ADVERTISEMENT

ಖಾಲಿಚೀಲ ಕೊರತೆ: ತೊಗರಿ ಖರೀದಿ ಸ್ಥಗಿತ

ಸರತಿಯಲ್ಲಿ ನಿಂತ ತೊಗರಿ ತುಂಬಿದ ವಾಹನಗಳು, ಇನ್ನೊಂದು ಕೇಂದ್ರಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 7:36 IST
Last Updated 8 ಫೆಬ್ರುವರಿ 2017, 7:36 IST

ಅಫಜಲಪುರ:  ಇಲ್ಲಿನ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮಿನಲ್ಲಿ ಕಳೆದ ತಿಂಗಳು ಆರಂಭಗೊಂಡ ತೊಗರಿ ಖರೀದಿ ಕೇಂದ್ರದಲ್ಲಿ ಖಾಲಿ ಚೀಲಗಳ ಕೊರತೆಯಿಂದಾಗಿ ಕಳೆದ ಒಂದು ವಾರ ದಿಂದ ತೊಗರಿ ಖರೀದಿ ಸ್ಥಗಿತವಾಗಿದೆ. ಹೀಗಾಗಿ ಖರೀದಿ ಕೇಂದ್ರದ ಮುಂದೆ 20ಕ್ಕೂ ಹೆಚ್ಚು ವಾಹನಗಳು ಮಾರಾಟಕ್ಕಾಗಿ ಕಳೆದ ಒಂದು ವಾರದಿಂದ ಸರತಿಯಲ್ಲಿ ನಿಂತಿವೆ.

ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಟಿಎಸ್‌ಆರ್‌ – 3 (ಪಿಂಕ್‌) ತೊಗರಿ ₹ 3,800, ಗೊಳ್ಯಾಳು ಪ್ರತಿ ಕ್ವಿಂಟಲ್‌ಗೆ ₹ 4600 ಮಾರಾಟ ವಾಗುತ್ತಿದೆ. ಬೆಂಬಲ ಬೆಲೆ ಕೊಟ್ಟು ತೊಗರಿ ಖರೀದಿಸಲು ಸರ್ಕಾರ ತೆರೆದಿ ರುವ ಖರೀದಿ ಕೇಂದ್ರದಲ್ಲಿ ಖಾಲಿ ಚೀಲಗಳ ಕೊರತೆಯಿಂದಾಗಿ ಖರೀದಿ ಸ್ಥಗಿತವಾಗಿರುವುದರಿಂದ ರೈತ ಕಂಗಾಲಾಗಿದ್ದಾನೆ.

ಈ ಬಗ್ಗೆ ತೊಗರಿ ಖರೀದಿ ಕೇಂದ್ರದ ವ್ಯವಸ್ಥಾಪಕ ಸಂಗಣ್ಣ ಕಲಶೆಟ್ಟಿ ಅವರನ್ನು ವಿಚಾರಿಸಿದಾಗ, ಖರೀದಿ ಕೇಂದ್ರಕ್ಕೆ 20 ಸಾವಿರ ಖಾಲಿ ಚೀಲಗಳನ್ನು ಜಿಲ್ಲಾಧಿಕಾರಿ ನೀಡಿದ್ದರು. ಅವು ಖಾಲಿಯಾಗಿವೆ ಎಂದರು.

ಮತ್ತೆ 20 ಸಾವಿರ ಖಾಲಿ ಚೀಲ ಗಳನ್ನು ಕೇಳಿದ್ದೇವೆ. ಈವರೆಗೂ ಚೀಲ ನೀಡಿಲ್ಲ. ಇದರಿಂದಾಗಿ ಖರೀದಿ ಕೇಂದ್ರದ ಮುಂದೆ ನಾಲ್ಕೈದು ದಿನ ಗಳಿಂದ 20 – 30 ವಾಹನಗಳು ತೊಗರಿ ಮಾರಾಟಕ್ಕಾಗಿ ಸರತಿ ನಿಂತಿವೆ. ಚೀಲಗಳು ಬಂದ ನಂತರ ಖರೀದಿ ಆರಂಭ ಮಾಡುತ್ತೇವೆ. ಖರೀದಿಸಿದ ತೊಗರಿಗೆ ಹಣ ನೀಡಲು ಹಣದ ಕೊರತೆಯಿಲ್ಲ. ತೊಗರಿ ಮಾರಾಟ ಮಾಡಿದ ರೈತರಿಗೆ ವಾರದಲ್ಲಿ ಅವರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡ ಲಾಗುತ್ತದೆ ಎಂದು ಅವರು ತಿಳಿಸಿದರು.

ನಗರದಲ್ಲಿ ಆರಂಭವಾಗಿರುವ ತೊಗರಿ ಖರೀದಿ ಕೇಂದ್ರಕ್ಕೆ ತಕ್ಷಣ ಜಿಲ್ಲಾಧಿಕಾರಿ ಅವರು 40 ಸಾವಿರ ಚೀಲಗಳನ್ನು ಪೊರೈಕೆ ಮಾಡಬೇಕು. ಅಲ್ಲಿಯೇ ಇನ್ನೊಂದು ಖರೀದಿ ಕೇಂದ್ರ ಆರಂಭಿಸಿ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಬೇಕು ಎಂದು ಮಾಜಿ ಶಾಸಕ ಎಂ.ವೈ.ಪಾಟೀಲ ಒತ್ತಾಯಿಸಿದ್ದಾರೆ.

ರೈತರಿಗೆ ಹಣದ ತೊಂದರೆಯಿದೆ. ಮುಕ್ತ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೆಲೆ ಕುಸಿಯುತ್ತಿದೆ. ತಕ್ಷಣ ಜಿಲ್ಲಾಧಿಕಾರಿ ಇಲ್ಲವೇ ತೊಗರಿ ಮಾರಾಟ ಮಹಾಮಂಡಳಿಯವರು ಕ್ರಮ ಕೈಗೊಳ್ಳಬೇಕು.

ಬಳೂರ್ಗಿ ಗ್ರಾಮದ ರೈತ ಲಕ್ಷಪ್ಪ ಯಳಗೋಳ, ಶಾಮಸುಂದರರಾವ್‌ ಮಠಪತಿ, ತೊಗರಿ ಮಾರಾಟಕ್ಕಾಗಿ ಹೆಸರು ನೋಂದಾಯಿಸಿ ತಿಂಗಳಾದರೂ ಅವರ ಸರತಿ ಬರುತ್ತಿಲ್ಲ. ತೊಗರಿಯನ್ನು ವಾಹನಗಳಲ್ಲಿ ತಂದು ಸರತಿಯಲ್ಲಿ ಹಚ್ಚಬೇಕು ಎಂದು ತೊಗರಿ ಕೇಂದ್ರದ ವ್ಯವಸ್ಥಾಪಕರು ಹೇಳುತ್ತಾರೆ. ಆದರೆ, ದಿನಕ್ಕೆ ಒಂದು ವಾಹನದ ಬಾಡಿಗೆ ₹ 2 ಸಾವಿರ ಇದೆ. ವಾರಗಟ್ಟಲೆ ಸರತಿ ಬರುವುದಿಲ್ಲ.

ಹೀಗಾಗಿ ಕನಿಷ್ಠ  ₹ 20 ಸಾವಿರ ನಷ್ಟವಾಗುತ್ತದೆ. ಹೀಗಾಗಿ ಕೂಡ ಲೇ ಇನ್ನೊಂದು ತೊಗರಿ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಮನವಿ ಮಾಡಿದ್ದಾರೆ. ಸಂಬಂಧಪಟ್ಟವರು ಕೂಡಲೇ ಗಮನಹರಿಸಿ ಹೆಚ್ಚುವರಿ ತೊಗರಿ ಖರೀದಿ ಕೇಂದ್ರ ಆರಂಭಿ ಸಬೇಕು ಮತ್ತು ಬೆಂಬಲ ಬೆಲೆ ಹೆಚ್ಚಿಸ ಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
-ಶಿವಾನಂದ ಹಸರಗುಂಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.