ADVERTISEMENT

ಗೋಹತ್ಯೆ ನಿಷೇಧಕ್ಕೆ ರಕ್ತದಲ್ಲಿ ಪತ್ರ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 6:46 IST
Last Updated 23 ಡಿಸೆಂಬರ್ 2017, 6:46 IST
ಯಾದಗಿರಿ ನಗರದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ  ಅವರನ್ನು ಸ್ವಾಗತಿಸಲಾಯಿತು
ಯಾದಗಿರಿ ನಗರದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ  ಅವರನ್ನು ಸ್ವಾಗತಿಸಲಾಯಿತು   

ಯಾದಗಿರಿ: ‘ಗೋಹತ್ಯೆ ನಿಷೇಧಕ್ಕೆ ರಕ್ತದಿಂದ ಪತ್ರ ಬರೆದು ಪ್ರಧಾನಿ ಮತ್ತು ಮುಖ್ಯಮಂತ್ರಿಗೆ ಹಕ್ಕೊತ್ತಾಯ ಮಂಡಿಸಲಾಗುವುದು’ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ಅಭಯಗೋಯಾತ್ರೆ ಸಂದೇಶ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ‘ಗೋ ಪರಿವಾರದ ಕಾರ್ಯಕರ್ತರು ಮತ್ತು ರಾಮಚಂದ್ರಾಪುರ ಮಠದ ಭಕ್ತರು ರಕ್ತದಿಂದ ಹಕ್ಕೊತ್ತಾಯ ಪತ್ರ ಬರೆದು ಸಮರ್ಪಿಸುವ ಮೂಲಕ ಸಮಾಜಕ್ಕೆ ಮೇಲ್ಪಂಕ್ತಿಯಾಗುವರು’ ಎಂದು ಸ್ವಾಮೀಜಿ ತಿಳಿಸಿದರು.

‘ರಕ್ತದಿಂದ ಪತ್ರ ಬರೆಯುವುದು ಹಿಂಸೆಯಲ್ಲ. ಬೇರೆಯವರ ರಕ್ತ ಅಥವಾ ಗೋಮಾತೆ ರಕ್ತ ಹರಿಸುವುದು ಹಿಂಸೆ. ಆದ್ದರಿಂದ ನಮ್ಮ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ರಕ್ತದಿಂದ ಹಕ್ಕೊತ್ತಾಯ ಪತ್ರ ಬರೆದು ಸಮರ್ಪಿಸುವರು’ ಎಂದು ವಿವರಿಸಿದರು.

ADVERTISEMENT

‘ಗೋವಿನ ಪರವಾದ ಹೋರಾಟ ರಾಜಕೀಯ ಚಳವಳಿಯಲ್ಲ. ಗೋವಿನಿಂದಷ್ಟೇ ದೇಶಕ್ಕೆ ಒಳಿತು ಎನ್ನುವುದು ನಮ್ಮ ಸಿದ್ಧಾಂತ. ಗೋವಿಗಾಗಿ ನಡೆಸುವ ಹೋರಾಟದಲ್ಲಿ ಯಾವ ರಾಜಕೀಯವೂ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

‘ಗೋಹತ್ಯೆ ಎಷ್ಟು ಪಾಪಕರವೋ ಅದನ್ನು ನೋಡುತ್ತಾ ಕೈಕಟ್ಟಿ ಕೂರುವುದು ಕೂಡಾ ಮಹಾಪಾಪ. ದೇಶಕ್ಕೆ ಗೋಹತ್ಯೆಯ ಸೂತಕ ಆವರಿಸಿದೆ. ಪುಣ್ಯಭೂಮಿಯಾದ ಭಾರತದಲ್ಲಿ ಇಂಥ ಕೃತ್ಯ ತಡೆಯುವುದಕ್ಕೆ ರಾಜಕಾರಣಿಗಳಿಂದ ಸಾಧ್ಯವಾಗುತ್ತಿಲ್ಲ’ ಎಂದು ಅವರು ಕಳವಳ ವ್ಯಕ್ತಪಡಿಸಿದರು.

‘ವಿಜ್ಞಾನ ಎಷ್ಟೇ ಮುಂದುವರಿದರೂ ಗೋವಿಗೆ ಪರ್ಯಾಯ ಸೃಷ್ಟಿಸಲು ಸಾಧ್ಯವಿಲ್ಲ. ಗೋಮಾತೆಯನ್ನು ಹಿಂಸಿಸುವುದನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಗೋಹತ್ಯೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಗೋಮಾತೆಯನ್ನು ಪ್ರತಿಮೆಯಾಗಿ ನೋಡಬೇಕಾಗುತ್ತದೆ’ ಎಂದು ಅಭಿಪ್ರಾಯಟ್ಟರು. ಏಕದಂಡಿಗಿಮಠ ವಿಶ್ವಕರ್ಮ ಮಹಾಸಂಸ್ಥಾನದ ಶ್ರೀನಿವಾಸ ಸ್ವಾಮೀಜಿ ಗೋ ಸಂದೇಶ ನೀಡಿದರು.

ಭಾರತೀಯ ಗೋ ಪರಿವಾರ ಕರ್ನಾಟಕದ ಅಧ್ಯಕ್ಷ ಪಾಂಡುರಂಗ ಮಹಾರಾಜ್, ನಗರಸಭೆ ಅಧ್ಯಕ್ಷೆ ಲಲಿತಾ ಅನುಪೂರ, ಮಾಜಿ ಶಾಸಕರಾದ ಡಾ.ವೀರಬಸಂತರೆಡ್ಡಿ ಮುದ್ನಾಳ, ಸೊಪ್ಪೆಬಸವೇಶ್ವರ ಮಠದ ಚನ್ನವೀರ ಸ್ವಾಮೀಜಿ, ಚಟ್ನಳ್ಳಿ ಮಠದ ಈಶ್ವರಾರಾಧ್ಯ ಸ್ವಾಮೀಜಿ ಚನ್ನಾರಡ್ಡಿ ಪಾಟೀಲ ತುನ್ನೂರ, ಅನಿಲ್ ದೇಶಪಾಂಡೆ, ಚೆನ್ನಾರೆಡ್ಡಿ ಬಿಳಾರ, ಮಹದೇವಪ್ಪ ಅಬ್ಬೆತುಮಕೂರು, ಸಿದ್ದಪ್ಪ ಪಾಟೀಲ, ಪ್ರಹ್ಲಾದ್ ಆತ್ಮಕೂರು, ಹನುಮಾನ ಮುಂಡಾಸ್, ಲಾಯಕ್ ಹುಸೇನ್, ಶಹಾಪುರದ ಸುಧೀರ್ ಚಿಂಚೋಳಿ ಮತ್ತಿತರರು ಇದ್ದರು. ಇದಕ್ಕೂ ಮುನ್ನ ಮೈಲಾಪುರ ಬೇಸ್‌ನಿಂದ ಗಾಂಧಿಚೌಕ್‌ವರೆಗೆ ಶೋಭಾಯಾತ್ರೆ ನಡೆಯಿತು.

* * 

ರಕ್ತದಿಂದ ಪತ್ರ ಬರೆಯುವುದು ಹಿಂಸೆಯಲ್ಲ. ಬೇರೆಯವರ ರಕ್ತ ಅಥವಾ ಗೋಮಾತೆ ರಕ್ತ ಹರಿಸುವುದು ಹಿಂಸೆ. ಗೋರಕ್ಷಣೆಗೆ ರಕ್ತದಲ್ಲಿ ಪತ್ರ ಬರೆಯಲಾಗುವುದು
ರಾಘವೇಶ್ವರ ಭಾರತಿಡ ಸ್ವಾಮೀಜಿ ರಾಮಚಂದ್ರಪುರ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.