ADVERTISEMENT

ನೆಮ್ಮದಿ ಕಿತ್ತುಕೊಂಡ ಕಾರ್ಖಾನೆ: ಆರೋಪ

ಶಹಾಪುರ ತಾಲ್ಲೂಕಿನ ತುಮಕೂರ ಗ್ರಾಮದ ಜನರ ಬವಣೆ ಕೇಳುವವರಿಲ್ಲ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 9:53 IST
Last Updated 14 ಫೆಬ್ರುವರಿ 2017, 9:53 IST
ಶಹಾಪುರ ತಾಲ್ಲೂಕಿನ ತುಮಕೂರ ಗ್ರಾಮದಲ್ಲಿ  ಜಲ ನಿರ್ಮಲ ಯೋಜನೆ ಅಡಿ ನಿರ್ಮಿಸಿರುವ ಕುಡಿಯುವ ನೀರಿನ ಘಟಕ
ಶಹಾಪುರ ತಾಲ್ಲೂಕಿನ ತುಮಕೂರ ಗ್ರಾಮದಲ್ಲಿ ಜಲ ನಿರ್ಮಲ ಯೋಜನೆ ಅಡಿ ನಿರ್ಮಿಸಿರುವ ಕುಡಿಯುವ ನೀರಿನ ಘಟಕ   
ಶಹಾಪುರ: ಕೋರ್‌ ಗ್ರೀನ್‌ ಸಕ್ಕರೆ ಕಾರ್ಖಾನೆ ಹೊರಬಿಡುವ ತ್ಯಾಜ್ಯದಿಂದ ಬರುವ ಕೆಟ್ಟ ವಾಸನೆ ಶಹಾಪುರ  ತಾಲ್ಲೂಕಿನ ತುಮಕೂರ  ಗ್ರಾಮದ ಜನ ತೆಯ ನೆಮ್ಮದಿಯನ್ನು ಕಸಿದು ಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.
 
ಅಲ್ಲದೆ, ಕಾರ್ಖಾನೆಯ ತ್ಯಾಜ್ಯವನ್ನು ನೇರವಾಗಿ ಕೃಷ್ಣಾ ನದಿಗೆ ಬಿಡ ಲಾಗುತ್ತಿದೆ. ಇದು ಕೃಷ್ಣಾ ನದಿಯ ನೀರು ಕುಡಿಯುವ ನದಿ ಪಾತ್ರದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರು ವ ಭೀತಿ ಎದುರಾಗಿದೆ. ಬೇಸಿಗೆಯಲ್ಲಿ ನದಿಯ ನೀರಿನ ಹರಿವು ಕಡಿಮೆಯಾಗುತ್ತದೆ. ಕಾರ್ಖಾ ನೆಯ ತ್ಯಾಜ್ಯ ನೀರನ್ನು ಸಂಸ್ಕರಿಸದೆ ನೇರವಾಗಿ ನದಿಗೆ ಬಿಡುವುದರಿಂದ ನೀರಿನಲ್ಲಿರುವ ಜಲಚರಗಳು ನಾಶವಾಗಲಿವೆ.  
 
ಈ ಬಗ್ಗೆ ಯಾವುದೇ ಸಂಘಟನೆಗಳು ಧ್ವನಿ ಎತ್ತುತ್ತಿಲ್ಲ ಮತ್ತು ಇದನ್ನು ತಡೆಯಲು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬು ವುದು ಗ್ರಾಮದ ನಿವಾಸಿಗಳ ದೂರಾಗಿದೆ. ಗ್ರಾಮವು ತಾಲ್ಲೂಕಿನಿಂದ 35 ಕಿ.ಮೀ ದೂರವಿದ್ದು, ಸುಮಾರು 3000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. 1 ರಿಂದ10ನೇ ತರ ಗತಿಯವರೆಗೆ ಶಾಲೆಯಿದೆ. ಶಿಕ್ಷಕರ ಕೊರ ತೆಯಿಲ್ಲ. ಶಾಲೆಯಲ್ಲಿ ಇನ್ನೂ ಅಭಿವೃದ್ಧಿ ಕೆಲಸಗಳಾಗಬೇಕು ಎನ್ನುತ್ತಾರೆ ಪಾಲಕರು.
 
ಕುಡಿಯುವ ನೀರು ಗ್ರಾಮದ ಬಹುದೊಡ್ಡ ಸಮಸ್ಯೆಯಾಗಿದೆ. ಸರ್ಕಾರ ವಿಶ್ವ ಬ್ಯಾಂಕ್ ಅನುದಾನದಲ್ಲಿ ಜಲ ನಿರ್ಮಲ ಯೋಜನೆ ಅಡಿ ಕುಡಿಯುವ ನೀರಿನ ಯೋಜನೆ ಜಾರಿಗೆ ತಂದು ಕೃಷ್ಣಾ ನದಿಯಿಂದ ಪೈಪ್‌ಲೈನ ಮೂಲಕ  ನೀರು ಸರಬರಾಜು ಮಾಡುವ ಕಾರ್ಯವನ್ನು ಎರಡು ವರ್ಷದ ಹಿಂದೆ ಕೈಗೆತ್ತಿಕೊಂಡಿತು. ಅದರ ಜತೆಗೆ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿತು. ಆದರೆ ಹನಿ ನೀರು ಗ್ರಾಮಕ್ಕೆ ಹರಿದು ಬಂದಿಲ್ಲ. ಮತ್ತೆ ಬೇಸಿಗೆ ಸಮೀಪಿಸುತ್ತಿದ್ದು, ನೀರಿನ ಸಮಸ್ಯೆ ಮಾತ್ರ ನಿವಾರಣೆಯಾಗಿಲ್ಲ ಎಂದು ಗ್ರಾಮದ ನಿವಾಸಿಗಳು ದೂರಿದರು.
 
ಗುಡಿಸಲು ರಹಿತ  ಮನೆ ನಿರ್ಮಾಣದ ಕೆಲಸಕ್ಕೆ ಸರ್ಕಾರ ಎಳ್ಳು ನೀರು ಬಿಟ್ಟಿದೆ. ವಿವಿಧ ಯೋಜನೆ ಅಡಿಯಲ್ಲಿ ಸಾಕಷ್ಟು ನಿವೇಶನಗಳು ಗ್ರಾಮ ಪಂಚಾಯಿತಿ ಮೂಲಕ ಮಂಜೂರಾಗುತ್ತಿವೆ. ಆದರೆ, ಅವು ಉಳ್ಳವರ ಪಾಲಾಗುತ್ತಿವೆ. ಗ್ರಾಮದ ಪ್ರಭಾವಿ ವ್ಯಕ್ತಿಗಳು ಇಲ್ಲವೆ ಸದಸ್ಯರ ಸಂಬಂಧಿಕರಿಗೆ ಮನೆ ಹಂಚಿಕೆ ಮಾಡಲಾಗುತ್ತಿದೆ. ಸೂರು ವಂಚಿತ ಬಡವರಿಗೆ ಮನೆ ಕನಸಾಗಿ ಉಳಿದಿದೆ. ಗ್ರಾಮಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ಕೆಲ ಸದಸ್ಯರು ಹಣ ಪಡೆದುಕೊಂಡಿದ್ದಾರೆ. ಇಂದಿಗೂ ಮನೆ ಬಂದಿಲ ಎನ್ನುತ್ತಾರೆ ಸೂರು ವಂಚಿತ ಕುಟುಂಬದ ಸದಸ್ಯೆ ಬಸಮ್ಮ.
 
ಗ್ರಾಮದಲ್ಲಿ ಮಹಿಳಾ ಶೌಚಾಲಯ ಇಲ್ಲ. ಹೀಗಾಗಿ ಮಹಿಳೆಯರು ಶೌಚಕ್ಕೆ ಹೋಗಲು ಕತ್ತಲಾಗುವುದನ್ನು ಕಾಯಬೇಕು. ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸ್ವಂತ ಜಾಗ ಇಲ್ಲ. ಅದಕ್ಕಿಂತ ಹೆಚ್ಚಾಗಿ ನೀರಿನ ಸಮಸ್ಯೆ ಇದೆ. ಈ ಸಮಸ್ಯೆಗಳಿಂದ ಗ್ರಾಮದ ಜನರು ಹೈರಾಣಾಗಿದ್ದಾರೆ ಎಂದು ಗ್ರಾಮದ ಜನರು  ಅಳಲು ತೋಡಿ ಕೊಂಡರು.
ಗ್ರಾಮದಲ್ಲಿ ಒಳಚರಂಡಿ, ಸಿ.ಸಿ ರಸ್ತೆ ನಿರ್ಮಿಸಿಲ್ಲ. ಯಾವುದೇ ಮೂಲ ಸೌಕರ್ಯ ಕಲ್ಪಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಅಗತ್ಯ ಸೌಲಭ್ಯ ಒದಗಿಸಬೇಕು ಎಂಬುವುದು ಗ್ರಾಮಸ್ಥರ ಮನವಿಯಾಗಿದೆ.
- ಟಿ.ನಾಗೇಂದ್ರ.
 
* ಸಕ್ಕರೆ ಕಾರ್ಖಾನೆಯ ತ್ಯಾಜ್ಯವನ್ನು ನೇರವಾಗಿ ಕೃಷ್ಣಾ ನದಿಗೆ ಬಿಡಲಾಗುತ್ತಿದೆ.  ಇದರಿಂದ ಸುತ್ತಲಿನ ಗ್ರಾಮಗಳ ಜನರ ಆರೋಗ್ಯ ಹಾಳಾಗುತ್ತಿದೆ
ಬಿ.ಎಚ್.ಶರಣುರಡ್ಡಿ, ರೈತ ಮುಖಂಡ ಶಹಾಪುರ
 
* ಗುಡಿಸಲು ಮುಕ್ತ ಗ್ರಾಮ ಎಂಬುದು ಬರೀ ಘೋಷಣೆಯಾಗಿದೆ. ಬಡ ನಿರ್ಗತಿಕ ಮಹಿಳೆಯರಿಗೆ ಸೂರಿಲ್ಲ. ಮನೆಗಳು ಉಳ್ಳವರ ಪಾಲು ಆಗಿವೆ
ಕವಿತಾ, ಗ್ರಾಮದ ನಿವಾಸಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.