ADVERTISEMENT

‘ಜನರಿಗೆ ಸ್ವಾತಂತ್ರ್ಯ ಕೊಡದ ಕಾಂಗ್ರೆಸ್’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 9:09 IST
Last Updated 23 ಏಪ್ರಿಲ್ 2017, 9:09 IST

ಯಾದಗಿರಿ: ‘ಗುರುಮಠಕಲ್ ಮತ ಕ್ಷೇತ್ರದ ಜನರಿಗೆ ಕಾಂಗ್ರೆಸ್‌ ಇನ್ನೂ ಸ್ವಾತಂತ್ರ್ಯವನ್ನೇ ಕೊಟ್ಟಿಲ್ಲ’ ಎಂದು ಜೆಡಿಎಸ್ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ಆರೋಪಿಸಿದರು.‘45 ವರ್ಷಗಳಿಂದ ಕ್ಷೇತ್ರವನ್ನು ಆಳಿದ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಉನ್ನತ ಅಧಿಕಾರ ಅನುಭವಿಸಿದರೇ ವಿನಾ ಮತಕ್ಷೇತ್ರ ಅಭಿವೃದ್ಧಿಯನ್ನು ಎಳ್ಳಷ್ಟೂ ಮಾಡಿಲ್ಲ. ರಾಜ್ಯದ ವಿವಿಧೆಡೆ 250ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಖರ್ಗೆ ಮತಕ್ಷೇತ್ರದಲ್ಲಿ ಒಂದೂ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಅವಕಾಶ ನೀಡಿಲ್ಲ. ಮಾತಿನ ಮೋಡಿಯಲ್ಲಿ ಮತ ಕ್ಷೇತ್ರದ ಮುಗ್ಧ ಜನರನ್ನು ಮರಳು ಮಾಡಿ ಅಧಿಕಾರ ಅನುಭವಿಸಿ ಸರ್ಕಾರ ದಿಂದ ಮಂಜೂರಾದ ಅನುದಾನವನ್ನು ಬಳಕೆ ಮಾಡದೆ ಭ್ರಷ್ಟಾಚಾರ ನಡೆಸಿ ದ್ದಾರೆ’ ಎಂದು ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.

‘ಕ್ಷೇತ್ರ ಪುನರ್‌ವಿಂಗಡನೆಯಾದಾಗ ಭ್ರಷ್ಟಾಚಾರ ನಡೆಸಿದವರಿಂದ ಕ್ಷೇತ್ರಕ್ಕೆ ಮುಕ್ತಿ ಸಿಕ್ಕಿತು ಎಂದು ಜನ ನೆಮ್ಮದಿ ಉಸಿರು ಬಿಡುತ್ತಿರುವಾಗಲೇ ಖರ್ಗೆ ತಮ್ಮ ಸ್ಥಾನದಲ್ಲಿ ಮಹಾಭ್ರಷ್ಟ ಬಾಬು ರಾವ್ ಚಿಂಚನಸೂರ್ ಅವರಂತವರನ್ನು ತಂದು ಕೂರಿಸಿದರು. ಹಾಗಾಗಿ, ಗುರು ಮಠಕಲ್‌ ಜನರಿಗೆ ಕಾಂಗ್ರೆಸ್‌ನಿಂದ ಸ್ವಾತಂತ್ರ್ಯ, ಮುಕ್ತಿ ಸಿಗದಂತಾಗಿದೆ’ ಎಂದು ಟೀಕಿಸಿದರು.

‘ಚಿಂಚನಸೂರ್‌ ಶಾಸಕರಾದ ಮೇಲೆ ಮತಕ್ಷೇತ್ರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಒಂದು ಕಾಮಗಾರಿ ನಡೆಸಿ ಐದು ಬಿಲ್‌ ಪಾಸ್‌ ಮಾಡುವಂತಹ ಕೆಲಸ ನಡೆದಿದೆ. ದಾಖಲೆಗಳ ಸಹಿತ ನಾನು ಪ್ರಾದೇಶಿಕ ಆಯುಕ್ತರಿಗೆ, ಮುಖ್ಯಮಂತ್ರಿಗೂ ದೂರು ನೀಡಿದ್ದೇ ನೆ. ಆದರೆ,ಅವರು ಯಾವುದೇ ಕ್ರಮಕೈಗೊಂಡಿಲ್ಲ. ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರು ಮಾಡಿರುವ ಎಲ್ಲಾ ಕಾಮಗಾರಿಗಳನ್ನು ಶಾಸಕ ಬಾಬರಾವ್ ಚಿಂಚನಸೂರ್‌ ಅವರು ಭೂಸೇನಾ ನಿಗಮ, ನಿರ್ಮಿತಿ ಕೇಂದ್ರಕ್ಕೆ ಮಾತ್ರ ನೀಡುತ್ತಾರೆ. ಅಲ್ಲಿ ತಮಗೆ ಬೇಕಾದ ಅಧಿಕಾರಿಗಳು, ಗುತ್ತಿಗೆದಾರರಿಂದ ವಸೂಲಿ ಮಾಡಿ ಕೊಳ್ಳುತ್ತಿದ್ದಾರೆ. ಪೊಲೀಸ್‌ ಇಲಾಖೆ ಅಧಿಕಾರಿಯೊಬ್ಬರು ಶಾಸಕರಿಗೆ ಕಪ್ಪ ಸಲ್ಲಿಸಬೇಕಿರುವ ಬಗ್ಗೆ  ಅಳಲು ತೋಡಿ ಕೊಂಡಿರುವುದು ಶಾಸಕರು ನಡೆಸುತ್ತಿ ರುವ ಭ್ರಷ್ಟಾಚಾರಕ್ಕೆ ಸಾಕ್ಷಿ ಅಲ್ಲವೇ ಎಂದು ಪ್ರಶ್ನಿಸಿದರು.

ADVERTISEMENT

ಗ್ರಾಮವೊಂದರಲ್ಲಿ ಶುದ್ಧ ಕುಡಿವ ನೀರಿನ ಘಟಕ ಅಳವಡಿಸಲು ₹1.20 ಕೋಟಿ ಬಿಲ್‌ ಪಾವತಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳ ಸಹಿತ ಪ್ರಾದೇಶಿಕ ಆಯುಕ್ತ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಸೇರಿದಂತೆ ಸಂಬಂಧಿಸಿದ ಆಯುಕ್ತರಿಗೆ ದೂರು ನೀಡಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಶಾಸಕರ ನಡೆಸುವ ಭಷ್ಟಾಚಾರಕ್ಕೆ ಹಿರಿಯ ಧುರೀಣ ಮಲ್ಲಿಕಾರ್ಜುನ ಖರ್ಗೆ ರಾಜಕೀಯ ಕೋಟೆಯಂತಿದ್ದಾರೆ. ಚಿಂಚನಸೂರ್ ಅವರ ಮೇಲೆ ಕ್ರಮಜರುಗಿಸಿದರೆ ಚಿತ್ತಾಪುರ ಕ್ಷೇತ್ರದಲ್ಲಿ ತಮ್ಮ ಮಗ ಪ್ರಿಯಾಂಕ್‌ಖರ್ಗೆ ರಾಜಕೀಯ ಭವಿಷ್ಯಕ್ಕೆ ಕುತ್ತು ಬಂದೀತು ಎಂಬುದು ಖರ್ಗೆ ಅವರ ಭೀತಿಗೆ ಕಾರಣವಾಗಿದೆ’ ಎಂದರು.

‘27 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದರೂ, ಶಾಸಕರು ಅಧಿಕಾರಿಗಳ ಸಭೆ ನಡೆಸಿಲ್ಲ. ನಿಜವಾದ ಬಡವರಿಗೆ ಸರ್ಕಾರಿ ಸೌಲಭ್ಯ ದೊರಕಿಸಿ ಕೊಟ್ಟಿಲ್ಲ. ಬಡ ಮತ್ತು ಸಣ್ಣ ರೈತರಿಗೆ ಗಂಗಾಕಲ್ಯಾಣ ಯೋಜನೆ ಮರೀಚಿಕೆ ಯಾಗಿದೆ ಎಂದು ಅವರು, ‘ಕಡೆಚೂರು, ಬಾಡಿಯಾಳದಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸಿದ್ದೇನೆ ಎಂದು ಹೇಳುವ ಅವರು ಎಷ್ಟು ಜನ ಯುವಕರಿಗೆ ಉದ್ಯೋಗ ಕಲ್ಪಿಸಿದ್ದಾರೆ ತೋರಿಸಲಿ’ ಎಂದು ಸವಾಲು ಹಾಕಿದರು.

‘ಕಾಂಗ್ರೆಸ್‌ನ ದುರಾಡಳಿತ, ಭ್ರಷ್ಟಾಚಾರಕ್ಕೆ ಬೇಸತ್ತಿರುವ ಜನರು ಹೊಸ ನಾಯಕರನ್ನು ಎದುರು ನೋಡು ತ್ತಿದ್ದಾರೆ. ಬದಲಾವಣೆ ಬಯಸಿರುವ ಮತಕ್ಷೇತ್ರದ ಜನರಿಗೆ ಬೆಂಬಲಿಸಲಿ ಕ್ಕಾಗಿಯೇ ಜೆಡಿಎಸ್‌ ಯುವ ಘಟಕ ಸನ್ನದ್ಧವಾಗಿದ್ದು, ಕ್ಷೇತ್ರದ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಿ ಜನರ ಸಂಕಷ್ಟ ಆಲಿಸಲಿದೆ’ ಎಂದರು.ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ತಾಲ್ಲೂಕು ಘಟಕದ ಅಧ್ಯಕ್ಷ ವಿಶ್ವಾನಾಥ ಸಿರವರ, ಸುಭಾಶ್ಚಂದ್ರ ಹೊನಗೇರಾ, ನರಸಪ್ಪ ಕವಡೆ, ನಾಗೇಶ್ ಚಂಡರಿಕಿ, ಮಲ್ಲಿ ಕಾರ್ಜುನ ಅರುಣಿ, ಈಸ್ವರ್ ನಾಯಕ್, ವಿಶ್ವನಾಥ್ ರ್‍ಯಾಕ, ರಾಮಣ್ಣ ಕೋಟ ಗೇರಾ, ಸಣ್ಣಪ್ಪ ಕೋಟಗೇರಾ ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.