ADVERTISEMENT

‘ಜಿಲ್ಲೆಯಲ್ಲಿ 5,169 ಬೈಸಿಕಲ್‌ ವಿತರಣೆ ಶೀಘ್ರ’

​ಪ್ರಜಾವಾಣಿ ವಾರ್ತೆ
Published 7 ಜುಲೈ 2017, 6:56 IST
Last Updated 7 ಜುಲೈ 2017, 6:56 IST

ಯಾದಗಿರಿ: ಜಿಲ್ಲೆಯಲ್ಲಿನ ಎಲ್ಲಾ ಪ್ರೌಢಶಾಲೆಗಳ ಅರ್ಹ ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿಯೇ 15,169 ಬೈಸಿಕಲ್‌ ಶೀಘ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್.ಕೆಂಚೇಗೌಡ ತಿಳಿಸಿದರು.

ನಗರದ ಕೋಲಿವಾಡ ಪ್ರೌಢಶಾಲೆ ಅಂಗಳದಲ್ಲಿ ಬೈಸಿಕಲ್‌ ಜೋಡಣಾ ಕಾರ್ಯ ಪ್ರಗತಿಯಲ್ಲಿದ್ದು, ಇದುವರೆಗೂ ಜಿಲ್ಲೆಯಲ್ಲಿ 2,313 ಬೈಸಿಕಲ್‌ಗಳನ್ನು ವಿತರಿಸಲಾಗಿದೆ. ಸುರಪುರ ತಾಲ್ಲೂಕಿನಲ್ಲಿ ಒಟ್ಟು 2,180, ಶಹಾಪುರದಲ್ಲಿ 123, ಯಾದಗಿರಿ ತಾಲ್ಲೂಕಿನಲ್ಲಿ ಕೇವಲ10 ಬೈಸಿಕಲ್‌ ವಿತರಿಸಲಾಗಿದೆ ಎಂದು  ಗುರುವಾರ ‘ಪ್ರಜಾವಾಣಿ’ಗೆ ಅವರು ಮಾಹಿತಿ ನೀಡಿದರು.

ಶಹಾಪುರ ತಾಲ್ಲೂಕಿನಲ್ಲಿ 4,450, ಸುರಪುರ ತಾಲ್ಲೂಕಿನಲ್ಲಿ 5,636 ಹಾಗೂ ಯಾದಗಿರಿ ತಾಲ್ಲೂಕಿನಲ್ಲಿ 5,083 ಸೇರಿದಂತೆ ಒಟ್ಟು 15,169 ಬೈಸಿಕಲ್‌ ಗಳಿಗಾಗಿ ಬೇಡಿಕೆ ಬಂದಿತ್ತು. ಬೇಡಿಕೆಗೆ ಅನುಗುಣವಾಗಿ ಈಗ 15,169 ಬೈಸಿಕಲ್‌ಗಳು ಬಂದಿವೆ. ಸದ್ಯ ಶಹಾಪುರ ತಾಲ್ಲೂಕಿಗೆ 1,700, ಸುರಪುರ ತಾಲ್ಲೂಕಿಗೆ 4,000 ಮತ್ತು ಯಾದಗಿರಿ ತಾಲ್ಲೂಕಿಗೆ 2,500 ಬೈಸಿಕಲ್‌ಗಳ ಜೋಡಣಾ ಕಾರ್ಯ ಮುಗಿದಿದೆ’ ಎಂದು ಕೆಂಚೇಗೌಡ ವಿವರಿಸಿದರು.

ಜಿಲ್ಲೆಯಲ್ಲಿ  218 ಪ್ರೌಢಶಾಲೆಗಳಿವೆ. ಅವುಗಳಲ್ಲಿ 21,654 ವಿದ್ಯಾರ್ಥಿಗಳು ಹಾಗೂ 16,266 ವಿದ್ಯಾರ್ಥಿನಿಯರು ಸೇರಿ ಒಟ್ಟು 37, 920 ವಿದ್ಯಾರ್ಥಿಗಳು ಇದ್ದಾರೆ. ಅವರಲ್ಲಿ 15,169 ವಿದ್ಯಾರ್ಥಿ ಗಳು ಬೈಸಿಕಲ್‌ ಫಲಾನುಭವಿಗಳಿದ್ದಾರೆ ಎಂದು ತಿಳಿಸಿದರು.

ADVERTISEMENT

ಹೆಚ್ಚಿದ ಸಾಕ್ಷರತಾ ಪ್ರಮಾಣ: ಬೈಸಿಕಲ್‌ ವಿತರಣೆ ಯೋಜನೆ ಜಾರಿಗೊಂಡ ಮೇಲೆ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣ ಸ್ವಲ್ಪ ಮಟ್ಟಿಗೆ ಏರಿಕೆ ಕಂಡಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿನ ಮಕ್ಕಳ ವಿದ್ಯಾ ರ್ಥಿನಿಯರ ಶೈಕ್ಷಣಿಕಮಟ್ಟ ವೃದ್ಧಿಸಿದೆ. 2011 ಜಗಣಗತಿ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಶಹಾಪುರದಲ್ಲಿ ಶೇ 46.51ರಷ್ಟು ಇದ್ದ ಸಾಕ್ಷರತಾ ಪ್ರಮಾಣ ಈಗ ಶೇ 51.50ರಷ್ಟು ಹೆಚ್ಚಿದೆ. ಅದೇ ರೀತಿಯಲ್ಲಿ ಸುರಪುರದಲ್ಲಿ 52.64 ಇದ್ದದ್ದು 54.82 ಹಾಗೂ ಯಾದಗಿರಿ ಯಲ್ಲಿ ಶೇ 40.82ರಷ್ಟು ಇದ್ದ ಸಾಕ್ಷರತಾ ಮಟ್ಟದ ಶೇ 49.02ರಷ್ಟು ವೃದ್ಧಿಸಿದೆ ಎಂದು ಡಿಡಿಪಿಐ ಕೆಂಚೇಗೌಡ ಮಾಹಿತಿ ನೀಡಿದರು.

ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚಳ: ಬೈಸಿಕಲ್‌ ವಿತರಣೆ ಆರಂಭಿಸಿದ ಮೇಲೆ ಗಡಿಭಾಗದ ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿ ನಿಯರ ದಾಖಲಾತಿ ಕೂಡ ಹೆಚ್ಚಿದೆ. ಬಹುಮುಖ್ಯವಾಗಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ಸಂಖ್ಯೆ ವೃದ್ಧಿಸಿದೆ. ಶಿಕ್ಷಣ ವಂಚಿತರಾಗುತ್ತಿದ್ದ ಪರಿಶಿಷ್ಟರ ಕುಟುಂಬದ ಹೆಣ್ಣು ಮಕ್ಕಳು ಬೈಸಿಕಲ್‌ ಸೌಲಭ್ಯಕ್ಕಾಗಿಯಾದರೂ ಪ್ರೌಢಶಾಲೆಗೆ ದಾಖಲಾಗುತ್ತಿದ್ದಾರೆ.

  ಪಾಲಕರು ಗುಳೆ ಹೋದರೂ ಬಹಳಷ್ಟು ಬಡ ಹೆಣ್ಣು ಮಕ್ಕಳು ಬೈಸಿಕಲ್‌ ಹತ್ತಿಕೊಂಡು ಹಳ್ಳಿ ಯಿಂದ ಶಾಲೆಗೆ ಬರುತ್ತಾರೆ. ಮಧ್ಯಾಹ್ನದ ಬಿಸಿಯೂಟ ಇಂತಹ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಆಗಿದೆ. ಬಿಸಿಯೂಟ ಇಲ್ಲದಿದ್ದರೆ ಬೈಸಿಕಲ್‌ ಯೋಜನೆ ಕೂಡ ವಿದ್ಯಾರ್ಥಿನಿಯರ ದಾಖಲಾತಿ ಹೆಚ್ಚಿಸು ವಲ್ಲಿ ವಿಫಲವಾಗುತ್ತಿತ್ತು ಎಂಬುದಾಗಿ ಹೆಸರು ಹೇಳಲಿಚ್ಛಿಸದ ಪುಟಪಾಕ ಪ್ರೌಢಶಾಲೆಯ ಶಿಕ್ಷಕರೊಬ್ಬರು ಹೇಳುತ್ತಾರೆ.

* * 

ಸಮವಸ್ತ್ರ, ಬೈಸಿಕಲ್‌ ಹೀಗೆ ಸರ್ಕಾರ ಶೈಕ್ಷಣಿಕ ಯೋಜನೆಗಳು  ಜಾರಿಗೊಳಿಸಿದ್ದರಿಂದ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರ ಶೈಕ್ಷಣಿಕ ಮಟ್ಟ ಹೆಚ್ಚಲು ಕಾರಣವಾಗಿದೆ.
ರುದ್ರಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.