ADVERTISEMENT

ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಿ: ಕಾಡ್ಲೂರು

​ಪ್ರಜಾವಾಣಿ ವಾರ್ತೆ
Published 2 ಜನವರಿ 2017, 9:47 IST
Last Updated 2 ಜನವರಿ 2017, 9:47 IST

ಸುರಪುರ: ‘ದೇಶದ ಭವಿಷ್ಯ ಉಜ್ವಲವಾಗಬೇಕಾದರೆ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಸತ್ಪ್ರಜೆಗಳನ್ನು ರೂಪಿಸುವ ಅಗತ್ಯವಿದೆ. ಈ ಮಹತ್ತರ ಕೆಲಸ ಶಿಕ್ಷಣ ಇಲಾಖೆ ಮೇಲಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಜವಾಬ್ದಾರಿ ಗುರುತರವಾಗಿದೆ. ಖಾಸಗಿ ಸಂಸ್ಥೆಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು ಸಲಹೆ ನೀಡಿದರು.

ರಂಗಂಪೇಟೆಯ ಸುದೀಪ ಶಾಲೆಯಲ್ಲಿ ಭಾನುವಾರ ನವ ವರ್ಷಾಚರಣೆಯ ನಿಮಿತ್ತ ಏರ್ಪಡಿಸಿದ್ದ ‘ರೈತರ ಹಬ್ಬ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.‘ಶಿಕ್ಷಣದ ಜೊತೆಗೆ ಮಕ್ಕಳಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ಅವಶ್ಯಕತೆ ಇದೆ. ಸುಸಜ್ಜಿತವಾದ ಕೋಣೆ, ಆಟದ ಮೈದಾನ, ಶೌಚಾಲಯ, ಕುಡಿಯುವ ನೀರು ಇತರ ಸೌಲಭ್ಯಗಳನ್ನು ಕಡ್ಡಾಯವಾಗಿ ಒದಗಿಸಬೇಕೆನ್ನುವುದು ಇಲಾಖೆಯ ನಿಯಮ. ಖಾಸಗಿ ಸಂಸ್ಥೆಗಳು ಈ ನಿಯಮವನ್ನು ಪಾಲಿಸಬೇಕು’ ಎಂದು ತಿಳಿಸಿದರು.

‘ರೈತರು ದೇಶದ ಬೆನ್ನೆಲುಬು. ನಮಗೆಲ್ಲಾ ಅನ್ನದಾತರ ಅವರನ್ನು ಗುರುತಿಸುವ ಕೆಲಸವಾಗಬೇಕು. ಸಾಧನೆ ಮಾಡಿದ ರೈತರನ್ನು ಪುರಸ್ಕರಿಸಿ ಪ್ರೋತ್ಸಾಹಿಸಿದರೆ ಮತ್ತೊಬ್ಬರಿಗೆ ಪ್ರೇರಣೆ ದೊರಕುತ್ತದೆ’ ಎಂದು ಅಭಿಪ್ರಾಯಪಟ್ಟರು.

ಲಕ್ಷ್ಮೀಪುರದ ಬಸವಲಿಂಗ ದೇವರು ಸಾನಿಧ್ಯ ವಹಿಸಿದ್ದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಮಿತಿ ಕಾರ್ಯದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ, ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷ ಸಾಯಬಣ್ಣ ಪುರ್ಲೆ ಮಾತನಾಡಿದರು.

ರೈತ ಹೋರಾಟಗಾರ್ತಿ ನಾಗರತ್ನಾ ಪಾಟೀಲ, ತೋಟಗಾರಿಕೆ ಕೃಷಿಯಲ್ಲಿ ಸಾಧನೆ ಮಾಡಿರುವ ಸುಧಾ ಕುಲಕರ್ಣಿ ಹೊಸಗೇರಿ, ಹೈನುಗಾರಿಕೆ ಮಾಡಿರುವ ಎಂಜನಿಯರ್‌ ಪದವೀಧರ ಮರಿಗೌಡ ಯಕ್ಚಿಂತಿ, ಎರೆಹುಳು ಕೃಷಿಕ ಹಣಮಂತ್ರಾಯ ಕೊಂಗಂಡಿ, ವೀರಶೈವ ಸಮಿತಿ ತಾಲ್ಲೂಕು ಘಟಕದ ಕಾರ್ಯದರ್ಶಿ ಶಿವಶರಣಪ್ಪ ಹೆಡಗಿನಾಳ, ಕಾಂಗ್ರೆಸ್ ಯುವ ಮುಖಂಡ ಅನಿಲ ಖಂಡಾರೆ, ಶಿಕ್ಷಕ ಕಲ್ಯಾಣಗಿರಿ ಜಾಧವ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.