ADVERTISEMENT

ಕೇಂದ್ರದ ಅನುದಾನ ಬಳಸದ ರಾಜ್ಯ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 5:44 IST
Last Updated 21 ಜುಲೈ 2017, 5:44 IST

ಯಾದಗಿರಿ: ‘ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರ ಬಿಡುಗಡೆ ಮಾಡಿರುವ ಸಾವಿರಾರು ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಳಕೆ ಮಾಡುವಲ್ಲಿ ವಿಫಲವಾಗಿದೆ’ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ದೂರಿದರು. ಸಮೀಪದ ಮದ್ರಕಲ್‌ ಗ್ರಾಮದಲ್ಲಿ ಗುರುವಾರ ನಡೆದ ಬಿಜೆಪಿ ಬೂತ್ ಮಟ್ಟದ ವಿಸ್ತಾರಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘ಜಿಲ್ಲೆಗೆ ಉಜ್ವಲ್ ಯೋಜನೆಯಡಿ ಕೇಂದ್ರ ₹83 ಕೋಟಿ  ಅನುದಾನ ಬಿಡುಗಡೆ ಮಾಡಿದೆ. ಆದರೆ, ಅಧಿಕಾರಿಗಳು ಅದನ್ನು ಬಳಕೆ ಮಾಡಿಕೊಳ್ಳದೆ ಬಡ ವರ್ಗದ ಜನರಿಗೆ ಅನ್ಯಾಯ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಚಾಟಿ ಬೀಸಬೇಕಾದ ಸರ್ಕಾರ ಇದಕ್ಕೂ ತನಗೂ ಸಂಬಂಧವಿಲ್ಲ ಎಂಬಂತೆ ನಡೆದುಕೊಳ್ಳುತ್ತಿದೆ’ ಎಂದು ಆರೋಪಿಸಿದರು.

‘ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಅನೇಕ ಕೊಲೆ, ದರೋಡೆ ಪ್ರಕರಣಗಳು ನಡೆದಿವೆ. ಇದರಿಂದ ಸಮಾಜದಲ್ಲಿನ ಸಾಮರಸ್ಯಕ್ಕೆ ಧಕ್ಕೆ ಉಂಟಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜನರು ಆತಂಕದಿಂದ ಜೀವನ ಸಾಗಿಸುತ್ತಿದ್ದಾರೆ’ ಎಂದರು.

ADVERTISEMENT

ಬಿಜೆಪಿ ಜಿಲ್ಲಾ ಉಸ್ತುವಾರಿ ಎನ್.ಶಂಕ್ರಪ್ಪ ಮಾತನಾಡಿ, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಇಡೀ ದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವಿದೇಶಗಳಿಗೆ ಭೇಟಿ ನೀಡಿ ಸಾವಿರಾರು ಕೋಟಿ ಬಂಡವಾಳ ಹರಿದು ಬರುವಂತೆ ಮಾಡಿದ್ದಾರೆ. ಅದನ್ನು ಸಹಿಸದ ಪ್ರತಿಪಕ್ಷಗಳು ಮೋದಿ ವಿರುದ್ಧ ಸಲ್ಲದ ಹೇಳಿಕೆ ನೀಡುತ್ತಿವೆ’ ಎಂದು ಹೇಳಿದರು.

ಪಕ್ಷದ ಜಿಲ್ಲಾಘಟಕ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರು ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶರಣಗೌಡ ಬಾಡಿಯಾಳ, ವೆಂಕಟರಡ್ಡಿ ಅಬ್ಬೆತುಮಕೂರ, ಪಕ್ಷದ ಮಂಡಲಾ ಅಧ್ಯಕ್ಷ ಚೆನ್ನಾರಡ್ಡಿ ಮದರಕಲ್, ಪರಶುರಾಮ ಕುರಕುಂದಿ, ಶಿವರಾಜಪ್ಪಗೌಡ, ಮಲ್ಲಮ್ಮ ಕೌಳೂರು, ಶಕುಂತಲಾ, ವಿರೂಪಾಕ್ಷಯ್ಯ ಮಠಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.