ADVERTISEMENT

ನೋಟು ರದ್ದತಿ: ಸುಧಾರಿಸದ ರೈತರ ಗೋಳಾಟ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:18 IST
Last Updated 19 ಜನವರಿ 2017, 5:18 IST

ಕಕ್ಕೇರಾ: ನೋಟು ರದ್ದು ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ರೈತರ ಗೋಳಾಟ ಸುಧಾರಿಸಿಲ್ಲ. ಬ್ಯಾಂಕ್‌ನ ಉಳಿತಾಯ ಖಾತೆಯಲ್ಲಿ ಜಮಾ ಇದ್ದ ಹಣ ಪಡೆಯಲೂ ಪರದಾಡುವಂತಾಗಿದೆ ಎಂದು ಪಟ್ಟಣದ ಎಸ್‌ಬಿಐ ಬ್ಯಾಂಕ್‌ನಲ್ಲಿ ಮಂಗಳವಾರ ಹಣ ಪಡೆಯಲು ಸರತಿಯಲ್ಲಿ ನಿಂತಿದ್ದ ಹಲವು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕ್‌ನಲ್ಲಿ ಎರಡು ಸಾವಿರ ಮುಖಬೆಲೆಯ ನೋಟುಗಳನ್ನು ಮಾತ್ರ ವಿತರಿಸಲಾಗುತ್ತಿದೆ. ಅವೂ ಕೂಡ ರೈತರ ಕೈಗೆ ಸಮರ್ಪಕವಾಗಿ ಸಿಗುತ್ತಿಲ್ಲ. ವಾರದಲ್ಲಿ ಕೇವಲ ₹24 ಸಾವಿರ ಮಾತ್ರ ಪಡೆಯಬೇಕು. ಕೃಷಿ ವ್ಯವಸಾಯಕ್ಕೆ ಪಡೆದ ಖಾಸಗಿ ಸಾಲ ತೀರಿಸಲಾಗದೆ ರೈತನ ಜೀವನಕ್ಕೆ ಬರೆ ಬಿದ್ದಂತಾಗಿದೆ. ಭತ್ತ ಸೇರಿದಂತೆ ಇನ್ನಿತರ ಧಾನ್ಯಗಳ ಮಾರಾಟ ಮಾಡಿದ ಹಣ ರೈತರ ಖಾತೆಗೆ ಜಮಾ ಮಾಡಲಾಗುತ್ತಿದೆ.

ಖಾತೆಯಲ್ಲಿನ ಹಣ ಪಡೆಯಲೂ ಹರಸಾಹಸ ಮಾಡ ಬೇಕಾಗಿದೆ. ಕಾರಣ ಈ ನಿಯಮವನ್ನು ಬದಲಾವಣೆ ಮಾಡಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಯಮ ರೂಪಿಸಬೇಕು ಎಂದು ರೈತರು ಆಗ್ರಹಿಸಿದರು.ಐಷರಾಮಿಗಳಿಗೆ ನೋಟು ರದ್ಧತಿಯಿಂದ ಯಾವುದೇ ತೊಂದರೆಯಾಗಿಲ್ಲ. ಬಡ ರೈತರು ಮಾತ್ರ ತೀರ ಕಷ್ಟ ಅನುಭವಿಸುತ್ತಿದ್ದಾರೆ. ಕೃಷಿಗಾಗಿ ಪಡೆದ ಸಾಲದ ಬಡ್ಡಿ ತೀರಿಸಲಾಗದೆ ಅನ್ನದಾತ ಜೀವ ಒತ್ತೆ ಇಡುವಂಥ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.

ಹಿಂಗಾರು ಕೃಷಿಗೆ ಹೊಡೆತ: ನೋಟು ಅಮಾನ್ಯದಿಂದಾಗಿ ಸರಿಯಾದ ಸಮಯಕ್ಕೆ ರೈತರ ಕೈಗೆ ಸಮರ್ಪಕ ಹಣದ ಕೊರತೆ ಎದುರಾಗಿ ಹಿಂಗಾರು ವ್ಯವ ಸಾಯಕ್ಕೂ ಹೊಡೆತ ಬಿದ್ದಿದೆ. ಸ್ವಂತ ದುಡಿಮೆ ಹಣ ಪಡೆಯಲು ಬ್ಯಾಂಕ್‌ನಲ್ಲಿ ತಾಸುಗಟ್ಟಲೆ ನಿಂತರೂ ಬೀಕ್ಷೆ ಪಡೆದಂತೆ ಹಣ ತೆಗೆದುಕೊಂಡು ಹೋಗ ಬೇಕಾಗಿದೆ.

ಅಲ್ಲದೆ, ಬ್ಯಾಂಕ್‌ನಲ್ಲಿ ಕೆಲ ವರಿಗೆ ಹಣ ನೀಡಿ, ಮತ್ತೆ ಕೆಲವರಿಗೆ ಹಣ ಖಾಲಿಯಾಗಿದೆ ಎಂದು ನೆಪ ಹೇಳುವ ಮೂಲಕ ಸಿಬ್ಬಂದಿ ಸತಾಯಿಸುತ್ತಿದ್ದಾರೆ. ಸರಿಯಾದ ಮಾಹಿತಿ ನೀಡುವುದಿಲ್ಲ. ಮೇಲಧಿಕಾರಿಗಳು ಕ್ರಮ ಕೈಗೊಂಡು ರೈತರು ಅನುಭವಿಸುವ ತೊಂದರೆಯನ್ನು ನೀಗಿಸಬೇಕು ಎಂದು ರೈತ ಮುಖಂಡರಾದ ಡಿ.ಆರ್.ಬಸವರಾಜ, ಮುದ್ದಣ್ಣ ಅಮ್ಮಾಪುರ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.