ADVERTISEMENT

ಪಾಳು ಬಿದ್ದ ಕಕ್ಕೇರಾ ಪ್ರವಾಸಿ ಮಂದಿರ

ಪ್ರವಾಸಿ ಮಂದಿರ ದುರಸ್ತಿಗೊಳಿಸಲು ಗ್ರಾಮಸ್ಥರ ಒತ್ತಾಯ

ಮಹಾಂತೇಶ ಸಿ.ಹೊಗರಿ
Published 7 ಮಾರ್ಚ್ 2017, 6:35 IST
Last Updated 7 ಮಾರ್ಚ್ 2017, 6:35 IST
ಕಕ್ಕೇರಾ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರ ಪ್ರವಾಸಿ ಮಂದಿರ (ಅತಿಥಿಗೃಹ) ಕೃಷ್ಣಾ ಜಲ ನಿಗಮ ಅಧಿಕಾರಿಗಳ ನಿರ್ಲಕ್ಷದಿಂದ ಪಾಳು ಬಿದ್ದಿದೆ.
1940ರಲ್ಲಿ ನಿರ್ಮಿಸಲಾಗಿರುವ ಈ ಪ್ರವಾಸಿಮಂದಿರಕ್ಕೆ ಯಾವ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿಲ್ಲ. ಪ್ರವಾಸಿಮಂದಿರದಲ್ಲಿ ಒಟ್ಟು 3 ಕೋಣೆಗಳಿದ್ದು, ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಕಟ್ಟಡ ಪಾಳುಬೀಳುವ ಹಂತದಲ್ಲಿದೆ.  
 
ಪ್ರವಾಸಿ ಮಂದಿರಕ್ಕೆ ಸುತ್ತಲೂ ಕಾಂಪೌಂಡ್ ವ್ಯವಸ್ಥೆ ಇಲ್ಲ. ಬರಿ ಮುಳ್ಳು ಕಂಟಿಗಳು ಬೆಳೆದಿದ್ದು, ಪ್ರವಾಸಿ ಮಂದಿರದ ಬಾಗಿಲು ಸಂಪೂರ್ಣವಾಗಿ ಹಾಳಾಗಿದೆ. ಹಾಗೆ ಕಟ್ಟಡಕ್ಕೆ ಕಲ್ಪಿಸಲಾಗಿರುವ  ವಿದ್ಯುತ್ ತಂತಿಗಳು ಸಂಪೂರ್ಣವಾಗಿ ಹಾಳಾಗಿದ್ದು, ವಿದ್ಯುತ್‌ ಸೌಕರ್ಯವು ಇಲ್ಲದಂತಾಗಿದೆ. 
 
ಪ್ರವಾಸಿ ಮಂದಿರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. 1982ರಲ್ಲಿ ನೂತನ ಕಾಲುವೆ ನಿರ್ಮಾಣದ ವೇಳೆ ಕಾಮಗಾರಿ ಪರಿಶೀಲನೆಗೆ ಬಂದಿದ್ದ ಮಲಪ್ರಭ ಯೋಜನೆಯ ಅಧಿಕಾರಿಗಳು ಇಲ್ಲಿ ವಾಸ ಮಾಡಿ ಹೋಗಿದ್ದಾರೆ. ತದ ನಂತರ ಯಾವ ಅಧಿಕಾರಿಗಳು  ಇಲ್ಲಿ ವಾಸ್ತವ್ಯ ಹೂಡಿಲ್ಲ ಎಂದು ಹೇಳುತ್ತಾರೆ ಸಂಗಪ್ಪ.

ಪ್ರವಾಸಿ ಮಂದಿರದ ಆವರಣದಲ್ಲಿ ಸಾರ್ವಜನಿಕರು ಜಾನುವಾರುಗಳನ್ನು ಕಟ್ಟುತ್ತಿದ್ದಾರೆ. ಇಲ್ಲಿಯೇ ಖಾಸಗಿ ಶಾಲೆಯೊಂದನ್ನು ನಡೆಸಲಾಗುತ್ತಿದೆ. ಶಾಲೆಯ ಸಿಬ್ಬಂದಿಗೆ ಪ್ರವಾಸಿಮಂದಿರವನ್ನು ಬಾಡಿಗೆಗೆ ನೀಡಲಾಗಿದ್ದು, ಶಿಕ್ಷಕರೊಬ್ಬರು ಅಲ್ಲಿ ವಾಸವಾಗಿದ್ದಾರೆ.
 
* ನಾನು ಹೊಸದಾಗಿ ಈ ಕಚೇರಿಗೆ ವರ್ಗವಾಗಿ ಬಂದಿದ್ದೇನೆ. ನನಗೆ ಸರಿಯಾದ ಮಾಹಿತಿ ತಿಳಿದಿಲ್ಲ. ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು.
-ರಬ್ಬಾನಿ, ಕಿರಿಯ ಎಂಜಿನಿಯರ್
 
* ಪ್ರವಾಸಿ ಮಂದಿರದ ಸುತ್ತ ಕಾಂಪೌಂಡ್‌ ನಿರ್ಮಿಸಲು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.
-ಲಕ್ಕಪ್ಪ ಮೇಲಾ, ಬಾಲ ವಿಕಾಸ ಅಕಾಡೆಮಿ ಸದಸ್ಯ,
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.