ADVERTISEMENT

ಜಾನಪದ ಕಲಾವಿದರ ಸಮೀಕ್ಷೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜುಲೈ 2017, 10:04 IST
Last Updated 10 ಜುಲೈ 2017, 10:04 IST

ಹುಣಸಗಿ:  ‘ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಜನಪದ ಸಾಹಿತ್ಯ ಜೀವಂತವಾಗಿದೆ. ಇದನ್ನು ಹೊರಜಗತ್ತಿಗೆ ಪರಿಚಯಿಸುವ  ಅಗತ್ಯ ಇದೆ’ ಎಂದು ಜಾನಪದ ಸಾಹಿತ್ಯ ಪರಿಷತ್‌ ರಾಜ್ಯ ಕಾರ್ಯದರ್ಶಿ ಎಸ್.ಬಾಲಾಜಿ ಹೇಳಿದರು.

ಹುಣಸಗಿ ಸಮೀಪದ ಕೊಡೇಕಲ್ಲ ಗ್ರಾಮದ  ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಾಹಿತ್ಯ ಪರಿಷತ್‌ ವಲಯ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಅನೇಕ ತಲೆಮಾರುಗಳಿಂದ ಬಾಯಿಯಿಂದ ಬಾಯಿಗೆ ಹೇಳುವ ಮೂಲಕ ರಕ್ಷಿಸಿಕೊಂಡು ಬಂದಿರುವ ಜನಪದ ಸಾಹಿತ್ಯವನ್ನು ಬರವಣಿಗೆ ರೂಪಕ್ಕೆ ಇಳಿಸುವ ಕಾರ್ಯಕ್ಕೆ ಮುಂದಾಗಲಿ. ಅಲ್ಲದೇ ಈ ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವ ಜಾನಪದ ಕಲಾವಿದರ ಸಮೀಕ್ಷೆ ನಡೆಸಲಿ’ ಎಂದು ಅಭಿಪ್ರಾಯಪಟ್ಟರು. 

‘ಗ್ರಾಮೀಣ ಪ್ರದೇಶದಲ್ಲಿರುವ ಅನೇಕ ಜಾನಪದ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತಮ್ಮ ಮೂಲ ಕಲೆಗಳನ್ನು ಬಿಟ್ಟು ಬೇರೆ ಉದ್ಯೋಗಗಳತ್ತ ಮುಖ  ಮಾಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.  ಸರ್ಕಾರ ಕೂಡಲೇ ಕಲಾವಿದರ ಸಮೀಕ್ಷೆ ನಡೆಸಿ ಅವರಿಗೆ ಸೂಕ್ತ ಸಾಮಾಜಿಕ ಭದ್ರತೆ, ಆರ್ಥಿಕ ನೆರೆವು ನೀಡುವಂತೆ’ ಆಗ್ರಹಿಸಿದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ  ದುರುದುಂಡೇಶ್ವರ ವಿರಕ್ತಮಠದ ಶಿವಕುಮಾರ ದೇವರು ಮಾತನಾಡಿ, ‘ಪರಂಪರೆ ಹಂತಿಯ ಪದ, ಕುಟ್ಟುವ, ಬೀಸುವ ಹಾಡುಗಳು ಜತೆಗೆ ಸೋಬಾನ, ಜೋಗುಳ ಪದಗಳು ಇಂದು ಮರೆಯಾಗುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಗ್ರಾಮದ ಹಿರಿಯರಾದ ತಿಮ್ಮಮ್ಮ ಶಂಭನಗೌಡ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು.  ಜಾನಪದ ಸಾಹಿತ್ಯ ಪರಿಷತ್ ಯಾದಗಿರಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್ ಅಂಗಡಿ ಕನ್ನಳ್ಳಿ, ಜನಪದ ಸಾಹಿತ್ಯ ಕಾರ್ಯಚಟುವಟಿಕೆಗಳು ಹಾಗೂ ಮುಂದಿನ ಯೋಜನೆಗಳ ಕುರಿತು ಮಾತನಾಡಿದರು. ಪ್ರಭುಸ್ವಾಮಿ ಮಹಲಿನ ಮಠ  ಸಾನ್ನಿಧ್ಯ ವಹಿಸಿದ್ದರು. ವಸತಿ ಶಾಲೆಯ ಶಶಿಕಲಾ ಮಾಲಿಪಾಟೀಲ್  ಅಧ್ಯಕ್ಷತೆ ವಹಿಸಿದ್ದರು.

ತಾಲ್ಲೂಕು ಅಧ್ಯಕ್ಷ ಶಿವಶರಣಪ್ಪ ಶಿರೂರು,  ವಲಯ ಅಧ್ಯಕ್ಷ ಬಸವರಾಜ ಭದ್ರಗೋಳ, ಸಂಗನಬಸಯ್ಯ ಭದ್ರಗೋಳ, ಕಸಾಪ ಅಧ್ಯಕ್ಷ ಬಸಣ್ಣ ಗೋಡ್ರಿ, ವೀರೇಶ ಮುತ್ತಗಿ, ಬಸವರಾಜ ಅಂಗಡಿ, ಚಂದ್ರಶೇಖರ ಹೊಕ್ರಾಣಿ,  ಬಸವರಾಜ ಜೀರಾಳ, ರಮೇಶ ಬಿರಾದಾರ, ಆರ್.ಡಿ.ಬಿರಾದಾರ, ವಿಶಾಲ್ ಅಂಗಡಿ, ರಮೇಶ ಪೂಜಾರಿ, ಸಂಗಮೇಶ ಮಾಸ್ಟರ್, ರೋಹಿತ್ ಪಾಟೀಲ್, ಶಿವು ಕುಂಬಾರ, ಹನುಮೇಶ ಗಿಡನೂರು ಇದ್ದರು. ಅಮರಯ್ಯಸ್ವಾಮಿ ಹಿರೇಮಠ  ಸ್ವಾಗತಿಸಿದರು.  ಗುರುರಾಜ ಜೋಷಿ ನಿರೂಪಿಸಿದರು. ಶರಣು ನಾಶಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.