ADVERTISEMENT

ನೌಕರಿ ಕಾಯಂಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 5:27 IST
Last Updated 17 ಜುಲೈ 2017, 5:27 IST

ಯಾದಗಿರಿ: ‘ತಮಿಳುನಾಡು ಮಾದರಿ ಯಲ್ಲಿ ರಾಜ್ಯದ ಬಿಸಿಯೂಟ ನೌಕರರಿಗೆ ವೇತನ ನಿಗಪಡಿಸಬೇಕು’ ಎಂದು ಎಐಟಿಯುಸಿ ರಾಜ್ಯ ಸಮಿತಿ ಸದಸ್ಯ ಅವರಗೆರೆ ಚಂದ್ರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ನಗರದ ಚರ್ಚ್‌ಹಾಲ್‌ನಲ್ಲಿ ಭಾನು ವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಬಿಸಿಯೂಟ ತಯಾರಕರ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

‘10 ವರ್ಷಗಳಿಂದ ಮನವಿ ಸಲ್ಲಿಸಿ ಸಾಂಕೇತಿಕವಾಗಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ತಮಿಳುನಾಡು ಮಾದರಿಯಲ್ಲಿ ವೇತನ ಜಾರಿ ಆಗುವುದರಿಂದ ₹5 ಸಾವಿರ ಸಂಬಳದ ಜತೆಗೆ ಕಾಯಂ ನೌಕರರಾಗುತ್ತಾರೆ. ವಿವಿಧ ಸೌಲಭ್ಯ ಸಿಗುತ್ತವೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ಮತ್ತು ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹೋರಾಟ ಮೂಲಕ ಬೇಡಿಕೆ ಈಡೇರಿಸಿಕೊಳ್ಳಲು ಒಗ್ಗೂಡಬೇಕು’ ಎಂದು ಕರೆ ನೀಡಿದರು.

‘ಬಿಸಿಯೂಟ ನೌಕರರ ಜೀವನ ಸಾಗಿಸಲು ಕನಿಷ್ಠ ಸಂಬಳ ಜಾರಿ ಮಾಡುವಂತೆ ಆಗ್ರಹಿಸಿ ಅನೇಕ ಹೋರಾಟ ಮಾಡಿದರೂ ಆಡಳಿತ ನಡೆಸುತ್ತಿರುವ ಸರ್ಕಾರ ಸ್ಪಂದಿಸಿಲ್ಲ. ಈ ಕುರಿತು ಶಿಕ್ಷಣ ಸಚಿವ ತನ್ವೀರ್ ಶೇಠ್ ಅವರಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಅವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕದ ಕಾರಣ, ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಕನಿಷ್ಠ ವೇತನ ಜಾರಿ ಘೋಷಿಸಲು ಆಗಲಿಲ್ಲ. ಇದಕ್ಕೆ ಶಿಕ್ಷಣ ಸಚಿವರ ನಿರ್ಲಕ್ಷ ಕಾರಣ’ ಎಂದು ಅವರು ಆರೋಪಿಸಿದರು.

ADVERTISEMENT

‘ಬಿಸಿಯೂಟ ನೌಕರರಿಗೆ ನಿವೃತ್ತಿ ಯೋಜನೆ ಜಾರಿಗೆ ತರಬೇಕು. ಇದರಿಂದ ಅವರು ನಿವೃತ್ತಿ ನಂತರ ಜೀವನ ಸರಳವಾಗಿ ನಡೆಸಲು ಅನುಕೂಲ ವಾಗಲಿದ್ದು, ಈ ಎಲ್ಲಾ ಬೇಡಿಕೆ ಈಡೇರಿಸಲು ಹೋರಾಟಕ್ಕೆ ಒಗ್ಗಟ್ಟಾಗಿ ಮುಂದೆ ಬರಬೇಕು’ ಎಂದು ಹೇಳಿದರು.

ಐಟಿಯುಸಿ ರಾಜ್ಯ ಸಮಿತಿ ಉಪಾಧ್ಯಕ್ಷ ಪ್ರಭುದೇವ ಯಳಸಂಗಿ, ಬಿಸಿಯೂಟ ನೌಕರರ ಜಿಲ್ಲಾ ಘಟಕ ಅಧ್ಯಕ್ಷೆ ಕಲ್ಪನಾ ಗುರಸಣಗಿ, ಅಂಗನವಾಡಿ ಕಾರ್ಯಕರ್ತೆ ನಾಗಮ್ಮ ಗುಡ್ಡು, ಸೊಲಪಣ್ಣ ಸಗರ, ಶಿವಾನಂದ ಸ್ವಾಮಿ, ಪ್ರಕಾಶ ಆಲಹಾಳ, ವಿದ್ಯಾಧರ ಸಾಹುಕಾರ್, ದೇವಿಂದ್ರ ಪೂಜಾರಿ, ಶ್ರೀದೇವಿ ಕೂಡಲಗಿ ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.