ADVERTISEMENT

ಪರವಾನಗಿ ಇರುವರಿಂದ ಕೊಳವೆ ಬಾವಿ ಕೊರೆಸಿ

​ಪ್ರಜಾವಾಣಿ ವಾರ್ತೆ
Published 5 ಮೇ 2016, 10:32 IST
Last Updated 5 ಮೇ 2016, 10:32 IST

ಯಾದಗಿರಿ: ಅಧಿಕೃತ ಪರವಾನಗಿ ಹೊಂದಿರುವ ಬೋರವೇಲ್ ಕಂಪನಿಗಳಿಂದ ಮಾತ್ರ ಕುಡಿಯುವ ನೀರಿನ ಕೊಳವೆ ಬಾವಿಗಳನ್ನು ಕೊರೆಸಬೇಕು ಎಂದು ಕಲಬುರ್ಗಿ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್‌  ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬರ ಪರಿಹಾರ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಅಂತರ್ಜಲ ಕಾಯ್ದೆ ಅನ್ವಯ ಕೊಳವೆ ಬಾವಿ ಕೊರೆಯುವ ಕಂಪೆನಿಗಳು ಕಡ್ಡಾಯವಾಗಿ ಅಧಿಕೃತ ಲೈಸನ್ಸ್ ಹೊಂದಿರಬೇಕು.

ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನಿಗಾವಹಿಸಿ ಕೊಳವೆ ಬಾವಿ ಕೊರೆಯಿಸಲು ಮಾರ್ಗಸೂಚಿ ಮತ್ತು ನಿಯಮಾವಳಿ ಅನ್ವಯ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಓವರ್ ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಲು ಮತ್ತು ಹಳೆಯ ಟ್ಯಾಂಕ್‌ಗಳ ದುರಸ್ತಿಗೆ ಕ್ರಮ ಕೈಗೊಂಡು ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸಲು ಕ್ರಮಕೈಗೊಳ್ಳಬೇಕು. ಜೊತೆಗೆ ನೂತನ ಮಾದರಿಯ ಕಡಿಮೆ ವೆಚ್ಚದ ಶುದ್ಧ ನೀರಿನ ಘಟಕಗಳ ಸ್ಥಾಪನೆಗೆ ಜಲ ಅಮೃತ ಎನ್ನುವ ಯೋಜನೆ ಜಾರಿಯಲ್ಲಿದೆ. ಈ ಯೋಜನೆಗಾಗಿ ಪ್ರತಿ ಜಿಲ್ಲೆಗೆ ₹ 2ಕೋಟಿ  ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆಯಬೇಕು ಎಂದರು.

ಹೈದರಾಬಾದ್ ಕರ್ನಾಟಕ  ಪ್ರದೇಶ ಅಭಿವೃದ್ಧಿ ಮಂಡಳಿಯ ಕಾಮಗಾರಿಗಳ  ಅನುದಾನ ಸದುಪಯೋಗ ಮಾಡಿಕೊಂಡು ಗುರಿಗೆ ತಕ್ಕಂತೆ ಸಾಧನೆ ಮಾಡಬೇಕು.  ಕಟ್ಟಡ ಕಾಮಗಾರಿ ಹೊರತುಪಡಿಸಿ ಯಾವ ಕಾರಣಕ್ಕೂ ಈ ಸಾಲಿನ ಇತರೆ ಕಾಮಗಾರಿಗಳನ್ನು ನೀಡದಿರಲು ಸಲಹೆ ನೀಡಿದ ಅವರು ಒಟ್ಟಾರೆ ಅನುದಾನ ಸದುಪಯೋಗ ಅಗುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಮನೋಜ್ ಜೈನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ವಿಕಾಸ್ ಕಿಶೋರ್ ಸುರಾಳಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.