ADVERTISEMENT

ಕೊಲೆ ಆರೋಪಿಗಳ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 8:25 IST
Last Updated 23 ಮಾರ್ಚ್ 2017, 8:25 IST

ಹುಣಸಗಿ: ‘ಹುಣಸಗಿ ವೃತ್ತ ಪೊಲೀಸ್ ಕಚೇರಿ ವ್ಯಾಪ್ತಿಯ ಸಮೀಪದ ನಗನೂರಿನಲ್ಲಿ ಮಾ. 13 ರಂದು ಕೊಲೆಗೀಡಾಗಿರುವ ಯುವಕನ ಪ್ರಕರಣದ ತನಿಖೆ ಸರಿಯಾಗಿ ನಡೆದಿಲ್ಲ. ಹುಣಸಗಿ ಸಿಪಿಐ ಟಿ.ಆರ್.ಪವಾರ್ ತನಿಖೆಯ ಹಾದಿ ತಪ್ಪಿಸುತ್ತಿದ್ದು, ಬೇರೆ ತನಿಖಾಧಿಕಾರಿಯನ್ನು ನಿಯಮಿಸಬೇಕು’ ಎಂದು ಒತ್ತಾಯಿಸಿ ರುದ್ರಗೌಡ ಸಂಬಂಧಿಗಳು ಬುಧವಾರ  ಹುಣಸಗಿ ಸಿಪಿಐ  ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಸಂಗನಗೌಡ ವಣಿಕ್ಯಾಳ್ ಮಾತನಾಡಿ, ‘ಮಾ.13 ರಂದು ಗ್ರಾಮದ ಯುವಕ ರುದ್ರಗೌಡ  ವಣಿಕ್ಯಾಳ್ನನ್ನು ಕೊಲೆ ಮಾಡಲಾಗಿದೆ.
ಈ ಬಗ್ಗೆ ಕೆಂಭಾವಿ ಪೊಲೀಸ್ ಠಾಣೆಗೆ ಮೂವರ ವಿರುದ್ಧ ದೂರು ನೀಡಿದ್ದರೂ ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ.

ಪ್ರಕರಣದ ತನಿಖಾಧಿಕಾರಿಯಾಗಿರುವ ಹುಣಸಗಿ ಸರ್ಕಲ್ ಇನ್‌ಸ್ಪೆಕ್ಟರ್ ಟಿ.ಆರ್.ಪವಾರ್ ಸರಿಯಾಗಿ ತನಿಖೆ ಮಾಡದೆ, ಪ್ರಕರಣದ ದಾರಿ ತಪ್ಪಿಸಿ ಆರೋಪಿಗಳ ರಕ್ಷಣೆಗೆ ಮುಂದಾಗಿದ್ದಾರೆ’ ಎಂದು ಆರೋಪಿಸಿದರು. 

‘ಈ ಕುರಿತು ಕ್ರಮ ಕೈಗೊಳ್ಳುವಂತೆ ಯಾದಗಿರಿ ಎಸ್.ಪಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ತಕ್ಷಣದಿಂದಲೆ ಈ ಕೊಲೆ ಪ್ರಕರಣದ ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ಆರೋಪಿಗಳಿಗೆ  ಶಿಕ್ಷೆಯಾಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು. ಯಾದಗಿರಿ ಎಸ್.ಪಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.

ಬೇರೊಬ್ಬ ಪೊಲೀಸ್ ಅಧಿಕಾರಿ ಪ್ರಕರಣದ  ತನಿಖೆ ನಡೆಸುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭರವಸೆ ನೀಡಿದ್ದು, ಧರಣಿ ವಾಪಸ್‌ ಪಡೆಯುವುದಾಗಿ ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಆರ್‌.ಪವಾರ್‌, ‘ನ್ಯಾಯ ಸಮ್ಮತವಾದ ಮಾರ್ಗದಲ್ಲಿಯೇ ಪ್ರಕರಣದ ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು. 

ರುದ್ರಗೌಡ  ವಣಿಕ್ಯಾಳ್ ತಂದೆ ಗುತ್ತಣ್ಣ ವಣಿಕ್ಯಾಳ, ತಾಯಿ ಚೆನ್ನಮ್ಮ , ಸಹೋದರರಾದ ಗುರುನಾಥರೆಡ್ಡಿ ವಣಿಕ್ಯಾಳ್, ಶಂಕರ ವಣಿಕ್ಯಾಳ್ ಹಾಗೂ ಸಂಬಂಧಿಕರಾದ ಶಂಕರೆಮ್ಮ ವಣಿಕ್ಯಾಳ್, ಸಂಗನಗೌಡ ವಣಿಕ್ಯಾಳ್, ಬಸವರಾಜ ವಣಿಕ್ಯಾಳ್, ರೇಣುಕಾ, ನೀಲಮ್ಮ,ಶಾರದಾ, ಎಂ.ಭೀಮಬಾಯಿ, ಶಿವರಾಜ್  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.