ADVERTISEMENT

ಬಡ ವಿದ್ಯಾರ್ಥಿಗಳ ಆಸರೆ ಸರ್ಕಾರಿ ಕಾಲೇಜು

ಮಲ್ಲೇಶ್ ನಾಯಕನಹಟ್ಟಿ
Published 22 ಮೇ 2017, 6:02 IST
Last Updated 22 ಮೇ 2017, 6:02 IST
ಗಣಕಯಂತ್ರ  ಪ್ರಯೋಗಾಲಯದಲ್ಲಿ ಅಧ್ಯಯನ ನಿರತ ವಿದ್ಯಾರ್ಥಿಗಳು
ಗಣಕಯಂತ್ರ ಪ್ರಯೋಗಾಲಯದಲ್ಲಿ ಅಧ್ಯಯನ ನಿರತ ವಿದ್ಯಾರ್ಥಿಗಳು   

ಯಾದಗಿರಿ: ಪ್ರಾಥಮಿಕ ಮತ್ತು ಪ್ರೌಢಶಾಲೆ, ದ್ವಿತೀಯ ಪಿಯುಸಿ ವಿದ್ಯಾಭ್ಯಾಸವನ್ನು ಸರ್ಕಾರಿ ಶಾಲಾ, ಕಾಲೇಜಿನಲ್ಲಿಯೇ ಪೂರೈಸಿದ ಬಡ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದತ್ತ ಮುಖಮಾಡಲು ಹಿಂಜರಿಯುತ್ತಾರೆ. ವಿದ್ಯಾರ್ಥಿಗಳ ಹಿಂಜರಿಕೆಗೆ ಆರ್ಥಿಕ ಸಂಕಷ್ಟದ ಜತೆಗೆ ನಾನಾ ಕಾರಣಗಳಿರುತ್ತವೆ.

ಅಂತಹ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬಿ ಉನ್ನತ ವ್ಯಾಸಂಗ ನೀಡುತ್ತಾ ಬಂದಿರುವ ನಗರದ ಸರ್ಕಾರಿ ಪದವಿ ಕಾಲೇಜು ಈಗ ಶೈಕ್ಷಣಿಕವಾಗಿ ಸಾಕಷ್ಟು ಸುಧಾರಣೆಗೊಂಡಿದೆ. ಪ್ರತಿವರ್ಷ ಶೇ100ರಷ್ಟು ಫಲಿತಾಂಶ ಸಾಧನೆಯನ್ನು ದಾಖಲಿಸಿದೆ. ಉನ್ನತ ವ್ಯಾಸಂಗ ಬಯಸುವ ಬಡ ವಿದ್ಯಾರ್ಥಿಗಳಿಗೆ ಈ ಕಾಲೇಜು ಆಧಾರವಾಗಿದೆ.

1979ರಲ್ಲಿ ಕಾಲೇಜು ಸ್ಥಾಪನೆಯಾಗಿದೆ. ಒಟ್ಟು 12 ಎಕರೆ ಪ್ರದೇಶದಲ್ಲಿ 45 ಕೋಣೆಗಳನ್ನು ಒಳಗೊಂಡಿರುವ ಕಾಲೇಜಿನಲ್ಲಿ ಒಟ್ಟು 1,800 ವಿದ್ಯಾರ್ಥಿಗಳು ಶೈಕ್ಷಣಿಕ ಭವಿಷ್ಯ ಕಾಣುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ಬೆಳಗಲು 126 ಮಂದಿ ಉಪನ್ಯಾಸಕ ಸಿಬ್ಬಂದಿ ನಿರಂತರ ಶ್ರಮಿಸುತ್ತಿದ್ದಾರೆ.

ADVERTISEMENT

ಇಲ್ಲಿ ಓದಿರುವ ಅನೇಕರು ರಾಜ್ಯದ ಉನ್ನತ ಅಧಿಕಾರಿ, ರಾಜಕಾರಣಿಗಳಾಗಿದ್ದಾರೆ. ಖಾಸಗಿ ಪದವಿ ಕಾಲೇಜುಗಳಿಂದ ಸಾಕಷ್ಟು ಪೈಪೋಟಿ ಇರುವ ಹಿನ್ನೆಲೆಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಶೈಕ್ಷಣಿಕ ಗುಣಮಟ್ಟದ ಕಡೆ ಗಮನ ಕೇಂದ್ರೀಕರಿಸಿರುವ ಪರಿಣಾಮ ಇದುವರೆಗೂ ಕಾಲೇಜು ಒಟ್ಟು 8 ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. 4 ಮಂದಿ ವಿದ್ಯಾರ್ಥಿಗಳು 2ನೇ ರ್‍್ಯಾಂಕ್‌ಗಳಿಸಿರುವ ಹೆಮ್ಮೆ ಸರ್ಕಾರಿ ಪದವಿ ಕಾಲೇಜಿಗೆ ಸಲ್ಲುತ್ತದೆ.

ಗುಲ್ಬರ್ಗಾ ವಿಶ್ವವಿದ್ಯಾಲಯ ನಿಯಮಗಳಂತೆ ಸೆಮಿಸ್ಟರ್‌ ಪದ್ಧತಿಯಲ್ಲಿ ಹಲವು ವಿಭಾಗ ಸಂಯೋಜನೆಗಳನ್ನು ಒಳಗೊಂಡಿರುವುದು ಗ್ರಾಮೀಣ ಮತ್ತು ನಗರದ ಬಡ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ.

ಪ್ರಸ್ತುತ ಶಿಕ್ಷಣಕ್ಕೆ ಎಲ್ಲಿಲ್ಲದ ಮಹತ್ವ ಬಂದಿದೆ. ಆದ್ದರಿಂದಲೇ ಖಾಸಗಿ ಕಾಲೇಜುಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ವಿದ್ಯಾರ್ಥಿಗಳ ಆಕರ್ಷಣೆಗಾಗಿ ನಾನಾ ಕಸರತ್ತು ನಡೆಸಿ ಪ್ರವೇಶಾತಿ ಪಡೆದುಕೊಳ್ಳುತ್ತಿವೆ. ಇದರ ಮಧ್ಯೆ ಸರ್ಕಾರಿ ಪದವಿ ಕಾಲೇಜು ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಂಡು ಖ್ಯಾತಿಗಳಿಸಿದೆ.

ವಿದ್ಯಾರ್ಥಿಗಳಿಗೆ ಅಗತ್ಯ ಮೂಲ ಸೌಲಭ್ಯಗಳು
‘ಇತ್ತೀಚೆಗೆ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿರುವ ಹವಾನಿಯಂತ್ರಿತ ಗಣಕಯಂತ್ರ ಪ್ರಯೋಗಾಲಯ ಹಾಗೂ ರಾಸಾಯನಿಕ, ಭೌತಶಾಸ್ತ್ರದ ಪ್ರಯೋಗಾಲಯಗಳು ಗಮನ ಸೆಳೆಯುತ್ತಿವೆ. ಗ್ರಂಥಾಲಯ, ಕ್ಯಾಂಟೀನ್ ಹಾಗೂ ವಸತಿ ನಿಲಯ ನಿರ್ಮಾಣ ಹಂತದಲ್ಲಿವೆ’ ಎಂದು ಕಾಲೇಜಿನ ಪ್ರಾಚಾರ್ಯ ಸುಭಾಶ್ಚಂದ್ರ ಕೌಲಗಿ ಹೇಳುತ್ತಾರೆ.

ವಿವಿಧ ಸೌಲಭ್ಯಗಳು
*ಗ್ರಂಥಾಲಯ–ಪ್ರಯೋಗಾಲಯ ಸೌಲಭ್ಯಗಳು
*ಉದ್ಯೋಗ ಮೇಳ ಆಯೋಜನೆ
*ಕೌಶಲ ತರಬೇತಿ
*ಎಲ್ಲಾ ಪಂಗಡದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ
*ಸ್ಮಾರ್ಟ್ ಕ್ಲಾಸ್, ಇ–ಕಾಂಟೆಂಟ್, ವೈಫೈ ಸೌಲಭ್ಯ
*ಎನ್‌ಸಿಸಿ, ಎನ್‌ಎಸ್‌ಎಸ್, ರೋವರ್ಸ್ ಅಂಡ್‌ ರೇಂಜರ್ಸ್
*ಕ್ರೀಡಾ–ಸಾಂಸ್ಕೃತಿಕ ಚಟುವಟಿಕೆ

ವಿಭಾಗ–ಸಂಯೋಜನೆ
ಕಲಾ ವಿಭಾಗದ ಬಿ.ಎಯಲ್ಲಿ ಎಚ್‌ಪಿಎಸ್, ಎಚ್‌ಪಿಇ, ಎಚ್‌ಪಿಕೆ, ಎಚ್‌ಪಿಎಚ್, ಎಚ್‌ಪಿಯು, ಎಚ್‌ಇಎಸ್, ಎಚ್‌ಇಸಿ, ಸಿಇಡಿಎಸ್, ಎಚ್ಇಆರ್‌ಡಿ, ಎಚ್‌ಪಿಇಇ, ಪಿಸಿಡಿಎಸ್ ಸಂಯೋಜನೆಗಳಿವೆ.

ವಿಜ್ಞಾನ ವಿಭಾಗದ ಬಿಎಸ್‌ಸಿಯಲ್ಲಿ ಪಿಸಿಎಂ, ಪಿಎಂಸಿಎಸ್, ಸಿಬಿಝೆಡ್, ಪಿಎಂಇ, ಪಿಎಂಬಿಎಸ್, ಸಿಇಡಿಎಸ್ ಹಾಗೂ ಬಿಸಿಎ ಹಾಗೂ ವಾಣಿಜ್ಯ ವಿಭಾಗದಲ್ಲಿ ಬಿ.ಕಾಂ ಮತ್ತು ನಿರ್ವಹಣಾ ವಿಭಾಗದಲ್ಲಿ ಬಿಬಿಎಂ ಸಂಯೋಜನೆಗಳಿವೆ. ಇಲ್ಲಿ ಕನ್ನಡ, ಇಂಗ್ಲಿಷ್‌, ಉರ್ದು, ಹಿಂದಿ ಯಾವುದಾದರೂ ಎರಡು ಭಾಷೆ ಆಯ್ಕೆಗೆ ಅವಕಾಶ ಇರುತ್ತದೆ.

ಗುಣಮಟ್ಟವನ್ನು ಕಾಯ್ದುಕೊಂಡು ಕಾಲೇಜು ಖ್ಯಾತಿಗಳಿಸಿದೆ. ಸರ್ಕಾರಿ ಕಾಲೇಜು ಎಂದೊಡನೆ ಮೂಗು ಮುರಿಯುವ ವಿದ್ಯಾರ್ಥಿಗಳೂ ಈಗ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಕಾಲೇಜು ಪ್ರಗತಿ ಸಾಧಿಸಿದೆ.

ಗುಣಮಟ್ಟದ ಶಿಕ್ಷಣ ಸೌಲಭ್ಯ
* 126  ಮಂದಿ ಕಾಲೇಜಿನಲ್ಲಿರುವ ಒಟ್ಟು ಉಪನ್ಯಾಸಕರುಸುಸಜ್ಜಿತ ಪ್ರಯೋಗಾಲಯ

* ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಹವಾನಿಯಂತ್ರಿತ ಗಣಕಯಂತ್ರ ಪ್ರಯೋಗಾಲಯ ಇದೆ

* 12ಎಕರೆ ಪ್ರದೇಶದಲ್ಲಿ 45 ಕೋಣೆಗಳು

* * 

ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸುವುದೇ ನಮ್ಮ ಕರ್ತವ್ಯ ಆಗಿರುತ್ತದೆ. ಗುಣಮಟ್ಟದ ಬೋಧನೆಯಲ್ಲಿ ರಾಜಿಯೇ ಇಲ್ಲ
ಸುಭಾಶ್ಚಂದ್ರ ಕೌಲಗಿ
ಪ್ರಾಚಾರ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.