಗ್ರಾಮೀಣ ಭಾಗದ ಹಲವು ಕುಲ ಕಸುಬುಗಳು ಮರೆಯಾಗುತ್ತಿವೆ. ಕುಲ ಕಸುಬುಗಳಿಂದ ತಯಾ ರಾಗುತ್ತಿದ್ದ ವಸ್ತುಗಳನ್ನು ಮುಂದಿನ ಸಮುದಾಯಕ್ಕೆ ಅಲಂಕಾ ರಿಕೆ ವಸ್ತುಗಳ ರೀತಿ ಇಟ್ಟು ತೋರಿಸುವ ಕಾಳ ದೂರ ಇಲ್ಲ ಎನ್ನುವುದು ಗ್ರಾಮೀಣ ಜನರ ಅನಿಸಿಕೆಯೂ ಹೌದು.
– ಟಿ.ನಾಗೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT