ADVERTISEMENT

‘ಮಹಾದೇವಪ್ಪ ಚಟ್ಟಿ ರುಕ್ಮಾಪುರದ ಹೆಮ್ಮೆ’

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 10:37 IST
Last Updated 25 ಜುಲೈ 2017, 10:37 IST

ಸುರಪುರ: ‘ರುಕ್ಮಾಪುರ ಗ್ರಾಮ ರಾಜ್ಯಕ್ಕೆ ಹಲವು ಪ್ರತಿಭಾನ್ವಿತರನ್ನು ನೀಡಿದೆ. ಅದರಲ್ಲಿ ಡಾ. ಮಹಾದೇವಪ್ಪ ಚಟ್ಟಿ ಕಿರೀಟಪ್ರಾಯರು. 12 ದೇಶಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು ರುಕ್ಮಾಪುರ ಹೆಮ್ಮೆಯ ಪುತ್ರ’ ಎಂದು ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಎನ್‌. ಭಂಡಾರೆ ಗುಣಗಾನ ಮಾಡಿದರು.

ತಾಲ್ಲೂಕಿನ ರುಕ್ಮಾಪುರ ಗ್ರಾಮದ ಭಂಡಾರೆ ತೋಟದಲ್ಲಿ ಸೋಮವಾರ ಗ್ರಾಮ  ಸುಧಾರಣಾ ಸಮಿತಿ ವತಿಯಿಂದ  ಡಾ. ಮಹಾದೇವಪ್ಪ ಚಟ್ಟಿ ಮತ್ತು ಡಾ. ಚಂದ್ರಶೇಖರ ಚಟ್ಟಿ ದಂಪತಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಡಾ. ಮಹಾದೇವಪ್ಪ ಚಟ್ಟಿ ಅವರು ಈಗ ನವದೆಹಲಿಯಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್‌ ಸೆಂಟರ್‌ನ (ಐಸಿಎಆರ್) ಸಹಾಯಕ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದ ಕೃಷಿ ಹಾಗೂ ಪಶುಸಂಗೋಪನೆಯ 73 ವಿಶ್ವವಿದ್ಯಾಲಯಗಳು ಇವರ ಉಸ್ತುವಾರಿಯಲ್ಲಿ ಬರುತ್ತವೆ’ ಎಂದು ವಿವರಿಸಿದರು.

ADVERTISEMENT

‘ಈ ಮುಂಚೆ ಧಾರವಾಡದ ಕೃಷಿ ಕಾಲೇಜಿನ ಪ್ರಾಚಾರ್ಯರಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ. ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಅನೇಕ ತಳಿಗಳ ಸಂಶೋಧನೆ ಮಾಡಿದ್ದಾರೆ. ದೇಶ ವಿದೇಶದಲ್ಲಿ ಅವರು ಮಾನ್ಯರಾಗಿದ್ದಾರೆ. ಅನೇಕ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಮಾರ್ಗದರ್ಶನ ನೀಡಿದ್ದಾರೆ’ ಎಂದು ತಿಳಿಸಿದರು.

‘ಡಾ. ಚಂದ್ರಶೇಖರ ಚಟ್ಟಿ ರಾಯಚೂರಿನಲ್ಲಿ ಖಾಸಗಿ ವೈದ್ಯರಾಗಿದ್ದಾರೆ. ಬಡವರಿಗೆ  ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಾರೆ. ಹಗಲಿರುಳು ಬಡ ರೋಗಿಗಳ ಸೇವೆ ಮಾಡುತ್ತಾರೆ. ಇವರಿಬ್ಬರು ರುಕ್ಮಾಪುರದ ಅನರ್ಘ ರತ್ನಗಳು’ ಎಂದರು.

ಸಮಿತಿಯ ಅಧ್ಯಕ್ಷ ನರಸಿಂಹರಾವ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸಂಗಣ್ಣ ಸಿರೇಗೋಳ ಸ್ವಾಗತಿಸಿದರು. ಕೊಟ್ರಪ್ಪ ಹಿರೇಗೌಡ್ರ , ಆನಂದ ಗೋಗಿ , ಭೀಮಣ್ಣ ಆವಂಟಿ , ಶಂಕ್ರಪ್ಪ ಭಾವಿ. ವಿಶ್ವನಾಥ , ಹಂಪಣ್ಣ ಚಟ್ಟಿ, ಸಂಪ್ರೀತ್  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.