ADVERTISEMENT

ಮಾನವ ಕಳ್ಳಸಾಗಣೆ: ಜಾಗೃತಿ ಇರಲಿ

ಹಿರಿಯ ಸಿವಿಲ್‌ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸಡೆ ಸಲಹೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 11:30 IST
Last Updated 16 ಜೂನ್ 2018, 11:30 IST
ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಮಾನವ ಕಳ್ಳಸಾಗಣೆ ತಡೆಗಟ್ಟುವ ಕುರಿತು ಜಾಗೃತಿ’ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸಡೆ ಮಾತನಾಡಿದರು
ಯಾದಗಿರಿ ತಾಲ್ಲೂಕಿನ ಅಬ್ಬೆತುಮಕೂರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಮಾನವ ಕಳ್ಳಸಾಗಣೆ ತಡೆಗಟ್ಟುವ ಕುರಿತು ಜಾಗೃತಿ’ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸಡೆ ಮಾತನಾಡಿದರು   

ಯಾದಗಿರಿ: ದೇಶದಲ್ಲಿ ಮಾನವ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಾಗುತ್ತಿದ್ದು, 2016ನೇ ಸಾಲಿನಲ್ಲಿ ದೇಶದಲ್ಲಿ ಎಂಟು ಸಾವಿರ ಮಾನವ ಕಳ್ಳಸಾಗಣೆ ಪ್ರಕರಣಗಳು ದಾಖಲಾಗಿವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸಡೆ ಹೇಳಿದರು.

ತಾಲ್ಲೂಕಿನ ಅಬ್ಬೆತುಮಕೂರ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಮಾನವ ಕಳ್ಳಸಾಗಣೆ ತಡೆಗಟ್ಟುವ ಕುರಿತು ಜಾಗೃತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಾನವ ಕಳ್ಳಸಾಗಣೆಯಲ್ಲಿ ಹೆಚ್ಚಾಗಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಗುರಿಯಾಗಿಟ್ಟುಕೊಂಡು ಕಳ್ಳತನ ಮಾಡಿ ನಂತರ ಲೈಂಗಿಕ ಶೋಷಣೆ ಹಾಗೂ ಗುಲಾಮರನ್ನಾಗಿ ಬಳಸಲಾಗುತ್ತದೆ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಮಕ್ಕಳ ಸಾಗಣೆ ತಡೆಗಟ್ಟುವಲ್ಲಿ ಎಲ್ಲರೂ  ಜಾಗೃತರಾಗಬೇಕು’ ಎಂದರು.

ADVERTISEMENT

ಪ್ರತಿಯೊಬ್ಬರು ಕಾನೂನು ಅರಿವು ಹೊಂದಿರಬೇಕು. ಯಾರು ಕಾನೂನು ಪಾಲನೆ ಮಾಡುತ್ತಾರೆ ಅವರಿಗೆ ಕಾನೂನು ಸದಾ ರಕ್ಷಾ ಕವಚದಂತೆ ನಿಲ್ಲುತ್ತದೆ. ಎಲ್ಲರೂ ಕಾನೂನು ಗೌರವಿಸುವುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನಿನಿಂದ ಯಾರೂ ವಂಚಿತರಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಕಾನೂನು ಸೇವಾ  ಪ್ರಾಧಿಕಾರ  ಹಲವಾರು ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿದೆ. ಇದರ ಸದ್ಭಳಕೆಯನ್ನು ಎಲ್ಲರೂ ಪಡೆದು ಕೊಳ್ಳಬೇಕು ಎಂದು ಹೇಳಿದರು.

ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ ರಾಧಾ ಜೆ. ಮಣ್ಣೂರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಭೀಮರಾಯ ಕಿಲ್ಲನಕೇರಾ, ಪೊಲೀಸ್ ಅಧಿಕಾರಿ ಪಾಂಡುರಂಗ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಸಿ.ಎಸ್. ಮಾಲೀ ಪಾಟೀಲ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ನಿರಂಜನ ಯರಗೋಳ, ಸೈಯದ್ ರುಕಿಯಾ ಕಾತೂನ ಇದ್ದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಹಾಗೂ ಸಿಡಿಪಿಒ ಇಲಾಖೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.